ಮಡಿಕೇರಿ, ಏ. 17 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀಕಂಚಿ ಕಾಮಾಕ್ಷಿಯಮ್ಮ ದೇವಾಲಯದ 12ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮತ್ತು ಕುಂಭಾಭಿಷೇಕ
ತಾ. 20 ರಿಂದ 22ರ ವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಎ.ಲೋಕನಾಥ್ ಹಾಗೂ ಉಪಾಧ್ಯಕ್ಷ ಜಿ.ವಿ.ರವಿಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇರಳದ ಪಯ್ಯನೂರಿನ ಶ್ರೀ ಈಶ್ವರ ನಂಬೂದರಿಯವರ ನೇತೃತ್ವದಲ್ಲಿ 3 ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ತಾ. 20 ರಂದು ಬೆಳಿಗ್ಗೆ 11 ಗಂಟೆಗೆ ಆಚಾರ್ಯ ಆಗಮನ, ನಂತರ ಪಶುದಾನ ಪುಣ್ಯಾಹ, ವಿಷ್ಣು ಪೂಜೆ, ಸಂಜೆ 5 ಗಂಟೆಗೆ ಭಗವತಿ ಸೇವೆ, ಸುದರ್ಶನ ಹೋಮ ಮತ್ತು ವಾಸ್ತು ಬಲಿ ಪೂಜೆ ನಡೆಯಲಿದೆ.
ತಾ. 21 ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, ತಿಲ ಹೋಮ, ಮಹಾಮೃತ್ಯುಂಜಯ ಹೋಮ ನಡೆಯಲಿದ್ದು, ಸಂಜೆ ಬಿಂಬ ಶುದ್ದಿ, ಕಳಸಗಳಿಗೆ ವಿಶೇಷ ಪೂಜೆ ಜರುಗಲಿದೆ.
ಕೋಶಾಧಿಕಾರಿ ರಮೇಶ್ ಮಾತನಾಡಿ, ತಾ. 21 ರಂದು ಸಂಜೆ 4 ಗಂಟೆಗೆ ಕೇರಳದ ಸಾಂಪ್ರದಾಯಿಕ ಚಂಡೆವಾದ್ಯ, ಸಿಂಗಾರಿ ಮೇಳ, ತೇಯ್ಯಂ ಕಥಕಳಿ ಕುಣಿತ, ನವಿಲು ಕುಣಿತ ಹಾಗೂ ಕೊಡಗಿನ ವೈವಿಧ್ಯಮಯ ಕಲಾ ತಂಡಗಳೊಂದಿಗೆ ನಗರದ ಮುಖ್ಯ ಬೀದಿಯಲ್ಲಿ ಕಳಸಗಳ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ತಾ. 22 ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಳಸ ಪೂಜೆ, ಕಳಸಾಭಿಷೇಕ, ಮಹಾ ಕುಂಭಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ.
ಮೂರು ದಿನವು ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದರು.
ದೇವಿಗೆ ಆಭರಣ ಸಮರ್ಪಣೆ : ಐತಿಹಾಸಿಕ ಮಡಿಕೇರಿ ದಸರಾ ಮಂಟಪಗಳ ಶೋಭಾಯಾತ್ರೆಯಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿ ಹಲವಾರು ವರ್ಷ ಬಹುಮಾನವಾಗಿ ಪಡೆದಿರುವ ಚಿನ್ನದ ನಾಣ್ಯಗಳಲ್ಲಿ ಅಂದಾಜು 10 ಪವನ್ ಹೊಂದಿರುವ ಚಿನ್ನದ ತಾಳಿ ಸರಗಳನ್ನು ತಯಾರಿಸಿ ಕಂಚಿಕಾಮಾಕ್ಷಿಯಮ್ಮ ಹಾಗೂ ಮುತ್ತು ಮಾರಿಯಮ್ಮ ದೇವಿಗೆ ತಾ. 21 ರಂದು ಸಂಜೆ ಸಮರ್ಪಿಸಲಾಗುವದು ಎಂದು ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗಾಗಿ : 9448448665, 9916627020 ಸಂಪರ್ಕಿಸಬಹುದೆಂದರು.
ಸುದ್ದಿಗೋಷ್ಠಿಯಲ್ಲಿ ದೇವಾಲಯದ ಆಡಳಿತ ಮಂಡಳಿಯ ಗೌರವ ಅಧ್ಯಕ್ಷÀ ಜಿ.ಎ.ಚಾಮಿ ಹಾಗೂ ಉಪಾಧ್ಯಕ್ಷÀ ಜಿ.ಪಿ. ಶ್ರೀನಿವಾಸ್ ಉಪಸ್ಥಿತರಿದ್ದರು.