ಮಡಿಕೇರಿ, ಏ. 19: ಲೋಕಸಭಾ ಚುನಾವಣೆಯ ಮತಸಮರ ನಿನ್ನೆಯಷ್ಟೆ ಮುಕ್ತಾಯಗೊಂಡಿದ್ದು, ಇದೀಗ ಜಿಲ್ಲೆಯ ಕಾಕೋಟುಪರಂಬುವಿನ ಮೂಲಕ ಹಾಕಿ ಕಲರವ ಆರಂಭಗೊಳ್ಳಲಿದೆ. ಲಿಮ್ಕಾ ಬುಕ್ ಆಫ್ ದಾಖಲೆ ಖ್ಯಾತಿಯ ಕೊಡವ ಕೌಟುಂಬಿಕ ಹಾಕಿ ಉತ್ಸವ ಪ್ರಸಕ್ತ ವರ್ಷ ಈ ಹಿಂದಿನ ವರ್ಷಗಳಂತೆ ನಡೆಯುತ್ತಿಲ್ಲ. 2018ರಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಹಿನ್ನೆಲೆಯಲ್ಲಿ ವಾರ್ಷಿಕ ಹಾಕಿ ನಮ್ಮೆಯನ್ನು ಕೊಡವ ಹಾಕಿ ಅಕಾಡೆಮಿ ಹಾಗೂ 23ನೇಯ ವರ್ಷದ ಆಯೋಜಕತ್ವ ಪಡೆದಿದ್ದ ಹರಿಹರ ಮುಕ್ಕಾಟಿರ ಕುಟುಂಬ ಒಂದು ವರ್ಷದ ಮಟ್ಟಿಗೆ ಮುಂದೂಡಿತ್ತು.
ಆದರೆ ಹಾಕಿಯ ಜೀವಂತಿಕೆ ಉಳಿಸಬೇಕೆಂಬ ಹಲವರ ಅಭಿಪ್ರಾಯ ಹಾಗೂ ಹೊಸ ಚಿಂತನೆಯೊಂದಿಗೆ ಕೊಡವ ಹಾಕಿ ಬದಲಾಗಿ ಹಾಕಿ ಕೂರ್ಗ್ ಸಂಸ್ಥೆ ವಿಭಿನ್ನ ರೀತಿಯಲ್ಲಿ ಏರ್ಪಡಿಸುವ ನಿರ್ಣಯವನ್ನು ಕೈಕೊಂಡಿದೆ. ಹಲವು ಅಭಿಪ್ರಾಯ ವ್ಯತ್ಯಾಸಗಳು ಕೇಳಿ ಬಂದಿತ್ತಾದರೂ ಇದೀಗ ಎಲ್ಲವೂ ತಹಬದಿಗೆ ಬಂದಿದ್ದು, ಹಾಕಿ ಕೂರ್ಗ್ ಸಂಸ್ಥೆ ತಾ. 20 ರಿಂದ ಮೇ 10ರ ತನಕದ ಅವಧಿಯಲ್ಲಿ ಕೌಟುಂಬಿಕ ಹಾಕಿ ಪಂದ್ಯಾಟವನ್ನು ಕಾಕೋಟು ಪರಂಬುವಿನಲ್ಲಿ ನಡೆಸುವ ನಿಟ್ಟಿನಲ್ಲಿ ಮುಂದಾಗಿದೆ.
ಹಾಕಿ ಕೂರ್ಗ್ನಿಂದ ಕೊಡವ ಚಾಂಪಿಯನ್ಸ್ ಲೀಗ್ ಮತ್ತು ಚಾಂಪಿಯನ್ ಶಿಫ್ ಟ್ರೋಫಿ - 2019 ಹೆಸರಿನಲ್ಲಿ ಈ ಬಾರಿ ಎರಡು ಪ್ರತ್ಯೇಕವಾದ ಪಂದ್ಯಾವಳಿಯನ್ನು ಏರ್ಪಡಿಸಲಾಗಿದ್ದು, ಇದಕ್ಕಾಗಿ ಕಾಕೋಟು ಪರಂಬುವಿನ ಎರಡು ಮೈದಾನಗಳಲ್ಲಿ ಅಗತ್ಯ ಸಿದ್ಧತೆಗಳು ನಡೆದಿವೆ.
(ಮೊದಲ ಪುಟದಿಂದ) ವಾರ್ಷಿಕವಾದ ಹಾಕಿ ಉತ್ಸವದಷ್ಟು ಸಂಭ್ರಮ - ಸಡಗರ ಕಾಣದಿದ್ದರೂ ಈ ಪಂದ್ಯಾವಳಿಯಲ್ಲಿ 149 ಕೊಡವ ಕುಟುಂಬಗಳು ಪಾಲ್ಗೊಳ್ಳುತ್ತಿರುವದೂ ವಿಶೇಷವಾಗಿದೆ. 149 ಕುಟುಂಬಗಳನ್ನು ಒಳಗೊಂಡಂತೆ ಒಂದು ಪಂದ್ಯಾವಳಿ ಹಾಗೂ ಇದರ ಜತೆಯಲ್ಲೇ ಈ ಹಿಂದಿನ ಹಾಕಿ ಉತ್ಸವಗಳಲ್ಲಿ ಪ್ರಶಸ್ತಿ ಸುತ್ತು ತಲಪಿದ್ದ ಹತ್ತು ಬಲಿಷ್ಠ ತಂಡಗಳ ನಡುವೆ ಇನ್ನೊಂದು ಪ್ರತ್ಯೇಕವಾದ ಚಾಂಪಿಯನ್ಸ್ ತಂಡಗಳ ನಡುವಿನ ಪಂದ್ಯಾಟ ಈ ಬಾರಿಯ ವಿಭಿನ್ನತೆಯಾಗಿದೆ,.
ಯಾವ್ಯಾವ ಕುಟುಂಬ
ಚಾಂಪಿಯನ್ಸ್ ಲೀಗ್ನಲ್ಲಿ ಬಲಿಷ್ಠ ತಂಡಗಳಾದ ಚೇಂದಂಡ, ಕೂತಂಡ, ಕಲಿಯಂಡ, ಚೆಪ್ಪುಡೀರ, ಮುಕ್ಕಾಟೀರ (ಬೋಂದ) ಅಂಜಪರವಂಡ, ಪಳಂಗಂಡ, ಪರದಂಡ, ಮಂಡೇಪಂಡ ಹಾಗೂ ಕುಲ್ಲೇಟಿರ ತಂಡಗಳ ನಡುವೆ ಸ್ಪರ್ಧೆ ಜರುಗಲಿದೆ. ಮತ್ತೊಂದು ಪಂದ್ಯಾವಳಿಯ ಪ್ರಶಸ್ತಿಗಾಗಿ ಇನ್ನಿತರ 149 ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿವೆ. ತಾ. 20 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ. ಕಾಕೋಟುಪರಂಬು ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ಮೈದಾನಗಳಲ್ಲಿ ಪಂದ್ಯಾಟ ನಡೆಯಲಿದ್ದು, ಕಾಕೋಟುಪರಂಬು ರಿಕ್ರಿಯೇಷನ್ ಕ್ಲಬ್ ಮೈದಾನ ಸಿದ್ಧತೆಯ ಜವಾಬ್ದಾರಿ ವಹಿಸಿದ್ದು, ಅಧ್ಯಕ್ಷ ಮೇವಡ ಚಿಣ್ಣಪ್ಪ ಮುಂದಾಳತ್ವದಲ್ಲಿ ವ್ಯವಸ್ಥೆಗಳು ನಡೆದಿವೆ.