ಗೋಣಿಕೊಪ್ಪಲು, ಏ. 11: ಆರೋಗ್ಯ ತಪಾಸಣೆ ಮಾಡಿಕೊಂಡು ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದದ್ದು ಇಂದಿನ ಅವಶ್ಯಕತೆಯಾಗಿದೆ. ಸಾರ್ವಜನಿಕ ಆರೋಗ್ಯ ಸುಧಾರಣೆಗಾಗಿ ಹಿಂದುಸ್ಥಾನ್ ಪೆಟ್ರೋಲಿಯಂ ಸಂಸ್ಥೆ ಉಚಿತ ಆರೋಗ್ಯ ಶಿಬಿರ ಆಯೋಜಿಸಿ ಜನರಲ್ಲಿ ಕಾಳಜಿ ಮೂಡುವಂತೆ ವ್ಯವಸ್ಥೆ ಮಾಡುತ್ತಿದೆ ಎಂದು ಹಿಂದುಸ್ಥಾನ್ ಪೆಟ್ರೋಲಿಯಂನ ಮಂಗಳೂರು ವಿಭಾಗದ ಡೆಪ್ಯುಟಿ ಜನರಲ್ ಮೆನೇಜರ್ ಎಂ. ವಸಂತರಾವ್ ನುಡಿದರು. ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಕುಟ್ಟದಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಮತ್ತು ಶ್ರೀ ರಾಮಕೃಷ್ಣ ಶಾರದಾ ಸೇವಾಶ್ರಮ ಆಸ್ಪತ್ರೆ, ಪೊನ್ನಂಪೇಟೆಯ ಆಶ್ರಯದಲ್ಲಿ ಅನುಗ್ರಹ ಸರ್ವಿಸ್ ಸ್ಟೇಷನ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾ ಸೇವಾಶ್ರಮದ ಅಧ್ಯಕ್ಷ ಬೋಧಸ್ವರೂಪಾನಂದ ಮಹಾರಾಜ್ ವಹಿಸಿ ಮಾತನಾಡುತ್ತಾ, ಹಿಂದೂಸ್ಥಾನ್ ಪೆಟ್ರೋಲಿಯಂನ ಕುಟ್ಟ ಗ್ರಾಮದ ಅಧೀಕೃತ ವಿತರಕ ಚಂದನ್ ಕಾಮತ್ ಅವರ ಕಾಳಜಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಮುಂದೆಯೂ ಈ ರೀತಿಯ ಆರೋಗ್ಯ ಸುಧಾರಣಾ ಕಾರ್ಯಕ್ರಮಗಳಿಗೆ ಶ್ರೀ ರಾಮಕೃಷ್ಣ ಆಸ್ಪತ್ರೆಯು ಕೈಜೋಡಿಸಲಿದೆ ಎಂದರು.
ಹಿಂದೂಸ್ಥಾನ್ ಪೆಟ್ರೋಲಿ ಯಂನ ಮೈಸೂರು ವಿಭಾಗದ ಮಾರಟಾಧಿಕಾರಿ ಅರವಿಂದ ಕುಮಾರ್ ಮಿಶ್ರ, ಕಾಮತ್ ಗ್ರೂಪ್ನ ಎಂ.ಪಿ. ಪ್ರಮೋದ್ ಕಾಮತ್ ಮತ್ತು ಜಿ.ಪಿ. ಸಾವಿತ್ರಿ ಉಪಸ್ಥಿತರಿದ್ದರು. ಮೈಸೂರಿನ ಕೆ.ಆರ್. ಆಸ್ಪತ್ರೆಯ ವೈದ್ಯರಾದ ಡಾ. ವಸಿಷ್ಟ್ ರಾಘವೇಂದ್ರ, ಡಾ. ವರುಣ್ ಆರೋಗ್ಯ ತಪಾಸಣೆ ನಡೆಸಿದರು. ಪೊನ್ನಂಪೇಟೆ ಸೇವಾಶ್ರಮ ಆಸ್ಪತ್ರೆಯ ಸಹಾಯಕ ಶುಶ್ರೂಷಕಿ ಸಿಬ್ಬಂದಿ ಸಹಕರಿಸಿದರು.
ಕುಟ್ಟದ ಕಾಫಿ ಬೆಳೆಗಾರ ನೆಲ್ಲಿರ ನಟೇಶ್, ಹೊಟ್ಟೆಂಗಡ ತಿಮ್ಮಯ್ಯ, ರಾಜಾ, ಬಸವರಾಜು, ಗ್ರಾ.ಪಂ. ಸದಸ್ಯರಾದ ಅರುಣ್ ಕಂದಪ್ಪ, ವಿಜಯ, ಸಿಬ್ಬಂದಿ ಉಪಸ್ಥಿತರಿದ್ದರು. ಎಂ.ಪಿ. ಕೇಶವ ಕಾಮತ್ ಸ್ವಾಗತಿಸಿ, ಚಂದನ್ ಕಾಮತ್ ವಂದಿಸಿದರು.