ಸೋಮವಾರಪೇಟೆ, ಏ. 11: ಕೊಡಗು ಜಿಲ್ಲಾ ಜಾತ್ಯತೀತ ಜನತಾದಳಕ್ಕೆ ನೂತನವಾಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದ ಬೆನ್ನಲ್ಲೇ ತೀವ್ರ ಅಸಮಾಧಾನ ಹೊಂದಿದ್ದ ಜೆಡಿಎಸ್‍ನ ಹಿರಿಯ ಮುಖಂಡ ಬಿ.ಎ. ಜೀವಿಜಯ ಅವರು ಕಾಂಗ್ರೆಸ್ ಸೇರುವ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಜೆಡಿಎಸ್‍ನಲ್ಲೇ ಉಳಿದು ಪಕ್ಷದ ಅಸ್ತಿತ್ವವನ್ನು ಬಲಪಡಿಸುವ ತೀರ್ಮಾನ ಕೈಗೊಂಡಿದ್ದಾರೆ.

ಮಾಜಿ ಸಚಿವರ ಈ ತೀರ್ಮಾನದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯ ಶಂಕರ್ ಅವರಲ್ಲಿ ಸಮಾಧಾನ ಮೂಡಿದಂತಾಗಿದ್ದು, ಎರಡೂ ಪಕ್ಷಗಳ ನಡುವೆ ಒಗ್ಗಟ್ಟು ಕಾಯ್ದುಕೊಂಡು ಸೋಮವಾರಪೇಟೆ ಭಾಗದಲ್ಲಿ ಲೋಕಸಭಾ ಚುನಾವಣೆ ಯನ್ನು ಎದುರಿಸಲು ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಲೋಕಸಭಾ ಚುನಾವಣೆಯ ಕ್ಷೇತ್ರ ಉಸ್ತುವಾರಿಯೂ ಆಗಿರುವ ಮಹಾದೇವಪ್ಪ ಅವರೊಂದಿಗೆ ಮಾತುಕತೆ ನಡೆಸಿದ ಜೀವಿಜಯ ಅವರು ಕೆಲವೊಂದು ಬೇಡಿಕೆ ಮತ್ತು ಷರತ್ತುಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ.

ಜೆಡಿಎಸ್‍ಗೆ ಸಂಬಂಧಿಸಿದಂತೆ ನೂತನ ಜಿಲ್ಲಾಧ್ಯಕ್ಷರನ್ನು ಹೊರತುಪಡಿಸಿ ನಾವುಗಳೇ ಮೈತ್ರಿ ಅಭ್ಯರ್ಥಿಯ ಪರ ಕೆಲಸ ಮಾಡುತ್ತೇವೆ ಎಂಬ ಭರವಸೆ ನೀಡಿರುವದರಿಂದ ಕಾಂಗ್ರೆಸ್ ಮುಖಂಡರು ಸಮಾಧಾನ ಹೊಂದಿದ್ದಾರೆ.

ಜೆಡಿಎಸ್‍ಗೆ ಗಣೇಶ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ ನಂತರದ ದಿನಗಳಿಂದ ತೀವ್ರ ಅಸಮಾಧಾನ ಹೊಂದಿ ಪಕ್ಷದ ಕಾರ್ಯಚಟುವಟಿಕೆ ಗಳಿಂದ ದೂರವೇ ಉಳಿದಿದ್ದ ಜೀವಿಜಯ ಅವರು ನಿನ್ನೆ ಇಲ್ಲಿನ ಮಾನಸ ಸಭಾಂಗಣದಲ್ಲಿ ಬೆಂಬಲಿಗರ ಸಭೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಕೊನೆಯ ಕ್ಷಣದವರೆಗೂ ಜೀವಿಜಯ ಅವರು ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂದೇ ಭಾವಿಸಿದ್ದ ಕಾಂಗ್ರೆಸ್‍ನ ಮುಖಂಡರಿಗೆ, ಜೀವಿಜಯ ಅವರ ತೀರ್ಮಾನದ ಬಗ್ಗೆ ಕುತೂಹಲ ಮೂಡಿತ್ತು.

ತಮ್ಮ ಬೆಂಬಲಿಗರೊಂದಿಗೆ ಚರ್ಚೆ ನಡೆಸಿದ ಜೀವಿಜಯ ಅವರು ಅಂತಿಮವಾಗಿ ಮೈತ್ರಿ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಜೆಡಿಎಸ್‍ನಲ್ಲೇ ಉಳಿದು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸುವ ಘೋಷಣೆ ಮಾಡಿದರು. ಇದಕ್ಕೂ ಮೊದಲು ತಮ್ಮ ಆಪ್ತರೊಂದಿಗೆ ಮಾತುಕತೆ ನಡೆಸಿದರು.