ಮಡಿಕೇರಿ, ಏ. 19: ವಿಶ್ವದಲ್ಲೇ ಅತ್ಯುನ್ನತ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದ್ದಾಗಿದೆ ಎಂಬ ಹಿರಿಮೆಗೆ ಸಾಕ್ಷಿಯಾಗಿ ಲೋಕಸಭಾ ಚುನಾವಣೆ ನಡೆಯುತ್ತಿದೆ; ಈ ದಿಸೆಯಲ್ಲಿ ನಿನ್ನೆ 21ನೇ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಈ ಸಂಬಂಧ ಜಿಲ್ಲಾಡಳಿತದೊಂದಿಗೆ ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಗೃಹರಕ್ಷಕರು ಸೇರಿದಂತೆ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಹಗಲಿರುಳು ಶ್ರಮಿಸಿದ್ದಾರೆ.
ಮಡಿಕೇರಿಯ ಸಂತ ಜೋಸೆಫರ ಶಾಲಾ ಆವರಣದೊಳಗೆ, ಮಡಿಕೇರಿ, ವಿಧಾನಸಭಾ ಕ್ಷೇತ್ರದ 269 ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ 274 ಮತಗಟ್ಟೆಗಳಿಗೆ ನಿಯೋಜನೆಗೊಂಡಿದ್ದ ಸಾವಿರಾರು ಸರಕಾರಿ ಉದ್ಯೋಗಿಗಳು ನಿನ್ನೆ ಬೆಳಗಿನ ಜಾವದಿಂದ ಕರ್ತವ್ಯ ನಿರತರಾಗಿದ್ದರು. ಮೇಲಧಿಕಾರಿಗಳು ತಮಗೆ ಸೂಚಿಸಿರುವ ನಿರ್ಧಿಷ್ಟ ಮತಗಟ್ಟೆಗಳಿಗೆ ಇವರೆಲ್ಲರೂ ಮೊನ್ನೆಯೇ ತೆರಳುವ ಮುಖಾಂತರ ತಮ್ಮ ಮನೆಗಳನ್ನು ಕೂಡ ತೊರೆಯುವ ಮೂಲಕ ಕರ್ತವ್ಯ ಮಗ್ನರಾಗಿದ್ದರು.
ಅಲ್ಲದೆ ಪುರುಷರು ಹಾಗೂ ಮಹಿಳೆಯರ ಸಹಿತ ವಯೋಮಾನವ ಮತ್ತು ಲಿಂಗಬೇಧವಿಲ್ಲದೆ ತಾವು ನಿಯೋಜನೆಗೊಂಡಿದ್ದ ದೂರ ದೂರದ ಮತಗಟ್ಟೆಗಳಲ್ಲಿ ಸಿಕ್ಕ ವ್ಯವಸ್ಥೆಗೆ ಹೊಂದಿಕೊಂಡು ಮತದಾನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ನಡುವೆ ಆಕಸ್ಮಿಕ ಎದುರಾಗಿದ್ದ ಮಳೆ, ಕೈಕೊಟ್ಟ (ಮೊದಲ ಪುಟದಿಂದ) ವಿದ್ಯುತ್ ವ್ಯವಸ್ಥೆ, ಸೊಳ್ಳೆಕಾಟ ಇನ್ನಿತರ ಅಡೆತಡೆಗಳನ್ನು ಇಲ್ಲಿ ಅನಿವಾರ್ಯವಾಗಿ ಮರೆಯಬೇಕಾಯಿತು. ಆಯಾ ಮತಗಟ್ಟೆ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರ, ಶಾಲಾ ಶಿಕ್ಷಕರು, ಊರಿನ ಪ್ರಮುಖರು ತೋರಿದ ಪ್ರೀತ್ಯಾಧಾರಗಳಿಗೆ ಪೂರಕ ವ್ಯವಸ್ಥೆಯಲ್ಲಿ ಪೂರ್ಣ 24 ಗಂಟೆಗಳಿಗೂ ಅಧಿಕ ಸಮಯ ಕರ್ತವ್ಯನಿರತರಾಗಿದ್ದರು.
ಆತಂಕದೊಂದಿಗೆ ಒತ್ತಡ: ಒಂದೆಡೆ ನಿರಾತಂಕವಾಗಿ ಚುನಾವಣೆ ನಡೆಯಬೇಕೆಂಬ ಆತಂಕವಾದರೆ, ಮತಯಂತ್ರಗಳು ಕೈಕೊಡದಂತೆ, ತಮ್ಮ ತಮ್ಮ ಮತಗಟ್ಟೆಗಳಲ್ಲಿ ಶೇಕಡವಾರು ಹೆಚ್ಚಿನ ಮತದಾನ ನಡೆಯುವಂತೆ ನೋಡಿಕೊಳ್ಳುವ ಒತ್ತಡದಲ್ಲಿ ಪ್ರತಿ ಮತಗಟ್ಟೆಗೆ ನಿಯೋಜನೆಗೊಂಡಿದ ನಾಲ್ಕಾರು ಸಿಬ್ಬಂದಿಯ ತಂಡ ಸಿಲುಕಿದ್ದರಲ್ಲಿ ಅಚ್ವರಿಯಿರಲಿಲ್ಲ. ಅಂತೂ ಎಲ್ಲವನ್ನು ಸುಸೂತ್ರವಾಗಿ ನಿರ್ವಹಿಸಿಕೊಂಡು ಎರಡು ವಿಧಾನಸಭಾ ಕ್ಷೇತ್ರವ್ಯಾಪ್ತಿಯ 543 ಮತಗಟ್ಟೆಗಳ ಕರ್ತವ್ಯನಿರತ ತಂಡ ಎಲ್ಲವನ್ನು ‘ಸೈ’ ಎನಿಸಿಕೊಂಡು ನಿನ್ನೆ ಮುಸ್ಸಂಜೆಯ ನಡುವೆ ಆಯಾ ಮತಗಟ್ಟೆಗಳಿಂದ ವಿಧಾನಸಭಾ ಕ್ಷೇತ್ರಗಳ ಕೇಂದ್ರ ಸ್ಥಳ ತಲಪಿದ್ದಾಯಿತು.
ಮತ್ತೆ ಕಸರತ್ತು : ಆಯಾ ಮತಗಟ್ಟೆಗಳಿಂದ ಮಸ್ಟರಿಂಗ್ - ರೀಮಸ್ಟರಿಂಗ್ ಸ್ಥಳ ತಲಪಿದ ಬಳಿಕವೂ, ಪ್ರತಿ ಮತಯಂತ್ರವನ್ನು ಸೂಕ್ತ ಭದ್ರತೆಯ ನಿಖರತೆಗಾಗಿ ಕೇಂದ್ರ ಸ್ಥಳದಲ್ಲಿ ಪರಿಶೀಲಿಸುವಂತಾಯಿತು. ಈ ಎಲ್ಲ ಕಸರತ್ತು ಮುಗಿಯುವಷ್ಟರಲ್ಲಿ ಇಂದು ಸೂರ್ಯೋದಯವನ್ನು ಎದುರು ಗೊಳ್ಳುವಂತಾಯಿತು. ಹೀಗಾಗಿ ಬಹುತೇಕ ಉದ್ಯೋಗಿಗಳು ಮೊನ್ನೆ ಮನೆ ತೊರೆದಿದ್ದವರು ಇಂದಷ್ಟೇ ಮರಳಿ ಮನೆ ಸೇರುವಂತಾಯಿತು.
ಮೈಸೂರಿಗೆ ಸಾಗಾಟ: ಎಲ್ಲ ಭದ್ರತಾ ಕ್ರಮಗಳನ್ನು ಮೇಲಧಿಕಾರಿಗಳು ಕೇಂದ್ರ ಚುನಾವಣೆ ಆಯೋಗದ ನಿರ್ದೇಶನದಂತೆ ಪರಿಪೂರ್ಣಗೊಳಿಸಿದ ಬಳಿಕವಷ್ಟೇ, ಇಂದು ಬೆಳಗಿನ ಸುಮಾರಿಗೆ ಮಡಿಕೇರಿ ಮತ್ತು ವೀರಾಜಪೇಟೆ ಕೇಂದ್ರ ಸ್ಥಳದಿಂದ ಮತಯಂತ್ರಗಳನ್ನು ಹೊತ್ತ ವಾಹನಗಳು ಮೈಸೂರು ಪಡವರಹಳ್ಳಿಯ ಮಹಾರಾಣಿ ಕಾಲೇಜಿನ ಭದ್ರತಾಕೊಠಡಿಗೆ ತೆರಳುವಂತಾಯಿತು. ಅಲ್ಲಿ ಮತ್ತೆ ಎಲ್ಲವನ್ನು ಪರಿಶೀಲಿಸಿದ ಬಳಿಕ, ಭದ್ರತಾ ಸಿಬ್ಬಂದಿ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳ 543 ಮತಯಂತ್ರಗಳನ್ನು ಸಂಬಂಧಿಸಿದ ಅಧಿಕಾರಿಗಳ ವಶಕ್ಕೆ ಒಪ್ಪಿಸಬೇಕಾಯಿತು. ಈ ಕರ್ತವ್ಯ ಪೂರ್ಣಗೊಳ್ಳುವಷ್ಟರಲ್ಲಿ ಇಂದು ಮಧ್ಯಾಹ್ನ ಸರಿ ಸುಮಾರು 1.25 ಗಂಟೆಯಾಗಿತ್ತು.
ಒಟ್ಟಿನಲ್ಲಿ ಪ್ರಸಕ್ತ ನಡೆದಿರುವ ಈ ಎಲ್ಲ ಜವಾಬ್ದಾರಿಯನ್ನು ಕೊಡಗಿನ ಪ್ರಮುಖ ಜವಾಬ್ದಾರಿಯಲ್ಲಿರುವ ಮೂವರು ಮಹಿಳಾ ಅಧಿಕಾರಿಗಳಾದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಇವರುಗಳು ಪ್ರಮುಖವಾಗಿ ನಿರ್ವಹಿಸಿದರು. ಇವರೊಂದಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜ್, ಉಪವಿಭಾಗಾಧಿಕಾರಿ ಜವರೇಗೌಡ ಸೇರಿದಂತೆ ಜಿಲ್ಲೆಯ ಮೂವರು ತಹಶೀಲ್ದಾರರು, ಪೊಲೀಸ್ ಉಪ ಅಧೀಕ್ಷಕರುಗಳು ಒಳಗೊಂಡಂತೆ ಸರಿಸುಮಾರು 4 ಸಾವಿರ ಉದ್ಯೋಗಿಗಳ ಶ್ರಮವಿತ್ತು.
ಅಂತೆಯೇ ಪ್ರಮುಖ ರಾಜಕೀಯ ಪಕ್ಷಗಳ ಇಬ್ಬರ ಸಹಿತ 22 ಮಂದಿ ಲೋಕಸಭಾ ಸ್ಪರ್ಧಿಗಳು ಇಲ್ಲಿ ತಮ್ಮ ಭವಿಷ್ಯ ತಿಳಿಯಲು ಮುಂದಾಗಿದ್ದು, ಇವರ ಹಣೆಬರಹ ಬರೆದಿರುವ ಮತದಾರರ ತೀರ್ಪು ಈಗಾಗಲೇ ಮತಯಂತ್ರ ಸೇರಿದ್ದಾಗಿದೆ. ಇಲ್ಲಿ ಕೊಡಗು - ಮೈಸೂರು ಕ್ಷೇತ್ರದೊಂದಿಗೆ ಇಡೀ ದೇಶದ 543 ಸಂಸದರ ಭವಿಷ್ಯ ಬರುವ ಮೇ 23 ರಂದು ಹೊರಬೀಳಲಿದೆ.