ಕಾಂಗ್ರೆಸ್ ಆರೋಪ

ಗೋಣಿಕೊಪ್ಪ ವರದಿ, ಏ. 9: ಕೇಂದ್ರ ಸರ್ಕಾರದಿಂದ ರೈತರಿಗೆ ಯಾವ ಯೋಜನೆಯಲ್ಲೂ ಸಬ್ಸಿಡಿ ದೊರೆಯದೆ ಇರಲು ಸಂಸದ ಪ್ರತಾಪ್ ಸಿಂಹ ಕೇಂದ್ರದಲ್ಲಿ ಕೊಡಗಿನ ರೈತರ ಬಗ್ಗೆ ಮಾಹಿತಿ ನೀಡದಿರುವದೇ ಕಾರಣ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ ಆರೋಪಿಸಿದ್ದಾರೆ.

ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಕಾಫಿ ಬೆಳೆಗಾರರಿಗೆ ಕೆರೆ, ಕಣ, ಪಂಪ್‍ಸೆಟ್, ಗೋದಾಮು ನಿರ್ಮಾಣಕ್ಕೆ ಸಬ್ಸಿಡಿ ನೀಡುವ ಮೂಲಕ ಕೃಷಿಗೆ ಪ್ರೋತ್ಸಾಹ ನೀಡುತ್ತಾ ಬಂದಿತ್ತು. ಆದರೆ, ಮೋದಿ ಸರ್ಕಾರದಿಂದ ಕೃಷಿ ಪೂರಕ ಯೋಜನೆಗಳು ಕೊಡಗು ರೈತರ ಕೈಗೆ ದೊರೆಯುತ್ತಿಲ್ಲ. ಇದಕ್ಕೆ ಪ್ರತಾಪ್ ಸಿಂಹ ಅವರು ಇಲ್ಲಿನ ಸ್ಥಿತಿಗತಿಯ ಬಗ್ಗೆ ಕೇಂದ್ರಕ್ಕೆ ಸ್ಪಷ್ಟ ಮಾಹಿತಿ ನೀಡದೇ ಇರುವದೇ ಕಾರಣ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ವಿಯೆಟ್ನಾಂ ಕಾಳುಮೆಣಸು ಭಾರತಕ್ಕೆ ಕಳ್ಳ ಸಾಗಣೆಯಲ್ಲಿ ಬರುವ ಮುನ್ನ ಕಾಳುಮೆಣಸು ಪ್ರತೀ ಕೆ.ಜಿ.ಗೆ ರೂ. 700 ಇತ್ತು. ಪ್ರಸ್ತುತ 280 ಕ್ಕೆ ಇಳಿದಿದೆ. ಇದರಿಂದ ರೈತನ ಬದುಕು ತೀರಾ ದುಸ್ತರವಾಗಿದೆ. ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಗೆ ವಿಯೆಟ್ನಾಂ ಕಾಳುಮೆಣಸು ಸಾಗಣೆಗೆ ಅವಕಾಶ ನೀಡಿರುವದೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರ ರಾಜ್ಯ ಸರ್ಕಾರ ರೈತರ 50 ಸಾವಿರ ಮನ್ನಾ ಮಾಡಿ ಕೃಷಿಗೆ ಬೆಂಬಲ ನೀಡಿದೆ. ಈಗಿನ ಸಮ್ಮಿಶ್ರ ಸರ್ಕಾರ ಕೂಡ ಕೊಡಗು ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಿರುವದರಿಂದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಗೆಲವು ಪಡೆಯಲಿದ್ದಾರೆ ಎಂದರು.

ಕುಶಾಲನಗರಕ್ಕೆ ರೈಲು ಬರಲಿಲ್ಲ. ಭರವಸೆಗಷ್ಟೆ ರೈಲು ಯೋಜನೆ ಮೀಸಲಾಯಿತು. ಇದರೊಂದಿಗೆ ಕೊಡಗಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ, ಗ್ರೇಟರ್ ತಲಕಾವೇರಿ, ನಾಗರಹೊಳೆ ಸೂಕ್ಷ್ಮ ವಲಯ ಯೋಜನೆ ಎಲ್ಲವೂ ಕೂಡ ಸ್ಥಳೀಯರಿಗೆ ಮಾರಕವಾಗಲಿದೆ. ಇದಕ್ಕೆಲ್ಲಾ ಸಿಂಹ ಅವರು ಜಿಲ್ಲೆಯ ಮೇಲೆ ತೋರಿರುವ ಅಸಡ್ಡೆ ಕಾರಣ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಇದ್ದರು.