ಮಡಿಕೇರಿ, ಏ. 19: ಕಳೆದೆರಡು ದಿನಗಳ ಹಿಂದೆ ಸುರಿದ ಭಾರೀ ಗಾಳಿ-ಮಳೆ ಹಾಗೂ ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಕಂಬಗಳ ಮೇಲೆ ಮರಗಳ ಕೊಂಬೆ ಬಿದ್ದುದಲ್ಲದೆ, ಕುಂಡಾಮೇಸ್ತ್ರಿ ನೀರು ಸಂಗ್ರಹಗಾರದ ಕಟ್ಟೆಯ ಒಂದು ಭಾಗ ಒಡೆದು ಹೋಗಿದ್ದು, ನಗರಕ್ಕೆ ಸರಬರಾ ಜಾಗುವ ಕುಡಿಯುವ ನೀರಿಗೆ ಸಮಸ್ಯೆ ಯುಂಟಾಗಿದೆ ಎಂದು ನಗರಸಭಾ ಆಯುಕ್ತ ಎಂ.ಎಲ್.ರಮೇಶ್ ತಿಳಿಸಿದ್ದಾರೆ.ಗಾಳಿಬೀಡು ಬಳಿಯ ಕೂಟು ಹೊಳೆ ನೀರು ಸಂಗ್ರಹಗಾರದಲ್ಲಿ ನೀರು ಶೇಖರಣೆ ಕ್ಷೀಣಿಸಿದಾಗ ಮಡಿಕೇರಿ ನಗರದ ನಾಗರಿಕರಿಗೆ ಏಪ್ರಿಲ್-ಮೇ ತಿಂಗಳಲ್ಲಿ ಕುಡಿಯುವ ನೀರು ಸಮಸ್ಯೆಯಾಗಬಾರದೆಂದು ಪರ್ಯಾಯವಾಗಿ ಗಾಳಿಬೀಡು ಸಮೀಪದ ಕುಂಡಾಮೇಸ್ತ್ರಿ ಎಂಬಲ್ಲಿ ನಿರ್ಮಿಸಿದ ನೀರು ಸಂಗ್ರಹಗಾರಕ್ಕೆ ಹಾದುಹೋಗಿರುವ ವಿದ್ಯುತ್ ಸಂಪರ್ಕದ ಲೈನ್ ಮೇಲೆ ಮರಗಳ ಕೊಂಬೆಗಳು

(ಮೊದಲ ಪುಟದಿಂದ) ಬಿದ್ದಿದ್ದು, ಅವುಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ಬುಧವಾರ ರಾತ್ರಿ ವೇಳೆ ಬೀಸಿದ ಭಾರೀ ಗಾಳಿ ಮತ್ತು ಮಳೆಗೆ ಕುಂಡಾ ಮೇಸ್ತ್ರಿ ಜಲಸಂಗ್ರಹಗಾರದ ಕಟ್ಟೆಯ ಒಂದು ಬದಿ ಒಡೆದುದರಿಂದ ಸಂಗ್ರಹಗೊಂಡಿದ್ದ ನೀರು ಸಹಿತ ಕಟ್ಟೆ ಕೊಚ್ಚಿಹೋಗಿದ್ದು, ಮಡಿಕೇರಿ ನಗರಕ್ಕೆ ಎರಡು ದಿನ ನೀರು ಸರಬರಾಜಾಗುವದರಲ್ಲಿ ವ್ಯತ್ಯಯವುಂಟಾಗಲಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಕುಂಡಾ ಮೇಸ್ತ್ರಿ ಕಟ್ಟೆ ಒಡೆದು ಹೋದುದನ್ನು ಮರುನಿರ್ಮಾಣ ಮಾಡಿ ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಸಹಕರಿಸಲು ಮನವಿ

ಇತ್ತೀಚಿನ ದಿನಗಳಲ್ಲಿ ಆಗಿಂದಾಗ್ಗೆ ವಿದ್ಯುತ್ ವ್ಯತ್ಯಯದಿಂದ ನಗರದ ನಾಗರಿಕರಿಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಾಸವುಂಟಾಗಬಹುದಾಗಿದ್ದರಿಂದ ನಗರದ ಜನತೆ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ. -ಶ್ರೀವತ್ಸ