ಬಡುವಮಂಡ ಆದಿತ್ಯ ಬೋಪಣ್ಣ ಸಾಧನೆ ಮಡಿಕೇರಿ, ಏ. 19: ಬಹುತೇಕ ಎಲ್ಲಾ ಕ್ರೀಡೆಗಳಲ್ಲೂ ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿನ ಆಟಗಾರರು ಸಾಧನೆ ತೋರಿದ್ದು, ಇದೀಗ ಈತನಕ ಪ್ರಾತಿನಿದ್ಯವಿರದ ಮತ್ತೊಂದು ಕ್ರೀಡೆಯಲ್ಲೂ ಕೊಡಗಿನ ಯುವಕನೋರ್ವ ಸಾಧನೆ ತೋರಿದ್ದು, ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಮಲೇಷಿಯಾದಲ್ಲಿ ಏ. 24 ರಿಂದ 28 ರವರೆಗೆ ನಡೆಯಲಿರುವ 62ನೇ ಮಲೇಷಿಯಾ ಮುಕ್ತ ಈಜು ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನವರಾದ ಬಡುವಮಂಡ ಆದಿತ್ಯ ಬೋಪಣ್ಣ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಮಲೇಷಿಯಾದ ಕ್ವೌಲಾಲಂಪುರದಲ್ಲಿ ಈ ಕ್ರೀಡೆ ಜರುಗಲಿದೆ.ಈ ಹಿಂದೆ ರಾಜ್ಯ ಹಾಗೂ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಾಧನೆ ತೋರಿರುವ ಆದಿತ್ಯ ಬೋಪಣ್ಣ ಇದೀಗ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಬ್ಯಾಕ್‍ಸ್ಟ್ರೋಕ್ ಹಾಗೂ ಫ್ರೀಸ್ಟೈಲ್ ವಿಭಾಗದಲ್ಲಿ ಪರಿಣತಿ ಹೊಂದಿರುವ ಆದಿತ್ಯ ಬೋಪಣ್ಣ, ಬೆಂಗಳೂರಿನ ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್‍ನಲ್ಲಿ ತರಬೇತಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರು ವಿಜಯ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿರುವ ಇವರು ಮೂಲತಃ ಜಿಲ್ಲೆಯ ಪಾಲಿಬೆಟ್ಟದವರಾದ ಬಡುವಮಂಡ ದಿನೇಶ್ ಕಾರ್ಯಪ್ಪ ಹಾಗೂ ಸಪ್ನ (ತಾಮನೆ-ಅಣ್ಣಳಮಾಡ) ದಂಪತಿಯ ಪುತ್ರರಾಗಿದ್ದು, ಬೆಂಗಳೂರಿನಲ್ಲಿ ನೆಲಸಿದ್ದಾರೆ.