ಮಡಿಕೇರಿ, ಏ.11 : ಕರ್ನಾಟಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್‍ಎಸ್‍ಎಫ್)ನ ಜಿಲ್ಲಾ ಸಮಿತಿ ವತಿಯಿಂದ ತಾ.14ರಂದು ಕುಶಾಲನಗರ ಹಾಗೂ ವೀರಾಜಪೇಟೆಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶಾಫಿ ಸಅದಿ ಅಂದು ಕುಶಾಲನಗರದ ಕನ್ನಡ ಭಾರತಿ ಕಾಲೇಜು ಹಾಗೂ ವೀರಾಜಪೇಟೆಯ ಅನ್ವಾರುಲ್ ಹುದಾ ವಿದ್ಯಾ ಸಂಸ್ಥೆಯಲ್ಲಿ ಶಿಬಿರ ನಡೆಯಲಿದ್ದು, ಸುಮಾರು 300ಕ್ಕೂ ಅಧಿಕ ಮಂದಿ ರಕ್ತ ದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಕಳೆದ ಒಂದು ವರ್ಷದಿಂದ ಸಂಘಟನೆಯು ರಾಜ್ಯಾದ್ಯಂತ ‘ಬ್ಲಡ್ ಸೈಬೋ’ ಎಂಬ ಹೆಸರಿನಲ್ಲಿ ಶಿಬಿರಗಳನ್ನು ನಡೆಸಿ ವಿವಿಧ ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್‍ಗಳನ್ನು ಸ್ಥಾಪಿಸಲಾಗಿದೆ ಎಂದು ನುಡಿದರು. ಸಂಕಷ್ಟದಲ್ಲಿರುವವರಿಗೆ ಸಹಾಯಕವಾಗುವ ಈ ಕಾರ್ಯ ಜಾತಿ, ಧರ್ಮ ಪಂಗಡಗಳಿಗೆ ಅತೀತವಾಗಿದ್ದು, ಪರಸ್ಪರ ಪ್ರೀತಿ ವಿಶ್ವಾಸ ಸೌಹಾರ್ದತೆಯನ್ನು ಬೆಳೆಸುವ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಈ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ನುಡಿದರು.

ರಕ್ತದಾನ ಮಾಡಲಿಚ್ಛಿಸುವವರು ಹಾಗೂ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448423459 ಅಥವಾ 7760584880ನ್ನು ಸಂಪರ್ಕಿಸಬಹುದೆಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಜ್ ಸಖಾಫಿ, ಸಂಚಾಲಕ ಉನೈಸ್ ಹೊಸತೋಟ, ಶಿಹಾಬ್ ತಂಙಳ್ ಮತ್ತಿತರರು ಉಪಸ್ಥಿತರಿದ್ದರು.