ಮಡಿಕೇರಿ, ಏ. 17: ಸುಂಟಿಕೊಪ್ಪ ಬಳಿ ಅತ್ತೂರು - ನಲ್ಲೂರು ಹಾಗೂ ಸುತ್ತಮುತ್ತ ನಾಲ್ಕಾರು ಕಾಡಾನೆಗಳು ಕಾಫಿ ತೋಟಗಳ ನಡುವೆ ಸುಳಿದಾಡುತ್ತಾ ತೀವ್ರ ಹಾನಿ ಉಂಟುಮಾಡುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಿರಂತರ ಕಾಡಾನೆಗಳ ಉಪಟಳ ಬಗ್ಗೆ ಅರಣ್ಯ ಇಲಾಖೆಯ ಮಂದಿ ನಿರ್ಲಕ್ಷ್ಯ ತಳೆದಿದ್ದಾಗಿಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತ್ತೂರು - ನಲ್ಲೂರುವಿನ ಮಹಾಲಕ್ಷ್ಮೀ ತೋಟದಲ್ಲಿ ಕಾಡಾನೆಗಳು ತೋಟಕ್ಕೆ ನೀರು ಹಾಯಿಸುವ ಪೈಪ್‍ಗಳನ್ನು ಕೂಡ ಹಾನಿಗೊಳಿಸಿದ್ದು, ಬಿಸಿಲಿನ ಸುಡು ತಾಪದಿಂದ ಗಿಡಗಳು ಹಾನಿಗೊಳ್ಳದಂತೆ ತಡೆಯಲು ನೀರು ಹಾಯಿಸುತ್ತಿದ್ದು, ರಾತ್ರಿ ವೇಳೆ ದಾಳಿಯಿಟ್ಟಿರುವ ಕಾಡಾನೆಗಳು ಪೈಪ್‍ಗಳನ್ನು ಧ್ವಂಸಗೊಳಿಸಿವೆ ಎಂದು ಅಲ್ಲಿನ ನಿವಾಸಿ ಕೆ.ಬಿ. ಅಪ್ಪಯ್ಯ ತಿಳಿಸಿದ್ದಾರೆ.
ಇನ್ನಾದರೂ ಅರಣ್ಯ ಇಲಾಖೆ ಕಾಡಾನೆಗಳ ಉಪಟಳ ತಡೆಗಟ್ಟಲು ಸೂಕ್ತ ಕ್ರಮ ಕೈಗೊಂಡು, ಬೆಳೆಗಾರರಿಗೆ ನಷ್ಟದ ಬಗ್ಗೆ ಅಗತ್ಯ ಗಮನ ಹರಿಸಲು ಒತ್ತಾಯಿಸಿದ್ದಾರೆ. ಕಾಡಾನೆಗಳ ಉಪಟಳದಿಂದ ಗ್ರಾಮದಲ್ಲಿ ಭಯದ ವಾತಾವರಣದೊಂದಿಗೆ; ಕಾರ್ಮಿಕರು ತೋಟ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.