ಶ್ರೀಮಂಗಲ, ಏ. 20: ದಕ್ಷಿಣ ಕೊಡಗಿನ ಹಲವೆಡೆ ನಾಲ್ಕೈದು ದಿನಗಳ ಹಿಂದೆ ಸುರಿದ ಅಲ್ಪ ಪ್ರಮಾಣದ ಮಳೆಯಿಂದ ಕಾಫಿ ಹೂವು ಅರಳುವ ಮುನ್ನವೇ ಬಾಡಿ ಹೋಗುತ್ತಿದ್ದು, ಇದರಿಂದ ಮುಂಬರುವ ಕಾಫಿ ಫಸಲಿನ ಮೇಲೆ ದುಷ್ಪರಿಣಾಮ ಬೀರಲಿದೆ. ಕಾಫಿ ಬೆಳೆಯನ್ನೇ ಅವಲಂಭಿಸಿರುವ ಬೆಳೆಗಾರರು ಇದರಿಂದ ಚಿಂತಾಕ್ರಾಂತರಾಗಿದ್ದಾರೆ.
ಕಳೆದ ಐದು ದಿನಗಳ ಹಿಂದೆ ದಕ್ಷಿಣ ಕೊಡಗಿನ ಹಲವಾರು ಭಾಗಕ್ಕೆ ಮಳೆಯಾಗಿತ್ತು. ಇದರಲ್ಲಿ ಕೆಲವು ಭಾಗಕ್ಕೆ ಅತ್ಯಲ್ಪ ಮಳೆಯಾಗಿತ್ತು. ಕಾಫಿ ಹೂವು ಅರಳಲು ಸಾಕಾಗುವಷ್ಟು ಮಳೆ ಸುರಿಯದೇ ಇರುವ ಭಾಗಗಳಲ್ಲಿ ಕಾಫಿ ಮೊಗ್ಗು ಸಂಪೂರ್ಣ ಅರಳಲು ಸಾಧ್ಯವಾಗದೆ ಮೊಗ್ಗಿನಲ್ಲಿಯೇ ಕೆಂಪು ಬಣ್ಣಕ್ಕೆ ತಿರುಗುವ ಮೂಲಕ ಮುಂದಿನ ಫಸಲಿನ ಮೇಲೆ ದುಷ್ಪರಿಣಾಮ ಬೀರಿದೆ.
ಜಿಲ್ಲೆಯ ಹಲವೆಡೆ ಕೃತಕ ನೀರು ಹಾಯಿಸುವ ಮೂಲಕ ಕಾಫಿ ಹೂವು ಅರಳಿಸುವ ಪ್ರಕ್ರಿಯೆಯನ್ನು ಬೆಳೆಗಾರರು ಮಾಡುತ್ತಾರೆ. ಆದರೆ ಇದರ ಅನುಕೂಲ ಇಲ್ಲದ ಬೆಳೆಗಾರರು ಮಳೆಯನ್ನೇ ಅವಲಂಭಿಸಬೇಕಾಗಿದೆ. ಮಳೆಯನ್ನೇ ಅವಲಂಭಿಸಿರುವ ಬೆಳೆಗಾರರಿಗೆ ಈ ಬಾರಿ ಹಲವೆಡೆ ಅತ್ಯಲ್ಪ ಮಳೆಯಾಗಿರುವದರಿಂದ
ಕಾಫಿ ಮೊಗ್ಗು ಅರಳುವ ಮೊದಲೇ ಬಾಡಿ ಹೋಗಿದೆ.
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಬೆಳೆಗಾರರೋರ್ವರು ತಮ್ಮ ತೋಟದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಕೆಂಪು ಬಣ್ಣಕ್ಕೆ ತಿರುಗಿರುವ ಹೂವನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ವರ್ಷವು ಮಳೆಗಾಲದಲ್ಲಿ ಅತಿವೃಷ್ಟಿಗೆ ತುತ್ತಾಗಿ ಕಾಫಿ, ಕರಿಮೆಣಸು, ಅಡಿಕೆ ಫಸಲು ನೆಲಕಚ್ಚಿದ್ದು, ಇದೀಗ ಸಕಾಲದಲ್ಲಿ ಸೂಕ್ತ ಹಿಂಗಾರು ಮಳೆ ಬಾರದೆ ಮುಂದಿನ ಕಾಫಿ ಫಸಲಿನ ಮೇಲೆಯೂ ದುಷ್ಪರಿಣಾಮ ಬೀರಿರುವ ಬಗ್ಗೆ ಅಸಹಾಯಕತೆಯನ್ನು ವ್ಯಕ್ತ ಪಡಿಸಿದ್ದಾರೆ.