ಸಿದ್ದಾಪುರ, ಏ. 10: ಜಿಲ್ಲೆಯ ಪ್ರತಿಷ್ಠಿತ ಕೆಸಿಎಲ್ ಪಂದ್ಯಾಟದ ಆಟಗಾರರ ಅಂತಿಮ ಸುತ್ತಿನ ಬಿಡ್ಡಿಂಗ್ ಪ್ರಕ್ರಿಯೆ ನೆಲ್ಯಹುದಿಕೇರಿಯ ಕೋಫಿಯಾ ಸಭಾಂಗಣದಲ್ಲಿ ನಡೆಯಿತು.

ಸಮಾಜ ಸೇವಕ ಸಂಕೇತ್ ಪೂವಯ್ಯ ಆಟಗಾರರ ಚೀಟಿಯನ್ನು ಎತ್ತುವ ಮೂಲಕ ಬಿಡ್ಡಿಂಗ್ ಪ್ರಕ್ರಿಯೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಭಾಗದ ಕ್ರಿಕೆಟ್ ಆಟಗಾರರಿಗೆ ಕೆಸಿಎಲ್ ಉತ್ತಮ ವೇದಿಕೆಯಾಗಿದೆ. ಸಿದ್ದಾಪುರ ನೆಲ್ಯಹುದಿಕೇರಿ ಭಾಗದಲ್ಲಿ ನೂರಾರು ಕ್ರೀಡಾಪಟುಗಳಿದ್ದು, ಬಹಳಷ್ಟು ಕ್ರೀಡಾಕೂಟಗಳು ನಡೆಯುತ್ತಿದ್ದರೂ ಕನಿಷ್ಟ ಒಂದು ಸಾರ್ವಜನಿಕ ಮೈದಾನವೂ ಇಲ್ಲದೆ ಇರುವದು ನೋವಿನ ವಿಚಾರ ಎಂದರು.

ಕುಕ್ಕುನೂರು ಸುನಿಲ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸಿದ್ದಾಪುರ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಕೆಸಿಎಲ್ ಈ ಬಾರಿ ಕರಡಿಗೋಡಿನಲ್ಲಿ ನಡೆಯುತ್ತಿದ್ದು, ಕೆಸಿಎಲ್ ನಿರಂತರವಾಗಿ ನಡೆಯಲಿ ಎಂದರು.

ನೆಲ್ಯಹುದಿಕೇರಿ ಪಿಡಿಓ ನಂಜುಂಡ ಸ್ವಾಮಿ ಮಾತನಾಡಿ, ಐಪಿಎಲ್ ಮಾದರಿಯಲ್ಲೇ ಆಟಗಾರರನ್ನು ಬಿಡ್ ಮಾಡುವ ಮೂಲಕ ವಿಭಿನ್ನವಾಗಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಿರುವದರಿಂದ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಉತ್ತಮ ವೇದಿಕೆ ನಿರ್ಮಾಣವಾಗಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಕೆಸಿಎಲ್ ಸಮಿತಿ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ, ಕುಕ್ಕುನೂರು ದೇವ ಪ್ರಕಾಶ್, ಸೂರಜ್, ಚೇತನ್, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎನ್ ವಾಸು, ಮೆಹರಾಜ್ ಟಿಂಬರ್ ಮಾಲೀಕ ಸುಬೈರ್, ಗುತ್ತಿಗೆದಾರ ವಿಜೇಶ್, ಕೋಫಿಯಾ ಮಾಲೀಕ ಸಲೀಂ ಇತರರಿದ್ದರು.

ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ 14 ತಂಡಗಳ ಮಾಲೀಕರು ಹಾಗೂ ಐಕಾನ್ ಆಟಗಾರರು ವಿವಿಧ ಭಾಗದ ಕೆಲವು ಆಟಗಾರರಿಗಾಗಿ ಪೈಪೋಟಿ ನಡೆಸಿದರು. ಯೋಗೇಶ್ ಮಾದಾಪುರ, ಮುಸ್ತಫಾ ಹುಂಡಿ, ಅಶ್ವಥ್ ನೆಲ್ಯಹುದಿಕೇರಿ, ಕೃಷ್ಣಮೂರ್ತಿ ಮೂರ್ನಾಡು, ಪವನ್ ಕುಶಾಲನಗರ, ಅಲೀಮ್ ಕುಶಾಲನಗರ, ನಿದಿಲ್ ನೆಲ್ಯಹುದಿಕೇರಿ, ಹರೀಶ್ ಪಾಲಿಬೆಟ್ಟ ಸೇರಿದಂತೆ ಕೆಲವು ಆಟಗಾರರಿಗಾಗಿ ಪೈಪೋಟಿ ನಡೆಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿಜೋಯ್, ಸಿದ್ದಾಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಿ.ಕೆ ಬಶೀರ್, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕರಾದ ಎಂ.ಎನ್. ನಾಸಿರ್, ತೇಜಸ್ ಪಾಪಯ್ಯ, ಉದಯ್ ಮೊಣ್ಣಪ್ಪ, ಪೈನಿಯರ್ ಕ್ಲಬ್‍ನ ಅನಿಲ್ ಇದ್ದರು.