ಸ್ವಾತಂತ್ರ್ಯ ಹತ್ಯಾಕಾಂಡ:ಕ್ಷಮೆಯಾಚಿಸಿದ ಬ್ರಿಟನ್

ನವದೆಹಲಿ, ಏ. 10: ಬ್ರಿಟೀಷ್ ಆಡಳಿತದ ಸಂದರ್ಭ 1919 ರಲ್ಲಿ ಭಾರತದಲ್ಲಿ ನಡೆದ ಜಲಿಯನ್ ವಾಲಾಬಾಗ್‍ನಲ್ಲಿ ನಡೆದಿದ್ದ ಸ್ವತಂತ್ರ್ಯ ಹೋರಾಟಗಾರರ ಸಾಮೂಹಿಕ ಹತ್ಯಾಕಾಂಡ ವಿಚಾರಕ್ಕೆ ಸಂಬಂಧಿಸಿದಂತೆ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಯುಕೆ ಸಂಸತ್‍ನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ಇದೇ ಏಪ್ರಿಲ್ 13ಕ್ಕೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು ನೂರು ವರ್ಷ ತುಂಬುತ್ತಿರುವ ಹಿನ್ನೆಲೆ ಈ ಕುರಿತು ಬ್ರಿಟನ್ ಸಂಸತ್‍ನಲ್ಲಿ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಥೆರೆಸಾ ಮೇ ಅವರು, ಘಟನೆ ಕುರಿತಂತೆ ತೀವ್ರ ವಿಷಾಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಬ್ರಿಟೀಷ್ ಆಡಳಿತ ನಡೆಸಿದ್ದ ಈ ಭೀಕರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಥೆರೆಸಾ ಮೇ ಸಂಪೂರ್ಣ ಕ್ಷಮೆ ಕೋರಲಿಲ್ಲ ಎನ್ನಲಾಗಿದೆ. ಆದರೆ ಪ್ರಮುಖ ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷದ ನಾಯಕನಾಗಿರುವ ಜೆರೆಮಿ ಕಾರ್ಬೋನ್ ಅವರು ಸಂಪೂರ್ಣ ಕ್ಷಮೆಕೋರಲು ಪ್ರಧಾನಿಗೆ ಆಗ್ರಹಿಸಿದರು. ಸಂಸತ್ತಿನಲ್ಲಿ ಪ್ರಧಾನಿ ತೆರೇಸಾ ಮೇ ಈ ಘಟನೆ ಕುರಿತಾಗಿ ಮಾತನಾಡಿ, ಈ ಹಿಂದೆ ಏನಾಯಿತು ಅದರಿಂದ ಆದ ಹಾನಿಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದ್ದಾರೆ. ಏಪ್ರಿಲ್ 13, 1919 ಜಲಿಯನ್ವಾಲಾ ಬಾಗ್ ಹತ್ಯಾಕಾಂಡದಲ್ಲಿ ಬ್ರಿಟಿಷ್ ಸೇನಾಪಡೆಗಳು ಸಾವಿರಾರು ನಿಶ್ಶಸ್ತ್ರ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಬಲಿ ತೆಗೆದುಕೊಂಡಿದ್ದರು. ಈ ಘಟನೆ ಇಂದಿಗೂ ಕೂಡ ಭಾರತದ ಸ್ವಾತಂತ್ರ್ಯ ಪೂರ್ವ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದೆ. ವಸಾಹತುಶಾಹಿ-ಯುಗದ ದಾಖಲೆಗಳು ಹೇಳುವಂತೆ ಈ ಘಟನೆಯಲ್ಲಿ ಅಮೃತಸರದಲ್ಲಿ ಸುಮಾರು 400 ಜನರು ಸಾವನ್ನಪ್ಪಿದರು ಎನ್ನಲಾಗಿದೆ. ಆದರೆ ಭಾರತೀಯ ಅಂಕಿ-ಅಂಶಗಳು ಹೇಳುವಂತೆ ಈ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹತ್ತಿರವೆಂದರೆ ಸಾವಿರ ಜನರು ಎಂದು ಹೇಳಲಾಗುತ್ತದೆ. ಈ ಹಿಂದೆ ಬ್ರಿಟಿಷ್ ಪ್ರಧಾನ ಮಂತ್ರಿ ಡೇವಿಡ್ ಕ್ಯಾಮೆರಾನ್ 2013 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭ ಇದನ್ನು ತೀವ್ರ ಅವಮಾನಕರ ಎಂದು ಹೇಳಿದ್ದರೆ ಹೊರತು ಕ್ಷಮಾಪಣೆ ಕೋರಿರಲಿಲ್ಲ.

ಬಾಹ್ಯಾಕಾಶ ವಿಸ್ಮಯ:ಕಪ್ಪುಕುಳಿಯ ಚಿತ್ರ ಲಭ್ಯ

ವಾಷಿಂಗ್ಟನ್, ಏ. 10: ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ವಿಜ್ಞಾನಿಗಳಿಗೆ ಚಿದಂಬರ ರಹಸ್ಯವಾಗಿದ್ದ ಕಪ್ಪುಕುಳಿಯ ಚಿತ್ರವನ್ನು ತೆಗೆಯುವಲ್ಲಿ ಕೊನೆಗೂ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ವಿಶ್ವವನ್ನೇ ನುಂಗಿ ಹಾಕುವ ಕಪ್ಪುಕುಳಿಯ ಕುರಿತು ಅಮೇರಿಕಾದ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಮಾಹಿತಿ ನೀಡಿದ್ದರು. ಈ ಬಳಿಕ ಸಾಕಷ್ಟು ವಿಜ್ಞಾನಿಗಳು ಈ ಕುರಿತು ಸಂಶೋಧನೆ ಕೈಗೊಂಡರೂ ಅದರಲ್ಲಿ ಹೇಳಿಕೊಳ್ಳುವಂತಹ ಯಶಸ್ವಿಯಾಗಿರಲಿಲ್ಲ. ಕಪ್ಪುಕುಳಿ ಇದೆ ಎಂದು ಮಾಹಿತಿ ಇತ್ತಾದರೂ ಅದು ಎಲ್ಲಿದೆ, ಅದು ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳು ಇಷ್ಟು ದಿನ ಪ್ರಶ್ನೆಗಳಾಗಿಯೇ ಉಳಿದಿತ್ತು. ಆದರೆ ಇದೀಗ ದಶಕಗಳ ಪರಿಶ್ರಮದ ಬಳಿಕ ಕೊನೆಗೂ ವಿಜ್ಞಾನಿಗಳು ಕಪ್ಪುಕಳಿಯ ರಹಸ್ಯ ಮಾಹಿತಿಯನ್ನು ಬೇದಿಸಿದ್ದು, ಇದೇ ಮೊದಲ ಬಾರಿಗೆ ಕಪ್ಪುಕುಳಿಯ ನೈಜ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ನೆದರ್ಲೆಂಡ್‍ನ ರ್ಯಾಡ್ ಬೌಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮೊಟ್ಟ ಮೊದಲ ಬಾರಿಗೆ ಈ ಕುರಿತು ವಿಷಯ ಪ್ರಸ್ತಾಪಿಸಿದ್ದರು. ಈ ಯೋಜನೆಗಾಗಿ ವಿಜ್ಞಾನಿಗಳು ಜಗತ್ತಿನ ವಿವಿಧ ಮೂಲೆಗಳಲ್ಲಿ ನಿರ್ಮಾಣ ಮಾಡಲಾಗಿರುವ ಬರೊಬ್ಬರಿ 8 ಅತ್ಯಾಧುನಿಕ ಟೆಲಿಸ್ಕೋಪ್‍ಗಳನ್ನು ಬಳಕೆ ಮಾಡಿದ್ದು, ಬೋಸ್ಟನ್‍ನಲ್ಲಿರುವ ಟೆಲಿಸ್ಕೋಪ್ ಅನ್ನು ಕೇಂದ್ರವಾಗಿಟ್ಟುಕೊಂಡು ವಿಶ್ವದ ವಿವಿಧೆಡೆಯ ಪ್ರಮುಖ 7 ಟೆಲಿಸ್ಕೋಪ್‍ಗಳ ನೆರವಿನಿಂದ ಈ ಕಪ್ಪುಕುಳಿಯ ಅತ್ಯಪರೂಪದ ಚಿತ್ರವನ್ನು ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ