ಮಡಿಕೇರಿ, ಏ. 10: ತಲಕಾವೇರಿಯಲ್ಲಿ ಅನಾದಿಕಾಲದಿಂದ ಪ್ರತಿಷ್ಠಾಪನೆಗೊಂಡು, ಪ್ರಾಚೀನವೆನಿಸಿರುವ ಶ್ರೀ ಅಗಸ್ತ್ಯೇಶ್ವರ ಶಿವಲಿಂಗವನ್ನು ಈ ಹಿಂದೆ ಇದ್ದ ಸ್ಥಳದಿಂದ ತೆಗೆಯದಂತೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಪ್ರಬಾರ ಮುಖ್ಯ ನ್ಯಾಯಾಧೀಶರಾದ ಪಿ.ಎಸ್. ದಿನೇಶಕುಮಾರ್ ಅವರು ಇಂದು ಹೊರಡಿಸಿರುವ ಆದೇಶದ ಯಥಾವತ್ ಮಾಹಿತಿ ಈ ಕೆಳಗಿನಂತಿದೆ.ತಲಕಾವೇರಿಯ ಅಗಸ್ತ್ಯೇಶ್ವರ ದೇವಾಲಯದ ಶಿವಲಿಂಗವನ್ನು ಆ ಸ್ಥಳದಿಂದ ತೆಗೆಯದಂತೆ ನಿರ್ದೇಶಿಸುತ್ತಿದ್ದೇನೆ; ಈ ಬಗ್ಗೆ ಜಿಲ್ಲಾಡಳಿತಕ್ಕೂ ಸೂಚನೆ ನೀಡುವಂತೆ ಆದೇಶಿಸುತ್ತಿರುವದಾಗಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಈ ಸಂಬಂಧ ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕರಾದ ಡಿ. ನಾಗರಾಜ್ ಅವರು, ಸಂಬಂಧಿಸಿದ ಇಲಾಖೆಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಇಂದು ‘ಫ್ಯಾಕ್ಸ್’ ಮೂಲಕ ಸಂದೇಶ ರವಾನೆ ಮಾಡಿದ್ದಾರೆ.
ಈ ಹಿಂದೆ ಮೈಸೂರಿನ ವಕೀಲರುಗಳಾದ ಓ. ಶ್ಯಾಂಭಟ್ ಹಾಗೂ ಓ. ಸತೀಶ್ ಇವರುಗಳು ಈ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಹಾಗೂ ಅರ್ಚಕ ಟಿ.ಎಸ್. ನಾರಾಯಣಾಚಾರ್ ಇವರುಗಳನ್ನು ಪ್ರತಿವಾದಿಗಳಾಗಿ ಪರಿಗಣಿಸಲಾಗಿತ್ತು. ರಿಟ್ ಅರ್ಜಿಯನ್ನು ವಕೀಲರುಗಳ ಮೂಲಕ ಮೈಸೂರಿನ ಅನಂತ್ ಪಿ. ಭಟ್ ಹಾಗೂ ಲೋಹಿತ್ ಅರಸ್ ಸಲ್ಲಿಸಿದ್ದರು.
ಸದ್ಯಕ್ಕೆ ವಿಸರ್ಜನೆ ಮಾತ್ರ ಬಾಕಿ
ನ್ಯಾಯಾಲಯವು ಈ ಹಿಂದಿನ ಪ್ರಾಚೀನ ಶಿವಲಿಂಗವನ್ನು ತೆಗೆಯದಂತೆ ಆದೇಶಿಸಿದರೂ ಕೂಡ ಈಗಾಗಲೇ ದೇವಾಲಯ ವ್ಯವಸ್ಥಾಪನಾ ಸಮಿತಿಯು ಈ ಕಾರ್ಯವನ್ನು ಮುಕ್ತಾಯಗೊಳಿಸಿದೆ. ಈ ಹಿಂದೆ ಕೇರಳದ ಜ್ಯೋತಿಷಿ ನಾರಾಯಣ ಪೊದುವಾಳ್, ಚೋದ್ಯಗಾರ ಶ್ಯಾಮ ಶಾಸ್ತ್ರಿ ಹಾಗೂ ಕ್ಷೇತ್ರ ತಂತ್ರಿಗಳಾದ ಪದ್ಮನಾಭ ನೀಲೇಶ್ವರ ತಂತ್ರಿಗಳ ನಿರ್ದೇಶಾನುಸಾರ ತಲಕಾವೇರಿ-ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಪ್ರಾಚೀನ ಶಿವಲಿಂಗವನ್ನು ಅಗಸ್ತ್ಯೇಶ್ವರ ಗರ್ಭಗುಡಿಯಿಂದ ಹೊರ ತೆಗೆದಿದ್ದಾರೆ. ಅಲ್ಲದೆ ಇಂದು ನೂತನ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ ಈಗಿನ ಆದೇಶದಿಂದಾಗಿ, ಕ್ಷೇತ್ರ ತಂತ್ರಿಯವರ ನಿರ್ದೇಶನದನ್ವಯ ವ್ಯವಸ್ಥಾಪನಾ ಸಮಿತಿಯು ಕೈಗೊಂಡಿದ್ದ ಪ್ರಾಚೀನ ಶಿವಲಿಂಗದ ವಿಸರ್ಜನೆಗೆ ತಡೆಯುಂಟಾಗಿದೆ.
(ಮೊದಲ ಪುಟದಿಂದ) ಈ ಶಿವಲಿಂಗವನ್ನು ತಮಿಳುನಾಡಿನ ‘ಪೂಂಪೂಹಾರ್’ನಲ್ಲಿ ವಿಸರ್ಜಿಸಲು ಕೈಗೊಂಡಿದ್ದ ನಿರ್ಧಾರಕ್ಕೆ ನ್ಯಾಯಾಲಯದ ಆದೇಶದಿಂದ ತಡೆಯುಂಟಾಗಿದೆ.
ರಿಟ್ ಅರ್ಜಿಯಲ್ಲಿ ಮುಖ್ಯವಾಗಿ ತಲಕಾವೇರಿಯಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯ, ಧಾರ್ಮಿಕ ವಿಧಿವಿಧಾನಗಳು ಹಾಗೂ ಪೂಜಾದಿಗಳನ್ನು ನಡೆಸುವ ಸಂದರ್ಭ ಪ್ರಾಚೀನ ಶಿವಲಿಂಗವನ್ನು ವಿಸರ್ಜನೆ ಮಾಡುವದಾಗಲೀ, ನಾಶಗೊಳಿಸುವದಾಗಲೀ ಮಾಡಬಾರದೆಂದು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ಪೂರ್ಣವಾಗಿ ಪುರಸ್ಕರಿಸಿದೆ. ರಿಟ್ ಅರ್ಜಿದಾರರು ತಮ್ಮ ವಾದದಲ್ಲಿ, ಸಾವಿಲ್ಲದ ಮಹರ್ಷಿ ಅಗಸ್ತ್ಯರು ಸ್ಥಾಪಿಸಿದ ಅಗಸ್ತ್ಯೇಶ್ವರ ದೇವಾಲಯ ಹಾಗೂ ಪ್ರತಿಷ್ಠಾಪಿಸಿದ ಶಿವಲಿಂಗವು ಅತ್ಯಂತ ಮಹತ್ತರವಾದದ್ದು ಎಂದು ಬಣ್ಣಿಸಿದ್ದಾರೆ.
ಸಹಸ್ರಾರು ವರ್ಷಗಳ ಇತಿಹಾಸವಿರುವ ಅಗಸ್ತ್ಯರ ಪ್ರಭಾವದ ಕುರಿತು ವಾಲ್ಮೀಕಿ ರಾಮಾಯಣದಲ್ಲಿಯೂ ಉಲ್ಲೇಖವಿದೆ. ಅಗಸ್ತ್ಯರ ಕಮಂಡಲದಿಂದಲೇ ಪವಿತ್ರ ಕಾವೇರಿ ಉದ್ಭವಿಸಿದ್ದಾಳೆ. ಅಗಸ್ತ್ಯರು ತಲಕಾವೇರಿಯಿಂದ ತಮಿಳುನಾಡಿನ ಕಾವೇರಿ ಪಟ್ಟಣಂ ತನಕ ಅನೇಕ ಶಿವಲಿಂಗಗಳನ್ನು ಸ್ಥಾಪಿಸಿದ್ದಾರೆ. ಅದೇ ರೀತಿ ತಲಕಾವೇರಿಯಲ್ಲಿ ಸ್ಥಾಪಿಸಲ್ಪಟ್ಟ ಶಿವಲಿಂಗವನ್ನು ಅಗಸ್ತ್ಯೇಶ್ವರ ಲಿಂಗವೆಂದು ಪರಿಗಣಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರಾಕೃತಿಕ ವಿಕೋಪಗಳು ನಡೆದಿವೆ. ಈ ಸಂದರ್ಭ ಪ್ರಾಚೀನ ಶಿವಲಿಂಗವನ್ನು ವಿಸರ್ಜಿಸುವದು ಸೂಕ್ತವಲ್ಲ; ಪ್ರಾಚ್ಯ ವಸ್ತು ಇಲಾಖೆಯ ನಿಯಮದ ಅನ್ವಯ ದೇವಾಲಯದ ಪ್ರಾಚ್ಯ ವಸ್ತುಗಳನ್ನು ಸಂರಕ್ಷಿಸುವದು ಕೂಡ ಅತ್ಯಗತ್ಯವಾಗಿದೆ. 1992ರಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಅಧಿಕೃತವಾಗಿ ನಿರ್ವಹಿಸಲಾಗಿತ್ತು. ಆದರೆ ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಗೆ ಸೂಕ್ತವಾದ ಆದೇಶ ಪಡೆದಿಲ್ಲ. ಈ ಎಲ್ಲ ಹಿನ್ನೆಲೆಯನ್ನು ಗಮನಿಸಿ ಪ್ರಾಚೀನ ಶಿವಲಿಂಗವನ್ನು ಯಥಾವತ್ತಾಗಿ ರಕ್ಷಿಸುವಂತೆ ಕೋರಿದ್ದರು.
ಅಧ್ಯಕ್ಷ ತಮ್ಮಯ್ಯ ಪ್ರತಿಕ್ರಿಯೆ
ಈ ಸಂಬಂಧ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರ ಗಮನ ಸೆಳೆದಾಗ, ಈಗಾಗಲೇ ಪೂರ್ವ ನಿಶ್ಚಯದಂತೆ ಕ್ಷೇತ್ರದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದಿದೆ ಎಂದರಲ್ಲದೆ, ತಾ. 11 ರಂದು (ಇಂದು) ಹಳೆಯ ಶಿವಲಿಂಗ ವಿಸರ್ಜಿಸುವ ನಿರ್ಧಾರ ಕೈಗೊಂಡಿರಲಿಲ್ಲವೆಂದು ‘ಶಕ್ತಿ’ಗೆ ತಿಳಿಸಿದರು. ಬದಲಾಗಿ ಕ್ಷೇತ್ರ ತಂತ್ರಿಗಳ ನಿರ್ದೇಶನದಂತೆ ಬರುವ ಮೇ 24 ರಂದು ವಿಸರ್ಜಿಸಲು ಚರ್ಚೆ ನಡೆದಿದ್ದು, ಇದೀಗ ನ್ಯಾಯಾಲಯದಿಂದ ತಡೆಯಾಜ್ಞೆಯ ಕಾರಣ ಕಾನೂನಿಗೆ ತಲೆಬಾಗುವದಾಗಿ ನುಡಿದರು.