ಕುಶಾಲನಗರ, ಏ. 19: ಗುರುವಾರ ಲೋಕಸಭಾ ಮತದಾನ ಮುಗಿಯುತ್ತಿದ್ದಂತೆಯೇ ಕುಶಾಲನಗರ ಸುತ್ತಮುತ್ತ ಸಂಜೆಗತ್ತಲಲ್ಲಿ ಭಾರೀ ಗುಡುಗು, ಸಿಡಿಲು, ಮಿಂಚು, ಗಾಳಿಯೊಂದಿಗೆ ಸುರಿದ ಮಳೆ ಹಲವೆಡೆ ನಾಗರಿಕರನ್ನು ಬೆಚ್ಚಿಬೀಳಿಸಿದ ಘಟನೆಗಳು ನಡೆದಿವೆ. ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ಕೂಡಿಗೆ, ಮುಳ್ಳುಸೋಗೆ, ಹಾರಂಗಿ, ಗುಡ್ಡೆಹೊಸೂರು, ಕೊಪ್ಪ ವ್ಯಾಪ್ತಿಯಲ್ಲಿ ಸುಮಾರು 32 ಮನೆಗಳ ಶೀಟ್‍ಗಳು ಗಾಳಿಗೆ ಹಾರಿ ಹೋಗಿವೆ. ಇನ್ನೊಂದೆಡೆ ಹಾರಂಗಿ ರಸ್ತೆಯಲ್ಲಿ ಮಹೇಶ್ ಎಂಬವರ ಮನೆಗೆ ಸಿಡಿಲು ಬಡಿದು ಭಾರೀ ಹಾನಿಯಾಗಿದ್ದು ಅದೃಷ್ಟವಶಾತ್ ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ.

ಸಿಡಿಲು ಬಡಿದ ಮನೆಗಳ ಸ್ವತ್ತುಗಳು ಹಾನಿಯಾಗಿವೆ. ಶೀಟ್‍ಗಳಿಂದ ನಿರ್ಮಿತವಾಗಿದ್ದ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು ಎಚ್ಚೆತ್ತುಕೊಂಡ ಕುಟುಂಬ ಸದಸ್ಯರು ಪವಾಡ ಸದೃಶ್ಯರಾಗಿ ಬದುಕುಳಿದಿದ್ದಾರೆ. ಈ ನಡುವೆ ಗಾಳಿ ನುಗ್ಗಿ ಮನೆಯ ಶೀಟ್‍ಗಳು ಹಾರಿ ಹೋಗಿದ್ದು ಅಂದಾಜು ರೂ. 2 ಲಕ್ಷ ನಷ್ಟ ಉಂಟಾಗಿದೆ ಎಂದು ಮನೆ ಮಾಲೀಕ ಮಹೇಶ್ ತಿಳಿಸಿದ್ದಾರೆ.

ಇದೇ ವೇಳೆ ಕುಶಾಲನಗರ ಸರಕಾರಿ ಜೂನಿಯರ್ ಕಾಲೇಜಿನ ಕಟ್ಟಡದ ಶೀಟ್‍ಗಳು ಹಾರಿಹೋಗಿದ್ದು ಮೊದಲ ಮಹಡಿಯಲ್ಲಿ 7 ಕೊಠಡಿಗಳ ಮೇಲ್ಚಾವಣಿಗೆ ತೀವ್ರ ಹಾನಿಯಾಗಿದೆ. ತರಗತಿಗಳಲ್ಲಿ ನೀರು ತುಂಬಿದ್ದು ಪೀಠೋಪಕರಣಗಳು, ಬೆಂಚ್‍ಗಳು ಕೂಡ ನೀರಿನಿಂದ ಅವೃತಗೊಂಡಿವೆ. ಸಂಜೆಯಾದ ಹಿನ್ನೆಲೆಯಲ್ಲಿ ಯಾರೂ ಶಾಲಾ ಕಟ್ಟಡದಲ್ಲಿ ಇಲ್ಲದ ಕಾರಣ ಯಾವದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಪ್ರಾಂಶುಪಾಲೆ ಬಿ.ಬಿ.ಸಾವಿತ್ರಿ ತಕ್ಷಣ ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಹಾರಂಗಿ ರಸ್ತೆಯಲ್ಲಿ ಚಿಕ್ಕತ್ತೂರು ಬಳಿ ಗಾಳಿಗೆ ಬೃಹತ್ ಮರವೊಂದು ಅಡ್ಡಲಾಗಿ ಬಿದ್ದಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಮರ ಬಿದ್ದು ರಸ್ತೆ ಬದಿಯಲ್ಲಿದ್ದ 5ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕುಶಾಲನಗರ ಪಟ್ಟಣ ಮತ್ತು ಎಲ್ಲೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡು ಚುನಾವಣಾ ಪ್ರಕ್ರಿಯೆಗೂ ತೊಂದರೆ ಉಂಟಾಗಿದ್ದು ಗೋಚರಿಸಿತು. ಡಿ ಮಸ್ಟರಿಂಗ್ ಸಂದರ್ಭ ಅಧಿಕಾರಿಗಳು ಮೊಬೈಲ್ ಬೆಳಕಿನಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಉಂಟಾಯಿತು. ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ 170 ರಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ರಾತ್ರಿ 8 ಗಂಟೆ ತನಕ ಮತ ಚಲಾಯಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬೆಳಕಿನ ಕೊರತೆಯಿಂದ ಮತದಾರರು ಮತ್ತು ಅಧಿಕಾರಿಗಳು ಸ್ವಲ್ಪಕಾಲ ಮೊಬೈಲ್ ಟಾರ್ಚ್ ಬಳಸುತ್ತಿದ್ದ ದೃಶ್ಯ ಕಂಡುಬಂತು. ನಂತರ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಗ್ಯಾಸ್ ಲೈಟ್ ಒಂದನ್ನು ತಂದು ಸಿಬ್ಬಂದಿಗಳಿಗೆ ಸಹಕರಿಸಿದರು. ಇತ್ತ ಕುಶಾಲನಗರ ಪಟ್ಟಣದಲ್ಲಿ ಚರಂಡಿಗಳಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೂ ತೊಡಕುಂಟಾಗಿತ್ತು. ಮೈಸೂರು ರಸ್ತೆಯ ಬದಿಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು ಈ ಕಾರಣದಿಂದ ಇಡೀ ಮಳೆ ಹಾಗೂ ಕಲುಷಿತ ನೀರು ರಸ್ತೆ ಮೇಲೆ ಹರಿಯುವದರೊಂದಿಗೆ ಸ್ಥಳೀಯ ಪೆಟ್ರೋಲ್ ಬಂಕ್ ನೀರಿನಿಂದ ಅವೃತಗೊಂಡಿತ್ತು.

(ಮೊದಲ ಪುಟದಿಂದ) ಲಕ್ಷ್ಮಣ ಎಂಬವರ ಮನೆಯ ಆವರಣ ಸಂಪೂರ್ಣ ನೀರಿನಿಂದ ತುಂಬಿ ಓಡಾಟಕ್ಕೆ ಅನಾನುಕೂಲ ಉಂಟಾಗಿತ್ತು. ಚಿಕ್ಕತ್ತೂರು ಗ್ರಾಮದಲ್ಲಿ ಚಂದ್ರು ಎಂಬವರ ಹೊಲದಲ್ಲಿ ಬೆಳೆದಿದ್ದ ಮರಗೆಣಸು ಬೆಳೆ ಸಂಪೂರ್ಣ ಗಾಳಿಗೆ ನೆಲಕಚ್ಚಿದೆ. ಬ್ಯಾಡಗೊಟ್ಟ ಗ್ರಾಮದ ದಿಡ್ಡಳ್ಳಿ ನಿರಾಶ್ರಿತರ ತಾತ್ಕಾಲಿಕ ಶೆಡ್‍ಗಳು ಗಾಳಿಗೆ ಹಾರಿಹೋಗಿದ್ದು ಅಲ್ಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು.

ಚುನಾವಣಾ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡ ಹಿನ್ನೆಲೆಯಲ್ಲಿ ಬಹುತೇಕ ಅಧಿಕಾರಿ ಸಿಬ್ಬಂದಿಗಳು ಮೈಸೂರಿಗೆ ತೆರಳಿರುವ ಕಾರಣ ಸ್ಥಳಕ್ಕೆ ಭೇಟಿ ನೀಡಲು ಅನಾನುಕೂಲವಾಗಿದೆ ಎಂದು ಕಂದಾಯ ಅಧಿಕಾರಿ ಮಧುಸೂದನ್ ಶಕ್ತಿಯೊಂದಿಗೆ ಪತ್ರಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕೆಲವೆಡೆ ಭೇಟಿ ನೀಡಿದ್ದು ನಷ್ಟ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವದು. ಈ ಸಂಬಂಧ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವದು ಎಂದು ತಿಳಿಸಿದ್ದಾರೆ.

ಕುಶಾಲನಗರ ವ್ಯಾಪ್ತಿಯಲ್ಲಿ ಬಿದ್ದ ಪ್ರಥಮ ಮಳೆ ಬಿಸಿಲಿನ ಕಾವಿನಿಂದ ಕಾದು ಬಸವಳಿದಿದ್ದ ಧರೆಗೆ ಒಂದಿಷ್ಟು ತಂಪು ನೀಡಿದ್ದರೆ ಇತ್ತ ಗ್ರಾಮೀಣ ಪ್ರದೇಶದ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೆ ಪ್ರಕೃತಿ ವಿಕೋಪ ಮರುಕಳಿಸುವ ಸಾಧ್ಯತೆ ಬಗ್ಗೆ ಚರ್ಚೆಯಲ್ಲಿ ತೊಡಗಿರುವದು ಕಂಡುಬರುತ್ತಿದೆ. ಗ್ರಾಮೀಣ ಪ್ರದೇಶದ ರೈತಾಪಿ ವರ್ಗ ತಮ್ಮ ಬೆಳೆಗೆ ತುರ್ತು ನೀರಿನ ಅಗತ್ಯವಿದ್ದ ಹಿನ್ನೆಲೆಯಲ್ಲಿ ಸಂತಸದಿಂದಿದ್ದರೆ ಶುಂಠಿ ಬಿತ್ತನೆ ಬೆಳೆಗಾರರಿಗೂ ಕೂಡ ಈ ಮಳೆ ಸಹಾಯಕವೆನಿಸಿದೆ. ಆದರೆ ಏಕಾಏಕಿ ತಮ್ಮ ಮನೆ ಮಠಗಳಿಗೆ ಅಪಾಯ ತಂದ ಮಳೆಯನ್ನು ಹಾನಿಗೊಳಗಾದ ಮನೆ ಮಾಲೀಕರು ಮುಂದಿನ ಮಳೆಗಾಲವನ್ನು ನೆನೆಸಿಕೊಂಡು ಆತಂಕಕ್ಕೊಳಗಾಗಿರುವದು ಕಂಡುಬಂತು.

ಕೂಡಿಗೆ : ಕಳೆದ ಗುರುವಾರ ಸಂಜೆ ಸುರಿದ ಭಾರಿ ಮಳೆ-ಗಾಳಿಗೆ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು, ಮದಲಾಪುರ, ಮಲ್ಲೇನಹಳ್ಳಿ, ಬ್ಯಾಡಗೊಟ್ಟ ಗ್ರಾಮಗಳಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಬ್ಯಾಡಗೊಟ್ಟ ಗ್ರಾಮದ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ನಿರ್ಮಾಣ ಹಂತದಲ್ಲಿರುವ ನಾಲ್ಕು ಮನೆಗಳ ಸಿಮೆಂಟ್ ಶೀಟ್‍ಗಳು ಹಾರಿ ಹೋಗಿವೆ. ಮದಲಾಪುರದ ನಾಗಮ್ಮನವರ ಮನೆ, ಮಲ್ಲೇನಹಳ್ಳಿಯ ವಾಸು ಅವರ ಮನೆ, ಸೀಗೆಹೊಸೂರು ಗ್ರಾಮದಲ್ಲಿ ಈಶ್ವರ, ರವಿ, ಪ್ರಕಾಶ್, ಸುಬ್ರಮಣ್ಯ ನವರ ಮನೆಗಳಿಗೆ ಹಾಕಲಾಗಿದ್ದ ಸಿಮೆಂಟ್ ಶೀಟ್ ಹಾರಿ ಹೋಗಿ ನಷ್ಟ ಉಂಟಾಗಿದೆ. ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಂದರನಗರ, ಚಿಕ್ಕತ್ತೂರು, ದೊಡ್ಡತ್ತೂರು, ನಾಗಮ್ಮನ ಮಂಟಿ, ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಮಳೆಯಿಂದಾಗಿ ನಷ್ಟವಾಗಿರುವ ಪ್ರದೇಶಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕÀ ಅಪ್ಪಚ್ಚು ರಂಜನ್ ಭೇಟಿ ನೀಡಿ ಖುದ್ದು ಪರಿಶೀಲಿಸಿದರು. ಈ ಸಂದÀರ್ಭ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಮರ್ಪಕವಾಗಿ ಸ್ಥಳ ಪರಿಶೀಲಿಸಿ ಮಾಹಿತಿ ಪಡೆದು ಪರಿಹಾರ ಒದಗಿಸುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಆರ್. ಮಂಜುಳ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ, ಕೂಡಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗಿರೀಶ್ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣಿಪ್ರಸಾದ್, ತಾಲೂಕು ಉಪಾಧ್ಯಕ್ಷ ಕೆ.ಕೆ. ಬೋಗಪ್ಪ, ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಆಯಾ ವಾರ್ಡ್‍ಗಳ ಸದಸ್ಯರು, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಶಿವನಂದಾ ಸೇರಿದಂತೆ ಕೂಡುಮಂಗಳೂರು ಸ್ಥಾನೀಯ ಸಮಿತಿಯ ಅಧ್ಯಕ್ಷ ಮಂಜುನಾಥ ಸೇರಿದಂತೆ ಪಕ್ಷದ ವಿವಿಧ ಘಟಕ ಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.sss

* ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಂದರನಗರ ಗ್ರಾಮ ಬಿ.ಎಂ. ತಾಯಮ್ಮ ಎಂಬವರಿಗೆ ಸೇರಿದ 3 ಎಕರೆ ಪ್ರದೇಶದ ಮರಗಣೆಸು ಮಳೆ, ಗಾಳಿಗೆ ಸಂಪೂರ್ಣ ನಷ್ಟವಾಗಿದೆ. ಅಂದಾಜು 4 ಲಕ್ಷಕ್ಕೂ ಅಧಿಕ ಪ್ರಮಾಣದ ನಷ್ಟವಾಗಿದೆ. ಅಲ್ಲದೆ ಈ ಭಾಗದಲ್ಲಿ ಹೆಚ್ಚು ಗಾಳಿಬೀಸಿದ ಪರಿಣಾಮ ಕಲವು ಮನೆಗಳ ಸಿಮೆಂಟ್ ಶೀಟ್ ಹಾರಿ ಹೋಗಿ ನಷ್ಟ ಉಂಟಾಗಿದೆ.

ಸಹಾಯ : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಬಾರಿ ಗಾಳಿ ಮಳೆಗೆ ಮನೆಯ ಸಿಮೆಂಟ್ ಶೀಟ್‍ಗಳು ಹಾರಿ ಹೋಗಿ ಬಾರಿ ನಷ್ಟವಾಗಿದೆ. 4 ಕುಟುಂಬದವರಿಗೆ ಕೂಡಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗಿರೀಶ ಕುಮಾರ ತಲಾ ಎರಡು ಸಾವಿರ ರೂಗಳು ವ್ಯಯ್ಯಕ್ತಿಕವಾಗಿ ಸಹಕರಿಸಿದ್ದಾರೆ. ಈ ಸಂದರ್ಭದಲ್ಲಿ ಸೀಗೆಹೊಸೂರು ವಾರ್ಡನ ಸದಸ್ಯರು ಗಳಾದ ಮಂಜಯ್ಯ, ಕೃಷ್ಣ. ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

* ಸಿದ್ದಾಪುರ : ಇಲ್ಲಿಗೆ ಸಮೀಪದ ನೆಲ್ಯಹುದಿಕೇರಿ ಗ್ರಾಮದ ಎಂ.ಜಿ. ಕಾಲೋನಿ ನಿವಾಸಿ ಹಂಸ ಅವರ ಮನೆ ಮೇಲೆ ಗಾಳಿ ಮಳೆಗೆ ನಿನ್ನೆ ರಾತ್ರ್ರಿ ಭಾರೀ ಗಾತ್ರದ ಮರ ಉರುಳಿ ಬಿದ್ದು ನಷ್ಟ ಸಂಭವಿಸಿದೆ. ಆರ್.ಸಿ.ಸಿ. ಮನೆಯಾದ್ದರಿಂದ ಅಪಾಯ ತಪ್ಪಿದಂತಾಗಿದ್ದು, ಮನೆಯ ಒಂದು ಬದಿಗೆ ಅಳವಡಿಸಲಾಗಿದ್ದ ಹೆಂಚು ಹಾಗೂ ಗೋಡೆಗೆ ಹಾನಿಯಾಗಿದೆ.

-ಚಿತ್ರ ವರದಿ: ಚಂದ್ರ ಮೋಹನ್, ನಾಗರಾಜಶೆಟ್ಟಿ, ಸುಧಿ