ಮಡಿಕೇರಿ, ಏ. 10: ಕೊಡಗಿನಲ್ಲಿ ನಕ್ಸಲ್ ಚಟುವಟಿಕೆ ನಡೆಸಿದ ಆರೋಪ ದಡಿ ಶಂಕಿತ ನಕ್ಸಲ್ ಮುಖಂಡ ರೂಪೇಶ್‍ನನ್ನು ಇಂದು ಕೇರಳದ ವೈವೂರು ಕೇಂದ್ರ ಕಾರಾಗೃಹದಿಂದ ನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

2010ರಲ್ಲಿ ಮುಂಡ್ರೋಟು ಅರಣ್ಯದಲ್ಲಿ ಕಾಣಿಸಿಕೊಂಡಿದ್ದ ಆರೋಪದಡಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪೇಶ್‍ನನ್ನು ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕೇರಳ ಪೊಲೀಸರು ಕರೆ ತಂದಿದ್ದರು. ಕೋರ್ಟ್‍ನ್ನು ಪ್ರವೇಶಿಸುತ್ತಿದ್ದಂತೆ ‘ಮಾವೋಯಿಸಂ ಜಿಂದಾಬಾದ್’ ಎಂದು ಘೋಷಣೆ ಕೂಗಿ, ಲೋಕಸಭಾ ಚುನಾವಣೆಗೆ ಧಿಕ್ಕಾರ ಕೂಗಿದ ರೂಪೇಶ್‍ನನ್ನು ನ್ಯಾಯಾಧೀಶ ರೆದುರು ಹಾಜರುಪಡಿಸಿದ ವೇಳೆ ನ್ಯಾಯಾಧೀಶರಾದ ವಿ.ವಿ. ಮಲ್ಲಾಪುರ ಅವರು ವಿಚಾರಣೆಯನ್ನು ತಾ. 27ಕ್ಕೆ ಮುಂದೂಡಿದರು. ನಂತರ ರೂಪೇಶ್ ನನ್ನು ವೈವೂರು ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಕರೆದೊಯ್ದರು.