ಮಡಿಕೇರಿ, ಏ. 10: ಪೊನ್ನಂಪೇಟೆಯ ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ತಾ. 27 ರಿಂದ ವಾರದ ಪ್ರತಿ ಶುಕ್ರವಾರ ಮತ್ತು ಶನಿವಾರ ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರು ಕಲಾಪ ಪ್ರಾರಂಭಿಸು ವಂತೆ ಉಚ್ಚ ನ್ಯಾಯಾಲಯದ ರಿಜಿಸ್ಟರ್ ಶ್ರೀಕೃಷ್ಣಾನಂದ ಅವರು ಆದೇಶ ಮಾಡಿದ್ದಾರೆ ಎಂದು ಪೊನ್ನಂಪೇಟೆಯ ವಕೀಲರಾದ ಎಂ.ಟಿ. ಕಾರ್ಯಪ್ಪ, ಟಿ.ಎಂ. ಅಣ್ಣಯ್ಯ ಮತ್ತು ವಿ.ಜಿ. ಮಂಜುನಾಥ್ ಅವರು ಮಾಹಿತಿ ನೀಡಿದ್ದಾರೆ.
ಪೊನ್ನಂಪೇಟೆ ನ್ಯಾಯಾಲಯ ದಲ್ಲಿ ಇದೀಗ ಕಿರಿಯ ಶ್ರೇಣಿ ನ್ಯಾಯಾಧೀಶರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಬಂದಿರುವದರಿಂದ ಈ ಭಾಗದ ಜನರು ವೀರಾಜಪೇಟೆಗೆ ಹೋಗುವದು ತಪ್ಪಿದಂತಾಗಿದೆ. ಈ ನ್ಯಾಯಾಲಯ ಸ್ಥಾಪನೆಗೆ ಹಲವಾರು ದಿನಗಳಿಂದ ಈ ಭಾಗದ ವಕೀಲರು ಸಂಘದ ಮುಖಾಂತರ ಬೇಡಿಕೆ ಇಟ್ಟಿದ್ದರು.
ಪೊನ್ನಂಪೇಟೆ ನೂತನ ತಾಲೂಕು ಆಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಬಂದಿರುವದು ಈ ಭಾಗದ ನಾಗರಿಕರ-ವಕೀಲರಿಗೆ ಸಂತೋಷವನ್ನು ತಂದಿದೆ ಎಂದು ವಕೀಲ, ನೋಟರಿ ಎಂ.ಟಿ. ಕಾರ್ಯಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.