ಕೂಡಿಗೆ, ಏ. 10: ಭಾರತ ಚುನಾವಣಾ ಆಯೋಗ, ಮತದಾನ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ಮತದಾನದ ಮಹತ್ವ ಕುರಿತು ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು.

ಕೂಡಿಗೆ ಸರ್ಕಲ್‍ನಲ್ಲಿ ಆಯೋಜಿಸಿದ್ದ ಬೀದಿ ನಾಟಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೂಡಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಶ್ವಿನಿ, ತಾ. 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಿ ಪ್ರಜಾಪ್ರಭುತ್ವ ಬಲಪಡಿಸಲು ಕೈಜೋಡಿಸಬೇಕು ಎಂದರು.

ಮತದಾರರು ಯಾವದೇ ಆಸೆ-ಆಮಿಷಕ್ಕೆ ಮರುಳಾಗಬೇಡಿ. ವಿವೇಚನೆಯಿಂದ ಮತ ಚಲಾಯಿಸಿ ಎಂದು ಸಲಹೆ ನೀಡಿದರು. ಕೂಡಿಗೆ ಗ್ರಾ.ಪಂ. ಕಾರ್ಯದರ್ಶಿ ಶಿಲ್ಪಾ ತಮಟೆ ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೊಡಗು ಜಿಲ್ಲಾ ವಿದ್ಯಾಸಾಗರ ವೇದಿಕೆ ಕಲಾವಿದ ಈ. ರಾಜು ಮತ್ತು ತಂಡದವರು ಮತದಾನ ನಮ್ಮ ಹಕ್ಕು , ಪ್ರಜಾಪ್ರಭುತ್ವ ಬಲಪಡಿಸಲು ತಪ್ಪದೆ ಮತ ಚಲಾಯಿಸಿ ಎಂದು ಬೀದಿ ನಾಟಕ ಪ್ರದರ್ಶನ ಮಾಡಿದರು. ಗ್ರಾ.ಪಂ. ನೌಕರರಾದ ರವಿ, ಕಲಾವಿದರಾದ ಸುರೇಶ್, ಸ್ವಾಮಿ, ಎಂ. ರಾಜು, ಚಂದ್ರಪ್ಪ, ಶಿವಕುಮಾರ್ ಇದ್ದರು.