ಅಹಮದಾಬಾದ್, ಏ. 17: ಗುಜರಾತ್, ರಾಜಸ್ತಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಮಳೆ ಮತ್ತು ಬಿರುಗಾಳಿಗೆ ಕನಿಷ್ಟ 47 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ವರುಣಾಘಾತದಲ್ಲಿ ಕೆಲವರು ಕಣ್ಮರೆಯಾಗಿರುವದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.ಗುಜರಾತ್‍ನ ಹಲವು ಭಾಗಗಳಲ್ಲಿ ಅಕಾಲಿಕ ಮಳೆ ಮತ್ತು ಧೂಳು ಬಿರುಗಾಳಿಗೆ ಕನಿಷ್ಟ 12 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭಯವಿದೆ. ಹಠಾತ್ ನೈಸರ್ಗಿಕ ವಿಕೋಪದಿಂದ ಸಾವು - ನೋವು ಸಂಭವಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮೃತರ ಸಂತ್ರಸ್ತ ಕುಟುಂಬಗಳಿಗೆ, ತಲಾ ರೂ. 2 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ. ಸಂತ್ರಸ್ತರಿಗೆ ಅಗತ್ಯವಾದ ಎಲ್ಲ ನೆರವು ನೀಡುವದಾಗಿ ತಿಳಿಸಿದ್ದಾರೆ.ಉತ್ತರ ಗುಜರಾತ್ ಮತ್ತು ಸೌರಾಷ್ಟ್ರ ಪ್ರಾಂತದ ಜಿಲ್ಲೆಗಳು ಸೇರಿದಂತೆ ವಿವಿಧ ಪ್ರದೇಶಗಳು ಮಳೆ, ಧೂಳು ಮತ್ತು ಬಿರುಗಾಳಿಯಿಂದ ತತ್ತರಿಸಿವೆ. ರಾಜ್ಯ ಸರಕಾರದ ಪರಿಹಾರ ಘಟಕದ ನಿರ್ದೇಶಕ ಜಿ.ಬಿ. ಮಂಗಲಪಾರ ಅವರ ಪ್ರಕಾರ ಸಾವು - ನೋವು ಅಧಿಕಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಭಾರೀ ಮಳೆ ಬಿರುಗಾಳಿಯಿಂದ, ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿವೆ.

ರಾಜಸ್ತಾನದಲ್ಲಿಯೂ ಕನಿಷ್ಟ 10 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಜೈಪುರ ಬರಾನ್ ಮತ್ತು ಉದಯಪುರ ಜಿಲ್ಲೆಗಳಲ್ಲಿ ಕನಿಷ್ಟ 10 ಮಂದಿ ಮೃತಪಟ್ಟಿದ್ದಾರೆ. ಮೃತರ ಹತ್ತಿರದ ಸಂಬಂಧಿಕರಿಗೆ ರಾಜ್ಯ ಸರಕಾರ ತಲಾ ರೂ.4 ಲಕ್ಷ ಪರಿಹಾರ ಘೋಷಿಸಿದೆ.

ಮಧ್ಯಪ್ರದೇಶದಲ್ಲಿ ಕರ್ಗೋನ್ ಜಿಲ್ಲೆ ಸೇರಿದಂತೆ ಹಲವೆಡೆಗಳಲ್ಲಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆಗೆ 14 ಮಂದಿ ಬಲಿಯಾಗಿದ್ದಾರೆ. ಕರ್ಗೋನ್, ಉಪಾದಿ, ಬಾಡಾ ಹಾಗೂ ಪ್ರೇಂನಗರ್ ಗ್ರಾಮಗಳಲ್ಲಿ ಸಾವು - ನೋವು ಸಂಭವಿಸಿದೆ. ಹಲವು ಮನೆಗಳಿಗೆ ಹಾನಿಯಾಗಿದ್ದು, ಮನೆಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಮಳೆಯಿಂದಾಗಿ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲು ಹಳಿತಪ್ಪಿದೆ. ಯಾವದೇ ಸಾವು - ನೋವು ಸಂಭವಿಸಿಲ್ಲ; ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿವೆ. ಮಹಾರಾಷ್ಟ್ರದ ನಾಸಿಕ್ ಮತ್ತು ಪುಣೆ ಜಿಲ್ಲೆಯ ವಿವಿಧೆಡೆ ಆಲಿಕಲ್ಲುನೊಂದಿಗೆ ಮಳೆಯ ಆರ್ಭಟಕ್ಕೆ 11 ಮಂದಿ ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ.