ಮಡಿಕೇರಿ, ಏ. 17: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆ ಸಂಬಂಧ ತಾ. 18 ರಂದು (ಇಂದು) ನಡೆಯಲಿರುವ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನ ಕ್ಕಾಗಿ ಜಿಲ್ಲಾಡಳಿತವು ಸಜ್ಜುಗೊಂಡಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 269 ಮತಗಟ್ಟೆಗಳು, 1,09,294 ಪುರುಷ ಮತದಾರರು, 1,11,853 ಮಹಿಳಾ ಮತದಾರರು, 10 ಇತರ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಹಾಗೆಯೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 274 ಮತಗಟ್ಟೆಗಳಿದ್ದು,

(ಮೊದಲ ಪುಟದಿಂದ) 1,09,573 ಪುರುಷ ಮತದಾರರು, 1,09,985 ಮಹಿಳಾ ಮತದಾರರು, 15 ಇತರ ಮತದಾರರು ಮತದಾನ ಮಾಡಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 543 ಮತಗಟ್ಟೆಗಳಿದ್ದು, ಒಟ್ಟು 4,40,730 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿವರಿಸಿದರು.

ಮತದಾನ ಸಿಬ್ಬಂದಿ: ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 543 ಮತಗಟ್ಟೆಗಳಿಗೆ ಒಟ್ಟು 571 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 571 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ 1142 ಮತದಾನಾಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ ಎಂದರು. ಪ್ರತಿ ಮತಗಟ್ಟೆಗೆ ಒಬ್ಬರು ಮತಗಟ್ಟೆ ಅಧ್ಯಕ್ಷಾಧಿಕಾರಿ, ಒಬ್ಬರು ಸಹಾಯಕ ಅಧ್ಯಕ್ಷಾಧಿಕಾರಿ ಮತ್ತು ಇಬ್ಬರು ಮತದಾನಾಧಿಕಾರಿಗಳನ್ನು ನೇಮಿಸಲಾಗಿದೆ. ಇವರೊಂದಿಗೆ ಸ್ಥಳೀಯವಾಗಿ ಒಬ್ಬರು ಗ್ರೂಪ್ ಡಿ ಮತ್ತು ಮತದಾರರನ್ನು ಗುರುತಿಸಲು ಪ್ರತಿ ಮತಗಟ್ಟೆಗೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮತದಾನಾಧಿಕಾರಿಗಳು ತಾವು ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರದಿಂದ ಹೊರಗಡೆ ನಿಯೋಜಿಸಲ್ಪಟ್ಟಿದಲ್ಲಿ, ಆ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ತಲುಪಲು ಸಾರಿಗೆ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳ ಮತದಾನಾಧಿಕಾರಿಗಳು ಮತಗಟ್ಟೆಗೆ ತಲಪಲು ಒಟ್ಟು 90 ಕೆಎಸ್‍ಆರ್‍ಟಿಸಿ ಬಸ್ಸುಗಳು, 87 ಜೀಪ್‍ಗಳು ಹಾಗೂ 51 ಮಿನಿ ಬಸ್ ಮತ್ತು 13 ಮ್ಯಾಕ್ಸಿಕ್ಯಾಬ್ ಉಪಯೋಗಿಸಲಾಗುತ್ತಿದೆ. ವಿಶೇಷಚೇತನ ಮತದಾರರನ್ನು ಅವರ ಮನೆಯಿಂದ ಮತಗಟ್ಟೆಗೆ ಕರೆದುಕೊಂಡು ಹೋಗಲು ಮತ್ತು ಅವರು ಮತದಾನ ಮಾಡಿದ ನಂತರ ವಾಪಸ್ಸು ಮನೆಗೆ ಬಿಡುವ ಕಾರ್ಯಕ್ಕೆ ಒಟ್ಟು 176 ವಾಹನಗಳನ್ನು ಉಪಯೋಗಿಸಲಾಗುತ್ತಿದೆ ಎಂದು ವಿವರಿಸಿದರು.

ಅಭ್ಯರ್ಥಿಗಳ ಬೂತ್‍ಗಳು: ಸ್ಪರ್ಧಿಸಿರುವ ಅಭ್ಯರ್ಥಿಗಳು ಮತಗಟ್ಟೆ ಸ್ಥಳದಿಂದ ಕನಿಷ್ಟ 200 ಮೀಟರ್ ದೂರದಲ್ಲಿ ತಮ್ಮ ಬೂತ್ ಸ್ಥಾಪಿಸಲು ಮಾತ್ರ ಅವಕಾಶವಿದೆ. ಯಾವದೇ ರೀತಿಯ ಪ್ರಚಾರದ ಪೋಸ್ಟರ್ ಅಥವಾ ಬ್ಯಾನರ್‍ಗಳನ್ನು ಮತಗಟ್ಟೆಯ 100 ಮೀಟರ್ ದೂರದಲ್ಲಿ ಹಾಕುವಂತಿಲ್ಲ. ಮತದಾರರಿಗೆ ನೀಡುವ ಸ್ಲಿಪ್ ಬಿಳಿ ಬಣ್ಣದಿಂದ ಕೂಡಿದ್ದು, ಅವರು ಮತದಾರರ ಭಾಗ ಸಂಖ್ಯೆ, ಕ್ರಮ ಸಂಖ್ಯೆ ಮತ್ತು ಹೆಸರನ್ನು ಮಾತ್ರ ಬರೆಯಬಹುದಾಗಿದ್ದು ಯಾವದೇ ರೀತಿಯ ಚಿಹ್ನೆಗಳು, ಅಭ್ಯರ್ಥಿಗಳ ಭಾವಚಿತ್ರಗಳು ಇರದಂತೆ ಎಚ್ಚರ ವಹಿಸಲು ಸೂಚಿಸಿದೆ. 2 ಚೇರ್, 1 ಮೇಜು, 3*1.5 ಅಳತೆ ಬ್ಯಾನರ್‍ಗಳನ್ನು ಹಾಕಿಕೊಳ್ಳಲು ಅವಕಾಶವಿದ್ದು ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯಬೇಕು.

ಪೋಲಿಂಗ್ ಏಜೆಂಟ್: ಅಭ್ಯರ್ಥಿ ಅಥವಾ ಅವರ ಚುನಾವಣಾ ಏಜೆಂಟ್ ಪ್ರತಿ ಮತಗಟ್ಟೆಗೆ ಒಬ್ಬರು ಪೋಲಿಂಗ್ ಏಜೆಂಟ್‍ರನ್ನು ಅಥವಾ ಪರ್ಯಾಯವಾಗಿ ಇಬ್ಬರು ಪೋಲಿಂಗ್ ಏಜೆಂಟರುಗಳನ್ನು ನೇಮಕ ಮಾಡಬಹುದು. ಇಬ್ಬರು ಏಜೆಂಟರುಗಳ ಪೈಕಿ ಯಾರಾದರು ಒಬ್ಬರು ಮಾತ್ರ ಮತಗಟ್ಟೆಯ ಒಳಗೆ ಇರಲು ಅವಕಾಶ ಇರುತ್ತದೆ. ಒಂದೇ ಸಮಯದಲ್ಲಿ ಇಬ್ಬರು ಮತಗಟ್ಟೆಯ ಒಳಗೆ ಇರಲು ಅನುಮತಿ ಇರುವುದಿಲ್ಲ. ಪೋಲಿಂಗ್ ಏಜೆಂಟ್ ಆ ಮತಗಟ್ಟೆಯ ಅಥವಾ ಪಕ್ಕದ ಮತಗಟ್ಟೆಯ ಮತದಾರರಾಗಿರಬಹುದು. ಪೋಲಿಂಗ್ ಏಜೆಂಟ್ ಚುನಾವಣಾ ಆಯೋಗ ಅನುಮತಿಸಿರುವ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಯನ್ನು (ಏಪಿಕ್ ಕಾರ್ಡ್) ಅಥವಾ ಇತರೆ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗುವಚಿತೆ ಸೂಚಿಸಲಾಗಿದೆ.

ಮಸ್ಟರಿಂಗ್ ಕಾರ್ಯ: ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಮತದಾನಕ್ಕೆ ಮುನ್ನ ದಿನವಾದ ಇಂದು ನಗರದ ಸಂತ ಜೋಸೆಫರ ಶಾಲೆ ಮತ್ತು ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರತ್ಯೇಕವಾಗಿ ಮಸ್ಟರಿಂಗ್ ಕಾರ್ಯ ನಡೆಯಿತು.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಒಟ್ಟು 543 ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳು ತಲಪಿದ್ದು, ತಾ. 18 ರಂದು (ಇಂದು) ನಡೆಯುವ ಮತದಾನಕ್ಕೆ ಸಿದ್ಧತೆ ಪೂರ್ಣಗೊಂಡಿದೆ.

ವೀರಾಜಪೇಟೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಮಡಿಕೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಉಪಸ್ಥಿತಿಯಲ್ಲಿ ಮಸ್ಟರಿಂಗ್ ಕಾರ್ಯ ಸುಗಮವಾಗಿ ನಡೆಯಿತು.

ನಗರದ ಸಂತ ಜೋಸೆಫರ ಶಾಲೆ ಮತ್ತು ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಬೆಳಗ್ಗೆಯಿಂದಲೇ ಚುನಾವಣಾ ಕಾರ್ಯದಲ್ಲಿ ನಿಯೋಜಿತರಾಗಿರುವ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು, ಪೋಲಿಂಗ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅಚ್ಚುಕಟ್ಟಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದರು.

ಮತಗಟ್ಟೆಗಳಿಗೆ ತೆರಳುವ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು, ಪೋಲಿಂಗ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಲು ಪ್ರತ್ಯೇಕವಾಗಿ ಕೌಂಟರ್‍ಗಳನ್ನು ತೆರೆಯಲಾಗಿತ್ತು. ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸುಗಮವಾಗಿ ತಮ್ಮ ತಮ್ಮ ಮತಗಟ್ಟೆಗಳಿಗೆ ತಂಡಗಳೊಂದಿಗೆ ತೆರಳಲು ಅನುಕೂಲವಾಗುವಂತೆ ನಾಮಫಲಕಗಳಲ್ಲಿ ವಿವರಗಳನ್ನು ಪ್ರಕಟಿಸಲಾಗಿತ್ತು. ಅಲ್ಲದೆ ಪ್ರತ್ಯೇಕ ಕೌಂಟರ್‍ಗಳನ್ನು ತೆರೆದು ಪಿಆರ್‍ಒ, ಎಪಿಆರ್‍ಒ ಮತ್ತು ಪೋಲಿಂಗ್ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು.

ದಾಖಲೆ ತೋರಿಸಿ: ಮತದಾನ ಮಾಡಲು ಮತಗಟ್ಟೆಗೆ ಬರುವ ಮತದಾರರು ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಹಾಜರುಪಡಿಸುವದು. ಅದು ಇಲ್ಲದ ಮತದಾರರು 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಮತಗಟ್ಟೆ ಅಧಿಕಾರಿಗಳಿಗೆ ಗುರುತಿಗಾಗಿ ತೋರಿಸಬೇಕು.

ಪಾಸ್‍ಪೆÇೀರ್ಟ್, ಡ್ರೈವಿಂಗ್ ಲೈಸನ್ಸ್, ರಾಜ್ಯ/ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔಧ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬ್ಯಾಂಕ್/ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಆದಾಯ ತೆರಿಗೆ ಗುರುತಿನ ಚೀಟಿ, ರಾಷ್ಟ್ರೀಯ ಜನಸಂಖ್ಯೆ ನೋಂದಣಿ ವಹಿ ಯೋಜನೆಯಡಿ ವಿತರಿಸಿರುವ ಸ್ಮಾರ್ಟ್ ಕಾರ್ಡುಗಳು, ನರೇಗಾ ಯೋಜನೆಯ ಅಡಿಯಲ್ಲಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್, ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‍ಗಳು (ಕಾರ್ಮಿಕ ಮಂತ್ರಾಲಯ ಯೋಜನೆ), ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು, ಸಂಸದರು, ವಿಧಾನಸಭಾ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರದಿಂದ ನೀಡಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್ ಸಹ ಬಳಸಿಕೊಳ್ಳಬಹುದಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ಸುಂಟಿಕೊಪ್ಪ ಸಂತ ಅಂತೋಣಿ ಹಿರಿಯ ಶಾಲೆಯ ಮತಗಟ್ಟೆಯನ್ನು ಸಖಿ ಮತಗಟ್ಟೆಯೆಂದು ನಾಮಕರಣಗೊಳಿಸಿ ದ್ವಾರಗಳನ್ನು ಅಳವಡಿಸಿ ಮತದಾರರಿಗೆ ಸ್ವಾಗತಿಸಲಾಗುತ್ತಿದೆ.

ಸುಂಟಿಕೊಪ್ಪದ ಜನತೆಗೆ ಮತದಾನ ಕೇಂದ್ರಕ್ಕೆ ಮುಖ್ಯದ್ವಾರ ಮತಗಟ್ಟೆಯನ್ನು ಮದುವಾಣಗಿತ್ತಿಯಂತೆ ಸಿಂಗಾರಗೊಳಿಸಲಾಗಿದೆ. ಇದು ಅತೀ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಕೇಂದ್ರವಾಗಿದೆ. ಈ ಮತಗಟ್ಟೆಯಲ್ಲಿ ಅಧಿಕಾರಿಗಳು ಸಹ ಮಹಿಳೆಯರನ್ನೇ ಕರ್ತವ್ಯಕ್ಕೆ ನಿಯೋಜಿಸಿರುವದು ಮತ್ತೊಂದು ವಿಶೇಷ.

-ವರದಿ : ಡಿ.ಎಂ.ಆರ್., ಕೆ.ಕೆ.ಎಸ್., ಬಿಡಿಆರ್