ಶ್ರೀಮಂಗಲ, ಏ. 11: ನಕಲಿ ಅಂಕಪಟ್ಟಿ ನೀಡಿ ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಪಡೆದಿದ್ದ ಪ್ರಕರಣದಡಿ ಪೊನ್ನಂಪೇಟೆಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಎ.ಕೆ. ಅನಿತಾ ಕಾರ್ಯಪ್ಪ ಅವರಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ಹಾಗೂ ರೂ. 30 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಪೊನ್ನಂಪೇಟೆಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಎಂ.ಇ ಮೋಹನ್‍ಗೌಡ ಅವರು ತೀರ್ಪು ಪ್ರಕಟಿಸಿದ್ದಾರೆ. ಈ ಬಗ್ಗೆ ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಅಡ್ಡಂಡ ಕೆ. ಜನಾರ್ಧನ (ಡಾಲಿ) ಮತ್ತು ಆಡಳಿತ ಮಂಡಳಿಯವರು ಅನಿತಾ ಕಾರ್ಯಪ್ಪ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಮೊಕದ್ದಮೆಯ ಪರವಾಗಿ ಸರಕಾರಿ ಸಹಾಯಕ ಅಭಿಯೋಜಕ ಎಂ. ರಾಜೇಂದ್ರ ವಾದ ಮಂಡಿಸಿದರು.