ವೀರಾಜಪೇಟೆ, ಏ. 10: ದೇಶದ ರಾಜಕಾರಣದಲ್ಲಿ ಧರ್ಮ ಧರ್ಮಗಳ ಮಧ್ಯೆ ಕಂದಕ ನಿರ್ಮಾಣ ಮಾಡಿ ಒಡೆದು ಅಳುವ ರಾಜ್ಯ ನೀತಿ ಭಾ.ಜ.ಪ. ಪಕ್ಷದ್ದು ಎಂದು ಕೇರಳ ರಾಜ್ಯದ ಇಂಡಿಯನ್ ಯೂತ್ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೋಮೊನ್ ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದರು.

ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಜಿಲ್ಲಾ ಜಾತ್ಯತೀತ ಜನಾತದಳ ಯುವ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಾಲ್ಕು ದಿನಗಳ ಮೋದಿ ಯುವಕರ ವಿರೋಧಿ ಪ್ರಚಾರ ಜಾಥಾದಲ್ಲಿ ಮಾತನಾಡಿದ ಅವರು, ಲಕ್ಷ ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ, ಯುವಕರಿಗೆ ತಮ್ಮ ಜೀವನ ನಿರ್ವಹಣೆಗೆ ಕಂಕಣಬದ್ಧರಾಗಿ ಕೆಲಸ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ ಮೋದಿ ಸರ್ಕಾರವು ಇಂದು ಅಸಂಖ್ಯಾತ ಯುವಕರ ಬಾಳಿಗೆ ತಣ್ಣೀರು ಎರಿಚಿದ್ದು ವಿಶ್ವಾಸ ದ್ರೋಹವಾಗಿದೆ ಎಂದು ಆರೋಪಿಸಿದರು. ಜಿಲ್ಲಾ ಜೆ.ಡಿ.ಎಸ್. ಮಾಜಿ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಕಳೆದ ಐದು ವರ್ಷಗಳಿಂದ ಮಧ್ಯಮ ವರ್ಗ ಮತ್ತು ಬಡವರ ಮೇಲೆ ಶೋಷಣೆಗಳನ್ನು ಮಾಡುತ್ತಾ ಮೋದಿ ಸರಕಾರ ದಿನ ಕಳೆಯಿತು ಎಂದರು. ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ಮಾತನಾಡಿ, ಯುವ ಜನಾಂಗಕ್ಕೆ ಮೋದಿ ಕೊಡುಗೆಯು ಚಿಂತಿಸುವಂತಿದೆ. ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿರುವ ಕಾರಣ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಯುವ ಘಟಕದಿಂದ ಮೋದಿ ಯುವಕರ ವಿರೋಧಿ ಎಂಬ ಜಾಗೃತಿ ಜಾಥಾ ನಡೆಸಲಾಗಿದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫಾ ಸಂಪಾಜೆ, ಜೆ.ಡಿ.ಎಸ್. ತಾಲೂಕು ಅಧ್ಯಕ್ಷ ಹೆಚ್.ಎಸ್. ಮತೀನ್ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧÀ್ಯಕ್ಷ ಅಬ್ದುಲ್ ಸಲಾಂ, ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್‍ಕುಮಾರ್, ಕಾನೂನು ಸಲಹೆಗಾರ ಡಿ.ಸಿ. ಧ್ರುವಕುಮಾರ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಅಂದಾಯಿ, ಜೆ.ಡಿ.ಎಸ್. ಮುಖಂಡರಾದ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಮೈನೋದ್ದೀನ್ ಹಾಗೂ ಇತರರಿದ್ದರು.

- ಕೆ.ಕೆ.ಎಸ್. ವೀರಾಜಪೇಟೆ