ಗೋಣಿಕೊಪ್ಪ ವರದಿ, ಏ. 17 : ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ತಾ. 24 ರಿಂದ ಆರಂಭ ಗೊಳ್ಳಲಿರುವ ಇಡೆಮಲೆಲಾತ್ಲೇರ ಆದಿವಾಸಿ ಕ್ರಿಕೆಟ್ ಕಪ್ ಟ್ರೋಫಿಯನ್ನು ದಾನಿಗಳ ಮೂಲಕ ಅನಾವರಣ ಗೊಳಿಸಲಾಯಿತು.ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಾನಿ ಉಂಬಾಯಿ ಅನಾವರಣ ಗೊಳಿಸಿದರು. ನಂತರ ಮಾತನಾಡಿ, ಆದಿವಾಸಿಗಳಿಗೆ ಪ್ರೋತ್ಸಾಹ ನೀಡುತ್ತಿರುವದು ಖುಶಿ ತಂದಿದೆ ಎಂದರು.
ಯರವ ಸಮಾಜ ಅಧ್ಯಕ್ಷ ವೈ. ಎಂ. ಶಾಂತಕುಮಾರ್ ಮಾತನಾಡಿ, ಆದಿವಾಸಿಗಳನ್ನು ಕ್ರೀಡೆಯ ಮೂಲಕ ಒಂದೆಡೆ ಸೆಳೆಯುವ ಉದ್ದೇಶದಿಂದ ಯರವ ಸಮಾಜದ ಕ್ರಿಕೆಟ್ ಪಂದ್ಯಾಟ ನಡೆಸಲಾಗುತ್ತಿದೆ. ಯರವ ಹಾಗೂ ಕುರುಬ ಜನಾಂಗದ 48 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಟ್ರೋಫಿ ದಾನ ಮಾಡುವ ಮೂಲಕ ದಾನಿಗಳು ಪ್ರೋತ್ಸಾಹ ನೀಡುತ್ತಿರು ವದು ನಮಗೆ ಆತ್ಮಬಲ ಹೆಚ್ಚಿಸಿದೆ ಎಂದರು.
ತಾ. 28 ರವರೆಗೆ ನಡೆಯುವ ಕ್ರೀಡಾಕೂಟದಲ್ಲಿ 3 ಸಾವಿರಕ್ಕೂ ಅಧಿಕ ಆದಿವಾಸಿಗಳು ಪಾಲ್ಗೊಳ್ಳಲಿ ದ್ದಾರೆ. ರೂ. 5 ಲಕ್ಷ ವೆಚ್ಚದಲ್ಲಿ ಟೂರ್ನಿ ನಡೆಯಲಿದೆ ಎಂದರು.
ಈ ಸಂದರ್ಭ ಯರವ ಸಮಾಜದ ಸಂಚಾಲಕ ಪಿ.ಕೆ. ಸಿದ್ದಪ್ಪ, ನಿರ್ದೇಶಕರುಗಳಾದ ಪಿ.ಎಸ್. ಶಶಿ, ಮಲ್ಲಪ್ಪ, ಕರಣ್ ಹಾಗೂ ಮಣಿ ಉಪಸ್ಥಿತರಿದ್ದರು.