ವೀರಾಜಪೇಟೆ, ಏ. 10: ವೀರಾಜಪೇಟೆ ಬಳಿಯ ಪಾಲಂಗಾಲದಲ್ಲಿ ಮತ್ತೆ ಕಾಡಾನೆಗಳು ಸದ್ದು ಮಾಡಿದ್ದು ಅದೇ ಗ್ರಾಮದ ಕರಿನೆರವಂಡ ಅಯ್ಯಪ್ಪ ಅವರ ಕೆರೆಯಲ್ಲಿ ನಿನ್ನೆ ರಾತ್ರಿಯಿಂದ ಒಂದು ಮರಿಯಾನೆ ಸೇರಿದಂತೆ ಮತ್ತೆ ಐದು ಕಾಡಾನೆಗಳು ಸಿಲುಕಿಕೊಂಡಿದ್ದು ಇಂದು ಬೆಳಿಗ್ಗೆ ಪತ್ತೆಯಾಗಿದೆ. ನಿರಂತರವಾಗಿ ಕಾಡಾನೆಗಳು ಕೆರೆಗೆ ಬೀಳುತ್ತಿದ್ದು ಕಾಫಿ ತೋಟದಲ್ಲಿಯೂ ಶಿಬಿರ ಹೂಡಿ ದಾಂಧಲೆ ನಡೆಸುತ್ತಿರುವದರಿಂದ ಇಂದು ಗ್ರಾಮಸ್ಥರು ಬೆಳಿಗ್ಗೆಯೇ ಅರಣ್ಯ ಇಲಾಖೆ ಕಾಡಾನೆಗಳನ್ನು ಕೆರೆಯಿಂದ ಮೇಲೆತ್ತುವ ಕಾರ್ಯಾಚರಣೆಗೆ ಅಡ್ಡಿಪಡಿಸಿ 11 ಗಂಟೆಯವರೆಗೆ ಅರಣ್ಯ ವಿಭಾಗಾಧಿಕಾರಿ ಕ್ರಿಸ್ತರಾಜು ಸ್ಥಳಕ್ಕೆ ಬರುವವರೆಗೆ ತಡೆದು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮಂಗಳವಾರ ರಾತ್ರಿ ಸುಮಾರು ಎಂಟು ತಿಂಗಳ ಮರಿಯಾನೆ ಸೇರಿದಂತೆ ಐದು ಕಾಡಾನೆಗಳು ಕೆರೆಗೆ ಬಿದ್ದ ವಿಷಯ ತಿಳಿದು ಇಂದು ಬೆಳಿಗ್ಗೆ ಸ್ಥಳಕ್ಕೆ ಬಂದ ಇಲಾಖೆಯ ವಲಯಾಧಿಕಾರಿ ಗೋಪಾಲ್ ನೇತೃತ್ವದಲ್ಲಿ ಜೆಸಿಬಿ ಮೂಲಕ ಕಾರ್ಯಾಚರಣೆಗೆ ಮುಂದಾದಾಗ ಸ್ಥಳೀಯರಾದ ಕರಿನೆರವಂಡ ರಮೇಶ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ಕಾಡಾನೆ ಹಾವಳಿಯನ್ನು ತಡೆಯಲು ಇಲಾಖೆ ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಡಾನೆ ಹಾವಳಿಯಿಂದ ಬೆಳೆಗಾರರು, ಗ್ರಾಮಸ್ಥರು ನೊಂದು ಬೆಂದು ಹೋಗಿದ್ದಾರೆ. ಈ ತನಕ ಈ ವಿಭಾಗದಲ್ಲಿ ಕಾಡಾನೆಗಳು ದಾಳಿ ಮಾಡಿ ಮೂವರು ಸತ್ತಿದ್ದಾರೆ, ಕೆಲವರು ಗಾಯಗೊಂಡಿದ್ದಾರೆ. ಕಾಡಾನೆಯ ಹತ್ಯೆಯಾದಾಗ ಕ್ರಿಮಿನಲ್ ಪ್ರಕರಣ ದಾಖಲಿಸಿ ಗ್ರಾಮಸ್ಥರು, ಬೆಳೆಗಾರರಿಗೆ ತೊಂದರೆ ನೀಡುವದು ಮಾಮೂಲಿಯಾಗಿದೆ. ಇದಕ್ಕೆ ಸೂಕ್ತ ಪರಿಹಾರ ನೀಡಿ ಕ್ರಮಕೈಗೊಳ್ಳುವ ಭರವಸೆ ನೀಡುವವÀರೆಗೂ ಕಾರ್ಯಾಚರಣೆಗೆ ಬಿಡುವದಿಲ್ಲ ಎಂದು ಪಟ್ಟು ಹಿಡಿದರು.

ಕೊನೆಗೆ ಎ.ಸಿ.ಎಫ್. ರೋಶನಿ ಅವರು ಸ್ಥಳಕ್ಕೆ ಬಂದು ಕಾಡಾನೆ ದಾಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರ ಬೇಡಿಕೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿಯೂ, ಈ ಕುರಿತು ಸದÀ್ಯದಲ್ಲಿಯೇ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವದು ಎಂದರು.

ಅರಣ್ಯ ವಿಭಾಗಾಧಿಕಾರಿ ಕ್ರಿಸ್ತರಾಜು ಅವರು ಬೆಳಿಗ್ಗೆ 11 ಗಂಟೆ ಹೊತ್ತಿಗೆ ಸ್ಥಳಕ್ಕೆ ಬಂದು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.