ಮಡಿಕೇರಿ, ಏ. 11: ಮಾನವೀಯ ಮೌಲ್ಯ ಹೊಂದಿರುವ ಭಾವನಾತ್ಮಕ ಮನಸ್ಸಿನ ಮಾಜಿ ಪ್ರಧಾನಿ ದೇವೇಗೌಡರ ಕಣ್ಣೀರಿನ ಬಗ್ಗೆ ಪ್ರಧಾನಿ ಮೋದಿ ಅವರು ಪ್ರಚಾರ ಸಭೆಯಲ್ಲಿ ಲೇವಡಿ ಮಾಡಿರುವದು ಖಂಡನೀಯವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ. ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾವನೆಗಳೇ ಇಲ್ಲದ ಬಿಜೆಪಿಗೆ ಕಣ್ಣೀರು ಬರಲು ಸಾಧ್ಯವಿಲ್ಲವೆಂದು ಟೀಕಿಸಿದರು. ಜೆಡಿಎಸ್ ವಕ್ತಾರ ಕುಸುಮ್ ಕಾರ್ಯಪ್ಪ ಮಾತನಾಡಿ, ಬಿಜೆಪಿ ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ನಡುವೆ ಒಡಕು ಮೂಡಿಸುವ ಷಡ್ಯಂತ್ರ ರೂಪಿಸಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕ ಹೊಸೂರು ಸೂರಜ್ ಮಾತನಾಡಿ, ಮೈಸೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದ ಪ್ರಧಾನಿ ಮೋದಿ ಅವರು, ಪ್ರತಾಪ ಸಿಂಹ ಪರ ಮತಯಾಚಿಸದೆ ಸುಮಲತಾರನ್ನು ಬೆಂಬಲಿಸಿ ಎಂದು ಕರೆ ನೀಡಿದ್ದು, ಇದು ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವ ಮುನ್ಸೂಚನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯಾ ಅಬ್ರಾರ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಈ ಬಾರಿ ಮತದಾನ ಮಾಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ದೇಶದಲ್ಲಿ ಅಭಿವೃದ್ಧಿ ಮುಖ್ಯವೇ ಹೊರತು ಜಾತಿಯಲ್ಲ. ಮಹಿಳೆಯಯರ ಸಂಕಷ್ಟಕ್ಕೆ ಸ್ಪಂದಿಸುವ ಸರ್ಕಾರ ಈ ದೇಶಕ್ಕೆ ಬೆÉೀಕಾಗಿದೆ ಎಂದರು.

ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ಮಾತನಾಡಿ, ಎನ್‍ಡಿಎ ನೇತೃತ್ವದ ಸರ್ಕಾರ ದೇಶಕ್ಕೆ ಅಚ್ಛೇ ದಿನ್ ಬರಲಿದೆಯೆಂದು ಭರವಸೆ ನೀಡಿತ್ತು. ಇಂದು ಯುಪಿಎ ಸರ್ಕಾರದ ಅವಧಿಯಲ್ಲಿ ರೂ. 420 ಇದ್ದ ಅಡುಗೆ ಅನಿಲದ ಸಿಲಿಂಡರ್ ಬೆಲೆ ರೂ. 840ಕ್ಕೆ ಏರಿಕೆಯಾಗಿದೆ, ತೈಲೋತ್ಪನ್ನಗಳ ಬೆಲೆಯೂ ಗಗನಕ್ಕೇರಿದೆ. ವಾಹನಗಳ ವಿಮಾ ಹಣ ದುಬಾರಿಯಾಗಿದೆ. ಇದು ಅಚ್ಛೇ ದಿನವೇ ಎಂದು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಜೆಡಿಎಸ್ ಉಪಾಧ್ಯಕ್ಷ ಅಬ್ದುಲ್ ರಹೀಂ ಉಪಸ್ಥಿತರಿದ್ದರು.