ನಾಪೆÇೀಕ್ಲು: ಇತಿಹಾಸ ಪ್ರಸಿದ್ಧ ಆದಿ ಶ್ರೀ ಪನ್ನಂಗಾಲತ್ತಮ್ಮೆ ದೇವಿಯ ಎರಡು ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕ ಹಬ್ಬ ತಾ. 12ರಂದು ಆರಂಭಗೊಂಡು, ತಾ. 13 ರಂದು ಸಂಪನ್ನಗೊಂಡಿತು.
ತಾ. 12 ರ ಮಧ್ಯಾಹ್ನ 12 ಗಂಟೆಗೆ ಶ್ರೀ ಇಗ್ಗುತ್ತಪ್ಪ ದೇವರಿಗೆ ಮಹಾಪೂಜೆ ಸಲ್ಲಿಸಿದ ನಂತರ ಕಣಿಯರ ಐನ್‍ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ತೀರ್ಥ ಸ್ನಾನದ ಬಳಿಕ ಓಲಿಯಿಂದ ತಯಾರಿಸಿದ ಎರಡು ಕೊಡೆಗೆ ಬಣ್ಣ ಹಚ್ಚಿದ ನಂತರ ಪೂಜಿಸಿ, ಎರಡು ಕೊಡೆ ಮತ್ತು ಅದಕ್ಕೆ ಅಳವಡಿಸುವ ಬಿದಿರುಗಳನ್ನು ಕಣಿಯರ ಕುಟುಂಬಸ್ಥರು ಮತ್ತು ಅಂಜರಿಕೆ ಕುಡಿಯವರು ಸೇರಿ ಪನ್ನಂಗಾಲ ದೇವಸ್ಥಾನದತ್ತ ತೆರಳಿದರು.
ಪನ್ನಂಗಾಲದ ಗದ್ದೆಯಲ್ಲಿ ಸೇರಿದ ಭಕ್ತ ಸಮೂಹಕ್ಕೆ ದೇವಿಯ ಕೊಡೆಯು ಗಿರ ಗಿರನೆ ತಿರುಗುವದರ ಮೂಲಕ ತನ್ನ ದರ್ಶನ ನೀಡಿತು. ಈ ಸಂದರ್ಭ ಶ್ರೀ ಆದಿ ಶಕ್ತಿ ಪನ್ನಂಗಾಲತ್ತಮ್ಮೆ ಸನ್ನಿಧಿಯ ವಿವಿಧ ಧೈವ ಪಾತ್ರಿಗಳು, ತಕ್ಕಮುಖ್ಯಸ್ಥರು ಕೊಡೆಯನ್ನು ಶ್ರದ್ಧಾಭಕ್ತಿಯಿಂದ ದೇವಸ್ಥಾನಕ್ಕೆ ಕೊಂಡೊಯ್ದು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ತಾ. 13 ರಂದು ನಡೆದ ಕುರುಂದ ಹಬ್ಬದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಂಡಿತು.
ಸುಂಟಿಕೊಪ್ಪ: ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಹಾಗೂ ಮಹಾಪೂಜೆ, ಎತ್ತು ಪೋರಾಟ್, ಚಾರಿಕುಣಿತ ಶ್ರದ್ಧಾಭಕ್ತಿಯಿಂದ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಬೆಳ್ಳಾರಿಕ್ಕಮ್ಮ ಉತ್ಸವ ಕಳೆದ 7 ದಿನಗಳ ಕಾಲ ವೃತ್ತದಲ್ಲಿ ತೊಡಗಿಸಿಕೊಂಡು ದೇವಾಲಯದಲ್ಲಿ ವೃತ್ತಾಚರಣೆಯ ಅಂಗವಾಗಿ 6 ದಿನಗಳ ಕಾಲ ವಿಶೇಷ ಪೂಜೆಯಲ್ಲಿ ಸುಂಟಿಕೊಪ್ಪ, ಆಂಜನಗೇರಿ ಬೆಟ್ಟಗೇರಿ, ಹರದೂರು ಗ್ರಾಮದ ಜನತೆಯು ಚಾರಿಕುಣಿತ ನಡೆಸುತ್ತ ದೇವಿಗೆ ಪೂಜೆಯನ್ನು ಸಮರ್ಪಿಸಲಾಗುತ್ತದೆ.
ಕೊನೆಯ ದಿನವಾದ ಸೋಮವಾರ ದೇವಸ್ಥಾನದಲ್ಲಿ ಕೊಡವ ಮತ್ತು ಗೌಡ ಮನೆತನದ ಯುವಕ ಮತ್ತು ಪುರುಷರು ಕೊಡಗಿನ ಸಾಂಪ್ರದಾಯಿಕ ಉಡುಪಾದ ಬಿಳಿ ಬಣ್ಣದ ಕುಪ್ಯಚಾಲೆ ಧರಿಸುವ ಮೂಲಕ ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡರು.
ಪುರುಷರು ದೇವಾಲಯದ ಭಂಡಾರವನ್ನು ಗ್ರಾಮದ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ಆಗಮಿಸಿ ದೇವಾಲಯದಲ್ಲಿ ದೇವಿಗೆ ಭಂಡಾರವನ್ನು ಸಮರ್ಪಿಸಲಾಗುತ್ತದೆ.
ನಂತರ ಗ್ರಾಮದ ಜನತೆಯಿಂದ ಎತ್ತು ಪೋರಾಟ್, ಚಾರಿಕುಣಿತವನ್ನು ನಡೆಸಿದರು. ನಂತರ ದೇವಿಗೆ ಪೂಜೆ ಆರ್ಪಿಸುವ ಮೂಲಕ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
ಸಾರ್ವಜನಿಕರಿಗೆ, ಮಕ್ಕಳಿಗೆ ತೆಂಗಿನಕಾಯಿ ಎಳೆಯುವ ಸ್ಪರ್ಧೆಗಳನ್ನು ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಗ್ರಾಮದ ಜನತೆಯು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕೂಡಿಗೆ: ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಬ್ರಹ್ಮ ರಥೋತ್ಸವದ ಅಂಗವಾಗಿ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳು ದೇವಾಲಯ ಸಭಾಂಗಣದಲ್ಲಿ ನಡೆದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯದ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದೇವಾಲಯ ಸಮಿತಿಯ ಗೌರವಾಧ್ಯಕ್ಷ ಕೆ.ಸಿ. ನಂಜುಂಡಸ್ವಾಮಿ, ನಾಗರಾಜಶೆಟ್ಟಿ, ವಿದ್ಯುತ್ ಗುತ್ತಿಗೆದಾರ ಶಿವನಂಜಪ್ಪ, ಕುಶಾಲನಗರ ವಾಸವಿ ಯುವಕ ಸಂಘದ ಅಧ್ಯಕ್ಷ ನಾಗಪ್ರವೀಣ್ ಮಾತನಾಡಿದರು.
ವೇದಿಕೆಯಲ್ಲಿ ದೇವಾಲಯ ಸಮಿತಿಯ ಕಾರ್ಯದರ್ಶಿ ಶೇಷಾಚಲ, ಉಪಾಧ್ಯಕ್ಷ ಮಂಜುನಾಥಸ್ವಾಮಿ, ಕಾರ್ಯಾಧ್ಯಕ್ಷ ಕೆ.ಎಸ್. ಮಾಧವ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕುಶಾಲನಗರದ ರವಿ ಆರ್. ಝೇಂಕಾರ್ ರಸಮಂಜರಿ ಕಾರ್ಯಕ್ರಮ ಮತ್ತು ಕೂಡುಮಂಗಳೂರಿನ ಯಂಗ್ ಸ್ಟಾರ್ ಡ್ಯಾನ್ಸ್ ಗ್ರೂಪ್ ವತಿಯಿಂದ ಡ್ಯಾನ್ಸ್ ಕಾರ್ಯಕ್ರಮಗಳು ಅತ್ಯಾಕರ್ಷಕವಾಗಿದ್ದವು.
ರಥೋತ್ಸವದ ಅಂಗವಾಗಿ ಪ್ರತಿದಿನ ಸಂಜೆ 6 ಗಂಟೆಗೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ಮಂಟಪೋತ್ಸವ, ಬಸವೇಶ್ವರ ಉತ್ಸವ ಮೆರವಣಿಗೆ, ಆಂಜನೇಯೋತ್ಸವ ಮೆರವಣಿಗೆಯು ಗ್ರಾಮದಲ್ಲಿ ಸಾಗಿತು.
ಸಿದ್ದಾಪುರ: ಸಮೀಪದ ಕರಡಿಗೋಡು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ನಡೆಯಿತು.
ಕರಡಿಗೋಡುವಿನ ಕುಕ್ಕುನೂರು ಕುಟುಂಬಸ್ಥರು ನಡೆಸಿಕೊಂಡು ಬರುತ್ತಿರುವ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವದ ಕೇಂದ್ರ ಬಿಂದುವಾದ ಪಲ್ಲಕ್ಕಿ ಮೆರವಣಿಗೆ ಭಕ್ತರ ಗಮನ ಸೆಳೆಯಿತು. ಬಸವೇಶ್ವರ ದೇವರ ಮೂರ್ತಿಯನ್ನು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡುವ ಮೂಲಕ ಅರ್ಚಕ ರಾಮಚಂದ್ರ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಿತು. ಕೊಂಡಸೇವೆ, ಮಹಾಪೂಜೆ, ಹರಕೆ ಒಪ್ಪಿಸುವದು, ತೀರ್ಥಪ್ರಸಾದ, ಅನ್ನದಾನ ನಡೆಯಿತು.ನಾಪೆÇೀಕ್ಲು: ಹಲವು ಪ್ರಕಾರಗಳ ವೈಶಿಷ್ಟ್ಯ ಪೂರ್ಣ ನೃತ್ಯದೊಂದಿಗೆ ಸಮೀಪದ ಕೈಕಾಡು ಗ್ರಾಮದ ಮಕ್ಕೋಟು ಶ್ರೀ ಮಹಾಲಕ್ಷ್ಮಿ ದೇವಿಯ ವಾರ್ಷಿಕ ಉತ್ಸವ ಸಂಪನ್ನಗೊಂಡಿತು.
ಉತ್ಸವದ ಪ್ರಯುಕ್ತ ತಾ. 14 ರಂದು ಪಟ್ಟಣಿ ಹಬ್ಬ, ಸಂಜೆ ಅಯ್ಯಪ್ಪ ದೇವರ ಕೋಲ. ತಾ. 15 ರಂದು ಬೆಳಿಗ್ಗೆ ಎತ್ತೇರಾಟ, ಪೀಲಿಯಾಟ್, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಕೊಡಗಿನಲ್ಲಿ ಮಹಾಲಕ್ಷ್ಮಿ ದೇವಳ ಅಪರೂಪವಾಗಿರುವದರಿಂದ ಹಾಗೂ ಇಲ್ಲಿನ ವೈಶಿಷ್ಟ್ಯ ಪೂರ್ಣ ನೃತ್ಯಗಳಿಂದ ಇದು ಬಹಳ ಪ್ರಸಿದ್ಧಿ ಪಡೆದಿದೆ.
ಮಕ್ಕೋಟು ಮಹಾಲಕ್ಷ್ಮಿ ಎಂದರೆ ಹೆಚ್ಚಿನವರಿಗೆ ನೆನಪಾಗುವದು ಆ ದೇವಾಲಯದ ಹಬ್ಬದ ಸಮಯದಲ್ಲಿ ಪ್ರದರ್ಶಿಸಲಾಗುವ ವಿಶಿಷ್ಟ ತರಹದ ನೃತ್ಯಗಳು. ಇಲ್ಲಿ ನಡೆದ ಉತ್ಸವದಲ್ಲಿ ನೃತ್ಯಗಳದ್ದೇ ವೈಶಿಷ್ಟ್ಯ. ಒಂದಲ್ಲ, ಎರಡಲ್ಲ, ಸುಮಾರು ಹದಿನೆಂಟು ಬಗೆಯ ನೃತ್ಯಗಳ ಪ್ರದರ್ಶನ ಇಲ್ಲಿನ ಉತ್ಸವಕ್ಕೆ ವಿಶೇಷ ಮೆರಗು ನೀಡಿತು.
ಉತ್ಸವದಲ್ಲಿ ನವಿಲಾಟ್, ಬಿಲ್ಲಾಟ್, ಕೈಯಾಟ್, ಕತ್ತಿಯಾಟ್, ಕೊಂಬಾಟ್, ದೇವರ ಗೊಂಬೆಯಾಟ್-ಹೀಗೆ ಹದಿನೆಂಟು ಬಗೆಯ ನೃತ್ಯಗಳನ್ನು ಪ್ರದರ್ಶಿಸಲಾಯಿತು. (ಕೊಡವ ಭಾಷೆಯಲ್ಲಿ ಆಟ್ ಎಂದರೆ ನೃತ್ಯ ಎಂದರ್ಥ) ಕೈಗಳನ್ನು ವಿವಿಧ ರೀತಿಯಲ್ಲಿ ತಿರುಗಿಸಿ ಮಾಡುವ ಕೈ ನೃತ್ಯದಿಂದ ಹಿಡಿದು ಬಿಲ್ಲು, ಕತ್ತಿ, ಕೊಂಬು, ನವಿಲುಗರಿ, ದೇವರ ವಿಗ್ರಹ ಹೀಗೆ ಬಗೆ ಬಗೆಯ ಸಲಕರಣೆಗಳನ್ನು ಹಿಡಿದು ನರ್ತಿಸಿದರು.
ಇದು ಅತ್ಯಂತ ಪುರಾತನ ದೇವಾಲಯವಾಗಿದ್ದು ಇಲ್ಲಿ ಎರಡು ವರ್ಷಗಳಿಗೊಮ್ಮೆ ಉತ್ಸವ ನಡೆಯುತ್ತದೆ. ಒಂದು ವರ್ಷ ಮಹಾಲಕ್ಷ್ಮಿ ದೇವಿಯ ಉತ್ಸವ ನಡೆದರೆ, ಮುಂದಿನ ವರ್ಷ ವಿಷ್ಣುಮೂರ್ತಿ ಮತ್ತು ಶಾಸ್ತವು ದೇವರ ಹಬ್ಬಗಳನ್ನು ನಡೆಯುತ್ತದೆ.
ಇಲ್ಲಿನ ಮಕ್ಕೋಟು ಕೇರಿಯ ಏಳು ಕುಟುಂಬಗಳ ಸದಸ್ಯರು ಸೇರಿ ಇಲ್ಲಿ ನೃತ್ಯಗಳನ್ನು ಪ್ರದರ್ಶಿಸುತ್ತಾರೆ. ಉತ್ಸವದ ಹದಿನೈದು ದಿನಗಳಿಗೆ ಮುಂಚಿತವಾಗಿ ಪೀಲಿಯಾಟ್ ಮಾನಿ ಎಂಬ ಸ್ಥಳದಲ್ಲಿ ರಾತ್ರಿ ಶುದ್ಧದಿಂದ ನೃತ್ಯ ತರಬೇತಿ ಪಡೆಯುತ್ತಾರೆ.
ಉತ್ಸವದ ದಿನ ಮಾತ್ರ ದೇವಳದ ಎದುರು ನೃತ್ಯ ಪ್ರದರ್ಶನ ನಡೆಯುತ್ತದೆ. ನೃತ್ಯಗಳಲ್ಲಿ ಹದಿನೆಂಟು ವಿಧಗಳಿದ್ದು ಪ್ರತಿಯೊಂದನ್ನು ಎರಡೆರಡು ಬಾರಿ ಪ್ರದರ್ಶಿಸಲಾಗುತ್ತದೆ. ನೃತ್ಯದಲ್ಲಿ ಪಾಲ್ಗೊಳ್ಳುವವರು ಸಾಂಪ್ರದಾಯಿಕ, ಆಕರ್ಷಕ ಬಣ್ಣದ ಉಡುಪು ಧರಿಸುವದರಿಂದ ಇದು ಹೆಚ್ಚಿನ ಗಮನ ಸೆಳೆಯುತ್ತದೆ.
ದೇವಾಲಯದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದರೂ ಸಹ ಸಾಂಪ್ರದಾಯಿಕ ಆಚರಣೆಗಳಾದ ನೃತ್ಯಗಳು ವೈಶಿಷ್ಟ್ಯ ಪೂರ್ಣವಾಗಿದೆ ಎನ್ನುತ್ತಾರೆ ವೀಕ್ಷಕರು.
ಕೂಡಿಗೆ: ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದ ವಾರ್ಷಿಕ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ಶ್ರೀ ಗಣಪತಿ ಹೋಮ, ಶ್ರೀ ಮೃತ್ಯಂಜಯ ಹೋಮ, ಪ್ರಧಾನ ದೇವರಿಗೆ ಹಾಗೂ ಇತರೆ ಉಪ ದೇವತೆಗಳಿಗೆ ವಿಶೇಷ ಅಭಿಷೇಕ, ಅರ್ಚನೆ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ಅರ್ಚಕ ಸುಬ್ರಮಣ್ಯ ಅವರ ನೇತೃತ್ವದಲ್ಲಿ ನಡೆದವು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗದೊಂದಿಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ಸಮಿತಿಯ ಟಿ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಇದ್ದರು.
ಸುಂಟಿಕೊಪ್ಪ: ಇಲ್ಲಿನ ಶ್ರೀ ಕೋದಂಡರಾಮ ಮಂದಿರದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಶ್ರೀ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ವಿಶೇಷ ಪೂಜೆಯೊಂದಿಗೆ ರಾಮೋತ್ಸವವನ್ನು ನೆರವೇರಿಸಲಾಯಿತು.
ದೇವಸ್ಥಾನವನ್ನು ವಿದ್ಯುತ್ ದೀಪಾಲಂಕಾರ ಹಾಗೂ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಗಣಪತಿ ಹೋಮ, ರಾಮತಾರಕ ಹೋಮ, ಮಧ್ಯಾಹ್ನ 1. ಗಂಟೆಗೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ನಂತರ ಅನ್ನಸಂತರ್ಪಣೆ ನಡೆಸಲಾಯಿತು.
ಅರ್ಚಕ ಗಣೇಶ ಭಟ್ ನೇತೃತ್ವದಲ್ಲಿ ಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್ ಉಪಾಧ್ಯಕ್ಷ ರವಿ, ಕಾರ್ಯದರ್ಶಿ ಬಿ.ಎಂ. ಲಕ್ಷ್ಮಣ, ಮಾಜಿ ಅಧ್ಯಕ್ಷ ಧನು ಕಾವೇರಪ್ಪ, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ, ನಗರ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನೀಲ್ ಇತರರು ಹಾಜರಿದ್ದರು.
ಚೆಯ್ಯಂಡಾಣೆ: ಇಲ್ಲಿನ ನರಿಯಂದಡ ಗ್ರಾಮದ ಶ್ರೀ ಭಗವತಿ ಹಾಗೂ ವಿಷ್ಣುಮೂರ್ತಿ ದೇವರ ವಾರ್ಷಿಕ ಉತ್ಸವ ತಾ. 18 ರಂದು ಪ್ರಾರಂಭವಾಗಿ, ತಾ. 21 ರಂದು ಕೊನೆಗೊಳ್ಳಲಿದೆ. ತಾ. 18 ರಂದು ಚಂಡಿಕಾ ಹೋಮ, ಸಂಜೆ ಚೆಯ್ಯಂಡ ಕುಟುಂಬದಿಂದ ಭಂಡಾರ ತರುವದು, ತಾ. 19 ರಂದು ದೊಡ್ಡ ಹಬ್ಬ, ಸಂಜೆ ಕ್ಷೇತ್ರಪಾಲ ದೇವರ ತೆರೆ, ತಾ. 21 ರಂದು ವಿಷ್ಣುಮೂರ್ತಿ ದೇವರ ಮೇಲೇರಿ ನಡೆಯಲಿರುವದಾಗಿ ಆಡಳಿತ ಮಂಡಳಿ ತಿಳಿಸಿದೆ.ಗೋಣಿಕೊಪ್ಪಲು: ವೀರಾಜಪೇಟೆ ತಾಲೂಕು ಬಿಟ್ಟಂಗಾಲದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಪೊನ್ನಿಮನೆ ಅಯ್ಯಪ್ಪ ಬೋಟೆ ಚಾಮುಂಡಿ ವಾರ್ಷಿಕ ಉತ್ಸವ ಯಶಸ್ವಿಯಾಗಿ ಜರುಗಿತು. ಭಕ್ತಾದಿಗಳು ಸಂಪನ್ನಗೊಂಡರು. ಗಣಪತಿಗೆ ಪೂಜೆ ಸಲ್ಲಿಸುವದರೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ರಾತ್ರಿ ದೇವರ ಭಂಡಾರದೊಂದಿಗೆ ತೆರಳಿ ಕೊಟ್ಟಿಪಾಡೋ, ಜೋಡಿ ತೆರೆ ಸೇರಿದಂತೆ ಬೋಟೆ ಚಾಮುಂಡಿ ತೆರೆ, ವಿಷ್ಟು ಮೂರ್ತಿ ತೆರೆ, ವಿವಿಧ ಕೋಲಗಳು ಶ್ರದ್ಧಾಭಕ್ತಿಯಿಂದ ನಡೆಯಿತು.
ಹುದಿಕೇರಿ: ಸಮೀಪದ ಬೆಳ್ಳೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವರ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ನಡೆಯಿತು. ಏಳು ದಿನಗಳ ಕಾಲ ನಡೆದ ಹಬ್ಬದ ಕೊನೆಯ ದಿನ ದೇವರ ಅವಭೃತ ಸ್ನಾನ, ನೃತ್ಯ ಬಲಿ, ವಸಂತ ಪೂಜೆ, ಅಲಂಕಾರ ಪೂಜೆಗಳು ನಡೆದವು. ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.
ಸುಂಟಿಕೊಪ್ಪ: ಕಂಬಿಬಾಣೆ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ರಾಮ ಮಂದಿರದಲ್ಲಿ ರಾಮನಮಿಯ ಅಂಗವಾಗಿ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ವಿಶೇಷ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ಕಂಬಿಬಾಣೆ ವಿಎಸ್‍ಎಸ್‍ಎನ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತಿಗೊಂಡಿರುವ ಕೊರಗಪ್ಪ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಶಶಿಕಾಂತ ರೈ, ಕಾರ್ಯದರ್ಶಿ ಜವಹರ್, ಖಜಾಂಚಿ ಆನಂದ, ಜಯಂತ, ಮಂಜುನಾಥ್, ಸಿದ್ಧಪ್ಪ, ಗಂಗಾಧರ ಹಾಗೂ ಪದಾಧಿಕಾರಿಗಳು ಇದ್ದರು.
ನಾಪೆÇೀಕ್ಲು: ಸಮೀಪದ ಕಕ್ಕುಂದಕಾಡು ಕರಿ ಚಾಮುಂಡಿ ದೇವರ ಉತ್ಸವ ತಾ. 14 ರಿಂದ 15 ರವರೆಗೆ ನಡೆಯಿತು. ಈ ಪ್ರಯುಕ್ತ ತೋತ, ತಮಚ್ಚ, ಅಂಗಾರ ಮತ್ತು ಕೊರ್ತಿ ದೈವಗಳ ಕೋಲಗಳು ಹಾಗೂ ಗುಳಿಗರಾಜ ಹಾಗೂ ಕರಿ ಚಾಮುಂಡಿ ದೈವಗಳ ಕೋಲಗಳು ನಡೆದವು.ಶನಿವಾರಸಂತೆ: ಶ್ರೀರಾಮ ನವಮಿ ಪ್ರಯುಕ್ತ ಪಟ್ಟಣದ ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸೀತಾ-ಲಕ್ಷ್ಮಣ, ಆಂಜನೇಯ ಸಹಿತ ಶ್ರೀ ರಾಮ ದೇವರ ಉತ್ಸವ ಮೂರ್ತಿಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ರಾತ್ರಿ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಸೇವಾ ಸಮಿತಿ ಅಧ್ಯಕ್ಷ ಅರವಿಂದ್, ಕಾರ್ಯದರ್ಶಿ ಬಿ.ಎಸ್. ಪ್ರಕಾಶ್ ಹಾಗೂ ನಿರ್ದೇಶಕರು ಹಾಜರಿದ್ದರು.
ಮಡಿಕೇರಿ: ಮಾದಾಪುರ ಬಳಿ ಇಗ್ಗೋಡ್ಲುವಿನ ಶ್ರೀ ಕುಂತೀಶ್ವರ ದೇವರ ವಾರ್ಷಿಕ ಉತ್ಸವ ತಾ. 19 ರಂದು ಜರುಗಲಿದೆ. ಅಂದು ದೇವರ ವಾರ್ಷಿಕ ಪೂಜೆ, ಹರಕೆ ಸಲ್ಲಿಕೆ, ಬೊಳಕಾಟ್, ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಖಾಂತರ ಹಬ್ಬಕ್ಕೆ ತೆರೆ ಬೀಳಲಿದೆ.
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದ ಶ್ರೀ ಮುತ್ತಪ್ಪ ದೇವಾಲಯದ 5ನೇ ವರ್ಷದ ವಾರ್ಷಿಕೋತ್ಸವ ಮತ್ತು ದೀಪಸ್ತಂಭ ಪ್ರತಿಷ್ಠಾಪನಾ ಮಹೋತ್ಸವ ತಾ. 19 ರ ಶುಕ್ರವಾರದಿಂದ ತಾ. 21 ರವರೆಗೆ ನಡೆಯಲಿದೆ. ಕಗ್ಗೋಡ್ಲು ಶ್ರೀ ರಾಮಚಂದ್ರ ಭಟ್ ವಿವಿಧ ಪೂಜಾ ಕಾರ್ಯಗಳನ್ನು ನಡೆಸುವರು.
ತಾ. 21 ರಂದು ಸಂಜೆ 6 ಗಂಟೆಯಿಂದ ಮುತ್ತಪ್ಪ ವೆಳ್ಳಾಟಂ ನಡೆಯಲಿದೆ. ಬೆಳಿಗ್ಗೆ 5.30ಕ್ಕೆ ಶ್ರೀ ಮುತ್ತಪ್ಪ ತಿರುವಪ್ಪ ತೆರೆ ಮಹೋತ್ಸವ ನಡೆಯಲಿದೆ. ಈ ದಿನಗಳಲ್ಲಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಮಡಿಕೇರಿ: ಬಲ್ಲಮಾವಟಿ ಗ್ರಾಮದ ಶ್ರೀ ಭಗವತಿ ಭದ್ರಕಾಳಿ ದೇವರ ಹಬ್ಬ ತಾ. 23 ರಂದು ನಡೆಯಲಿದೆ.
ಗಾಳಿಬೀಡು: ಒಂದನೇ ಮೊಣ್ಣಂಗೇರಿಯ ಶ್ರೀಶಕ್ತಿ ಗಣಪತಿ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಮೇ 11 ರಿಂದ 13 ರವರೆಗೆ ನಡೆಯಲಿದೆ.
ಕಾಸರಗೋಡಿನ ತಂತ್ರಿಗಳಾದ ಗೋಪಾಲಕೃಷ್ಣ ಕೆದಿಲಾಯ ನೇತೃತ್ವದಲ್ಲಿ ಪ್ರತಿಷ್ಠಾಪನಾ ಮಹೋತ್ಸವವನ್ನು ನಡೆಸಲು ನಿಶ್ಚಯಿಸಿದ್ದು, ಅಂದು ಸಂಜೆ 4 ಗಂಟೆಗೆ ಉಗ್ರಾಣ ಪೂಜೆ, 6 ಗಂಟೆಗೆ ಶಿಲ್ಪಿಗಳಿಂದ ಸ್ವೀಕಾರ, 7 ಗಂಟೆಗೆ ಪ್ರಾರ್ಥನೆ ಮತ್ತು ಆಚಾರ್ಯವರಣ, 7.30ಕ್ಕೆ ಸ್ಥಳ ಶುದ್ಧಿ ಹಾಗೂ ಸಪ್ತ ಶುದ್ಧಿ, ಅಂಕುರ ಪೂಜೆ, ಗೋ ಪ್ರವೇಶನ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಜಲಾಧಿವಾಸ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಗ್‍ಬಲಿ, ಪ್ರಸಾದ ವಿತರಣೆಯಾಗಲಿದೆ.
ಮೇ 12 ರಂದು ಬೆಳಿಗ್ಗೆ 6 ಗಂಟೆಯಿಂದ ಸ್ಥಳ ಶುದ್ಧಿ, ಅಂಕುರಪೂಜೆ, ಗಣಹೋಮ, ಪಂಚತತ್ವ ಹೋಮ, ಕಲಾಹೋಮ, ದಾನ್ಯಾಧಿವಾಸ, ಅಂಕುರ ಪೂಜೆ, ಪ್ರಸಾದ ವಿತರಣೆ ನಡೆಯಲಿದ್ದು, ಸಂಜೆ 6 ಗಂಟೆಯಿಂದ ಅದಿವಾಸ ಹೋಮ, ಅಂಕುರ ಪೂಜೆ, ದುರ್ಗಾಪೂಜೆ, ಬ್ರಹ್ಮಕಲಶ ಪ್ರತಿಷ್ಠೆ, ದೇವತಾ ಶಯನ ನಡೆಯಲಿದೆ.
ಮೇ 13 ರಂದು ಬೆಳಿಗ್ಗೆ 5 ಗಂಟೆಯಿಂದ ಸ್ಥಳ ಶುದ್ಧಿ, ಮಹಾ ಗಣಹೋಮ ನಡೆಯಲಿದ್ದು, 7.10 ನಿಮಿಷಕ್ಕೆ ವೃಷಭ ಲಗ್ನದಲ್ಲಿ ಪ್ರತಿಷ್ಠೆ, ಮಹಾಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಮಂತ್ರಾಕ್ಷತೆ ನಡೆಯಲಿದೆ ಎಂದು ಶ್ರೀ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ. ಎಸ್. ಚಂದ್ರಕುಮಾರ್ ಮತ್ತು ಖಜಾಂಚಿ ನವೀನ್ ದೇರಳ ತಿಳಿಸಿದ್ದಾರೆ.
ನಿಟ್ಟೂರು-ಕಾರ್ಮಾಡು: ಇಲ್ಲಿನ ಶ್ರೀ ಕಾಲಭೈರವ ದೇವರ ಪ್ರತಿಷ್ಠಾ, ಬ್ರಹ್ಮ ಕಲಶೋತ್ಸವ ಮೇ 1 ರಿಂದ 3 ರವರೆಗೆ ನಡೆಯಲಿದೆ. ಮೇ 1 ರಂದು ಬೆಳಿಗ್ಗೆ 6.30 ರಿಂದ ಗಣಪತಿ ಹೋಮ, ಸ್ಥಳಶುದ್ಧಿ, ವಾಸ್ತು ಹೋಮ, ವಾಸ್ತು ಪೂಜೆ ಇತ್ಯಾದಿ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.
ಮೇ 2 ರಂದು ಬೆಳಿಗ್ಗೆ 6.30 ರಿಂದ ಗಣಪತಿ ಹೋಮ, ರುಧ್ರಯಾಗ, ಬಿಂಬಶುದ್ಧಿ, ದುರ್ಗಾ ಪೂಜೆ, ಆಶ್ಲೇಷ ಬಲಿ ಇತ್ಯಾದಿ ರಾತ್ರಿ 8 ಗಂಟೆಯವರೆಗೆ ಜರುಗಲಿದೆ. ಮೇ 3 ರಂದು ಬೆಳಿಗ್ಗೆ 6.30 ರಿಂದ ಗಣಪತಿ ಹೋಮ, ಬ್ರಹ್ಮಕಲಶ, ಸಹ ಪರುವಾರ ದೇವರ ಪ್ರತಿಷ್ಠೆ ಮಹಾಪೂಜೆ, ಅನ್ನಸಂತರ್ಪಣೆ, ಮಧ್ಯಾಹ್ನ 1 ಗಂಟೆಯವರೆಗೆ ಮುಂದುವರಿಯಲಿದೆ.
ಶ್ರೀ ಕಾಲಭೈರವ ದೇವರ ವಾರ್ಷಿಕೋತ್ಸವ ಮೇ 6 ರಿಂದ 8 ರವರೆಗೆ ಜರುಗಲಿದೆ.
ಸೋಮವಾರಪೇಟೆ: ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘ ಹಾಗೂ ಮೈಸೂರಿನ ಶ್ರೀ ವೇದಮಾತ ಗುರುಕುಲದ ಆಶ್ರಯದಲ್ಲಿ ತಾ. 20 ಹಾಗೂ 21 ರಂದು ಪುಷ್ಪ ಗಿರಿಯ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಸನ್ನಿದಿಯಲ್ಲಿ ಲೋಕ ಕಲ್ಯಾಣಾರ್ಥ ಮಹಾರುದ್ರ ಯಾಗ ನಡೆಯಲಿದೆ.
ತಾ. 20 ರಂದು ರಾತ್ರಿ ಭಜನೆ, ತಾ. 21 ರಂದು ಬೆಳಿಗ್ಗೆ 6 ಗಂಟೆಗೆ ಗಂಗಾ ಪೂಜೆ, ರುದ್ರಾಭಿಷೇಕ ಬೆಳಿಗ್ಗೆ 10 ಗಂಟೆಗೆ ಮಹಾರುದ್ರ ಯಾಗ, ಪುರ್ಣಾಹುತಿ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಅರ್ಚಕರ ಮತ್ತು ಪುರೋಹಿತರ ಸಂಘದ ಕಾರ್ಯದರ್ಶಿ ಕೆ.ಬಿ. ಸೋಮಶೇಖರ್ ಶಾಸ್ತ್ರಿ ತಿಳಿಸಿದ್ದಾರೆ.