ಮಡಿಕೇರಿ, ಏ. 13: ಕೊಡಗಿನ ಮತದಾರರ ಟೀಕೆಯನ್ನು ಸಹಿಸಿಕೊಳ್ಳಲಾಗದೆ ನರೇಂದ್ರ ಮೋದಿ ಅವರ ಮುಖ ನೋಡಿ ಮತ ನೀಡಿ ಎಂದು ಮತಯಾ ಚಿಸುವ ಮೂಲಕ ತಮ್ಮ ಸೋಲನ್ನು ಈಗಾಗಲೇ ಬಿ.ಜೆ.ಪಿ. ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಒಪ್ಪಿಕೊಂಡು ಬಿಟ್ಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್ ವ್ಯಂಗ್ಯವಾಡಿದ್ದಾರೆ.

ಡಾ. ಕಸ್ತೂರಿ ರಂಗನ್ ವರದಿ ಜಾರಿ ವಿವಾದವನ್ನು ನನ್ನ ಹೆಗಲಿಗೆ ಬಿಡಿ ಎಂದು ಹೇಳಿ ಐದು ವರ್ಷಗಳೇ ಕಳೆದಿದ್ದರೂ ಸಮಸ್ಯೆಗೆ ಪರಿಹಾರ ಸೂಚಿಸಿಲ್ಲ, ಅಥವಾ ಸಾಧಕ ಬಾಧಕಗಳ ಬಗ್ಗೆ ಸ್ಪಷ್ಟತೆಯನ್ನು ಪ್ರದರ್ಶಿಸಿಲ್ಲ.

ಇದೀಗ ವರದಿ ಜಾರಿಯಾಗುವ ಹಂತದಲ್ಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಒಂದು ವೇಳೆ ವರದಿ ಅನುಷ್ಠಾನದಿಂದ ಕೊಡಗಿನ ಬೆಳೆಗಾರರು ಹಾಗೂ ರೈತ ಸಮೂಹದ ಅಸ್ತಿತ್ವಕ್ಕೆ ಧಕ್ಕೆಯಾದರೆ ಅದಕ್ಕೆ ಪ್ರತಾಪ್ ಸಿಂಹ ಅವರೇ ನೇರ ಹೊಣೆಗಾರರಾಗುತ್ತಾರೆ ಎಂದರು.

ದೇಶಭಕ್ತ ಯೋಧರು ದೇಶದ ರಕ್ಷಣೆಗಾಗಿ ಹುತಾತ್ಮರಾಗುತ್ತಿದ್ದಾರೆ. ದೇಶಕ್ಕಾಗಿ ಮಾಡಿದ ಬಲಿದಾನವನ್ನು ಬಿಜೆಪಿ ರಾಜಕೀಯಕ್ಕಾಗಿ ಬಳಸಿ ಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಘಟಕದ ಸಂಯೋಜಕ ಎಂ.ಎ. ಉಸ್ಮಾನ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಕೆ.ಇ. ಮ್ಯಾಥ್ಯು, ಕುಶಾಲನಗರ ಅಧ್ಯಕ್ಷ ಅಬ್ದುಲ್ ಖಾದರ್, ನಾಪೋಕ್ಲು ಅಧ್ಯಕ್ಷ ಬಷೀರ್ ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಉಪಸ್ಥಿತರಿದ್ದರು.