ಮಡಿಕೇರಿ, ಏ. 10: ಕರ್ನಾಟಕ ಚುನಾವಣಾ ಆಯೋಗದಿಂದ ಸಿದ್ಧಗೊಳಿಸಿರುವ ಮತದಾರರ ಪಟ್ಟಿಯಲ್ಲಿ ಲೋಪ ಉಂಟಾಗಿದ್ದು, ಇಂತಹ ಲೋಪವನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಪ್ರತಿಕ್ರಿಯಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಅನೇಕರ ಮತಗಟ್ಟೆ ವಿಳಾಸ ತಪ್ಪಾಗಿ ಮುದ್ರಣ ಗೊಂಡಿರುವದು ಗೋಚರಿಸಿದೆ. ಹೀಗಾಗಿ ಸರಕಾರಿ ನೌಕರರು ಮತದಾರರಿಗೆ ಜಾಗೃತಿ ಮೂಡಿಸುವದರೊಂದಿಗೆ, ಮತದಾರರ ಪಟ್ಟಿಯ ಮಾಹಿತಿ ಒದಗಿಸಿದ ಸಂದರ್ಭ ಈ ಲೋಪ ಬಹಿರಂಗಗೊಂಡಿದೆ.ಈ ಸಂಬಂಧ ಇಂದಿನ ‘ಶಕ್ತಿ’ ಬೆಳಕು ಚೆಲ್ಲಿದ್ದು, ಮಡಿಕೇರಿ ಹಾಗೂ ಸುತ್ತಮುತ್ತಲಿನ ಹತ್ತಾರು ಮತಗಟ್ಟೆಗಳ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಆಯಾ ಗ್ರಾಮ ಅಥವಾ ವಸತಿಯ ವಿಳಾಸವಿಲ್ಲದೆ ಕೊಲ್ಲಾಪುರ, ಕೊಲ್ಲೂರು, ಮದಲಾಪುರ ಎಂಬಿತ್ಯಾದಿ ತಪ್ಪು ಮುದ್ರಣ ಗೋಚ ರಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಇಂತಹ ವ್ಯತ್ಯಾಸವಿದ್ದಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳ ಲಾಗುವದು ಎಂದು ಭರವಸೆ ನೀಡಿದ್ದಾರೆ.
ರಾಜ್ಯ ಕಚೇರಿ ಮಾಹಿತಿ : ‘ಶಕ್ತಿ’ ಈ ಬಗ್ಗೆ ಕರ್ನಾಟಕ ಚುನಾವಣಾ ಆಯೋಗದ ಕಚೇರಿಯನ್ನು ಸಂಪರ್ಕಿಸಿದಾಗ, ಕಂಪ್ಯೂಟರ್ ‘ಸರ್ವರ್’ ಲೋಪದಿಂದ ಇಡೀ ರಾಜ್ಯದಲ್ಲಿ ಕೆಲವಷ್ಟು ಲೋಪ ಕಂಡು ಬಂದಿದ್ದರೂ, ಮತದಾರರು ಆಯಾ ಮತಗಟ್ಟೆಗಳಲ್ಲಿಯೇ ತಮ್ಮ ಹಕ್ಕು ಚಲಾಯಿಸಲು ಅವಕಾಶವಿರುವದಾಗಿ ಸುಳಿವು ನೀಡಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಮತ್ತು ರಾಜ್ಯದಿಂದ ಗಣಕಯಂತ್ರಗಳಲ್ಲಿ ಮತದಾರರ ಪಟ್ಟಿ ಸೇರ್ಪಡೆ ಸಂದರ್ಭ ಏಕ ವ್ಯವಸ್ಥೆ ಕಲ್ಪಿಸುವ ವೇಳೆ ‘ಸರ್ವರ್’ ಸಮಸ್ಯೆಯಿಂದ ಇಂತಹ ತಪ್ಪುಗಳು ಆಗಿರಬಹು ದೆಂದು ಅಭಿಪ್ರಾಯಪಟ್ಟಿದ್ದಾರೆ.
ಮತದಾರರು ತಮ್ಮ ತಮ್ಮ ಊರಿನ ಅಥವಾ ವಸತಿಯ ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಲು ಹೆಸರು ಮತ್ತು ಅವರವರ ಭಾವಚಿತ್ರಕ್ಕೆ ಒತ್ತು ನೀಡಲಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ನಿರ್ಧಿಷ್ಟ ಸೂಚನೆ ನೀಡಲಾಗುವದು ಎಂದು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಅನೇಕರು ಜಿಲ್ಲಾಡಳಿತ ಹಾಗೂ ತಾಲೂಕು ಕಚೇರಿಗಳಿಗೆ ಸಂಪರ್ಕಿಸಿ, ಮತದಾರರ ಪಟ್ಟಿಯಲ್ಲಿನ ಲೋಪಗಳ ಬಗ್ಗೆ ಆತಂಕ ತೋಡಿಕೊಂಡಾಗ, ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಗೊಂದಲದಲ್ಲಿ ಸಿಲುಕಿದ್ದು, ಗೋಚರಿಸಿತು.
(ಮೊದಲ ಪುಟದಿಂದ) ಅಲ್ಲದೆ ಮೇಲಧಿಕಾರಿಗಳ ನಿರ್ದೇಶನದಂತೆ ಮುಂದಿನ ನಿರ್ಧಾರ ತಿಳಿಸಲಾಗುವದು ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರು.
ಒಟ್ಟಿನಲ್ಲಿ ಇನ್ನೊಂದು ವಾರದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಮತಗಟ್ಟೆಗಳಲ್ಲಿ ಯಾವದೇ ಸಮಸ್ಯೆ ಎದುರಾಗದಂತೆ, ಆಗಿರುವ ಲೋಪ ಸರಿಪಡಿಸಲು ಕ್ರಮ ವಹಿಸುವ ಭರವಸೆಯನ್ನು ಅಧಿಕಾರಿಗಳು ‘ಶಕ್ತಿ’ಯೊಂದಿಗೆ ನೀಡಿದ್ದಾರೆ. ಆ ಬಗ್ಗೆ ಸೂಕ್ತ ನಿರ್ಧಾರವನ್ನು ಸಕಾಲದಲ್ಲಿ ಮತದಾರರಿಗೆ ಅಧಿಕೃತವಾಗಿ ತಿಳಿಸಲಾಗುವದು ಎಂದು ಸಮಜಾಯಿಷಿಕೆ ನೀಡಿದ್ದಾರೆ.