ಗೋಣಿಕೊಪ್ಪ ವರದಿ, ಏ. 17: ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಆಯೋಜಿಸಿರುವ ಕೊಡಗು ಹಿಂದೂ ಫುಟ್ಭಾಲ್ ಕಪ್ ಟೂರ್ನಿ ತಾ. 19 ರಿಂದ 21 ರವರೆಗೆ ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಪಿ. ಎಸ್. ಶರತ್‍ಕಾಂತ್ ತಿಳಿಸಿದ್ದಾರೆ. ಮೂರು ದಿನ ನಡೆಯುವ ಕ್ರೀಡಾಕೂಟದಲ್ಲಿ ಈಗಾಗಲೇ 17 ತಂಡಗಳು ನೋಂದಣಿ ಮಾಡಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾ. 19 ರಂದು ಬೆಳಗ್ಗೆ 9.30 ಕ್ಕೆ ಕ್ರೀಡಾಕೂಟದ ಉದ್ಘಾಟನೆಯನ್ನು ಹಿರಿಯ ಫುಟ್ಭಾಲ್ ಆಟಗಾರ ಕಳ್ಳಿಚಂಡ ಪ್ರಸಾದ್ ನೆರವೇರಿಸಲಿದ್ದಾರೆ. ಈ ಸಂದರ್ಭ ಹಿರಿಯ ಮಹಿಳೆ ಸೆಲ್ವಿ, ಹಲವು ಸಮಾಜಗಳ ಪ್ರಮುಖರುಗಳಾದ ಶ್ರೀಜಾ ಶಾಜಿ, ಪಿ. ಭಾಸ್ಕರನ್, ವಿಜಯನ್, ಕೆ.ಜೆ. ಜಯೇಂದ್ರ, ಪವಿತ್ರನ್, ಕೆ. ಎ. ವಿನೋದ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ತಾ. 21 ರಂದು ನಡೆಯುವ ಸಮಾರೋಪದಲ್ಲಿ ವಿವಿಧ ಕ್ಷೇತ್ರದ ಸಾಧಕರುಗಳನ್ನು ಸನ್ಮಾನಿಸಲಾಗುತ್ತದೆ. ಹಿರಿಯ ಅಂತರರಾಷ್ಟ್ರೀಯ ಓಟಗಾರ ಪೆಮ್ಮಂಡ ಎಂ. ಅಪ್ಪಯ್ಯ, ಶೌರ್ಯಚಕ್ರ ಪ್ರಶಸ್ತಿ ವಿಜೇತ ಯೋಧ ಎಚ್. ಎನ್. ಮಹೇಶ್, ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತರುಗಳಾದ ಸಣ್ಣುವಂಡ ಕಿಶೋರ್ ನಾಚಪ್ಪ, ಎಚ್. ಕೆ. ಜಗದೀಶ್, ಯುವ ಕ್ರೀಡಾ ಸಾಧಕರುಗಳಾದ ಟಿ. ಬಿ. ಅಶ್ವಿನಿ ಹಾಗೂ ಕೆ. ಎಸ್. ಐಶ್ವರ್ಯ ಅವರುಗಳನ್ನು ಸನ್ಮಾನಿಸಲಾಗುವದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಮಾಜದ ಗೌ. ಅಧ್ಯಕ್ಷ ಭಾಸ್ಕರನ್, ಖಜಾಂಜಿ ಸುಬ್ರಮಣಿ, ಸಲಹೆಗಾರ ಸಂಜೀವ ಹಾಗೂ ನಿರ್ದೇಶಕ ರಾಜಾ ಉಪಸ್ಥಿತರಿದ್ದರು.