ಸುಂಟಿಕೊಪ್ಪ, ಏ. 20: ಪನ್ಯ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ 2 ದಿನಗಳ ಕಾಲ ಧರ್ಮ ದೈವಗಳ ನೇಮೋತ್ಸವ ನಡೆಸಲಾಯಿತು. ಗಣಹೋಮದೊಂದಿಗೆ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡು, ಸತ್ಯ ನಾರಾಯಣ ಪೂಜೆಯನ್ನು ನೆರವೇರಿಸಲಾಯಿತು.
ರಾತ್ರಿ ಮೋಣಪ್ಪ ಪೂಜಾರಿ ಅವರ ಮನೆಯಿಂದ ವಾದ್ಯಗೋಷ್ಠಿಯೊಂದಿಗೆ ಭಂಡಾರವನ್ನು ದೈವಿ ದರ್ಶನಕ್ಕೆ ಗುಡಿಯವರೆಗೆ ತರಲಾಯಿತು. ರಾತ್ರಿ 10 ಗಂಟೆಯಿಂದ ಪಾಷಾಣ ಮೂರ್ತಿಯ ನೇಮೋತ್ಸವ ನಡೆದು, ನೆರೆದಿದ್ದ ಭಕ್ತರು ದೈವ ಸಾಕ್ಷಾತ್ಕಾರ ಪಡೆದುಕೊಂಡರು.
12 ಗಂಟೆಗೆ ಪಂಜುರ್ಲಿ ದೈವದ ಕೋಲವು ಭಕ್ತರಲ್ಲಿ ಇನ್ನಷ್ಟು ಭಕ್ತಿಭಾವ ಮೂಡಿತು. ಬೆಳಿಗ್ಗೆ ಗುಳಿಗ ಮತ್ತು ಕೊರಗಜ್ಜ ನೇಮವು ನಡೆದವು. ಸುತ್ತಮುತ್ತಲಿನ ಗರಗಂದೂರು, ಸುಂಟಿಕೊಪ್ಪ, ಹರದೂರು, ಬೆಟ್ಟಗೇರಿ, ಪನ್ಯ ಸೇರಿದಂತೆ ಹೊರ ಜಿಲ್ಲೆಗಳಿಂದ ಭಕ್ತರು ದೈವಗಳ ದರ್ಶನ ಪಡೆದರು. ನೆರೆದಿದ್ದವರಿಗೆ ಅನ್ನಸಂತರ್ಪಣೆ ನಡೆಸಲಾಯಿತು.