ಮಡಿಕೇರಿ, ಏ. 10: ದೇಶದಲ್ಲಿ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮನ್ನಣೆಯಿದ್ದು, ಈ ಬಾರಿಯ ಚುನಾವಣೆಯಲ್ಲಿ ಖಂಡಿತಾ ಮತದಾರರು ಮೋದಿ ನಾಯಕತ್ವಕ್ಕೆ ಮನ್ನಣೆಯೊಂದಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅಭಿಪ್ರಾಯಪಟ್ಟಿದ್ದಾರೆ. ‘ಶಕ್ತಿ’ ಸಂದರ್ಶನದಲ್ಲಿ ಮೇಲಿನ ಭವಿಷ್ಯ ನುಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಜನರು ರಾಷ್ಟ್ರೀಯ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮಿಕ್ಕ ವಿಷಯಗಳು ಗೌಣವೆಂದು ಪ್ರತಿಪಾದಿಸಿದರು.

ಕೊಡಗು ಸೇರಿದಂತೆ ಮೈಸೂರು ಲೋಕಸಭಾ ಕ್ಷೇತ್ರದ ಎಲ್ಲೆಡೆ ತಮ್ಮ ಪ್ರವಾಸ ಸಂದರ್ಭ, ಸಂಸದ ಪ್ರತಾಪ್ ಸಿಂಹ ಅವರಿಗೆ ಯುವ ಮತದಾರರ ಸಹಿತ ಮಹಿಳೆಯರು ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿದ್ದು, ಹುಣಸೂರು - ಪಿರಿಯಾಪಟ್ಟಣ ಭೇಟಿ ಸಂದರ್ಭ ಇದು ಅರಿವಿಗೆ ಬಂದಿದೆ ಎಂದರು.

ಕೊಡಗು ಜಿಲ್ಲೆಯ ಮತದಾರರು ಸದಾ ರಾಷ್ಟ್ರೀಯತೆಗೆ ಆದ್ಯತೆಯೊಂದಿಗೆ ಬಿಜೆಪಿ ಪರ ನಿಂತಿದ್ದು, ಪ್ರಸಕ್ತ ಮೋದಿ ಹವಾದಿಂದ ಪ್ರತಾಪ್ ಸಿಂಹ ಅವರ ಗೆಲುವಿನ ಅಂತರ ಹೆಚ್ಚುವದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳು 22ಕ್ಕೂ ಅಧಿಕ ಸ್ಥಾನ ಗಳಿಸುವದು ನಿಶ್ಚಿತವೆಂದು ಸಮರ್ಥಿಸಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಕಚ್ಚಾಟದಿಂದ ಜನರಲ್ಲಿ ಬೇಸರದೊಂದಿಗೆ ರೋಷ ಹುಟ್ಟಿಕೊಂಡಿದೆ ಎಂದು ವಿಷಾದಿಸಿದರು. ಸ್ವತಃ ಎಐಸಿಸಿ ಅಧ್ಯಕ್ಷರೇ ಅಮೇಥಿ ಕ್ಷೇತ್ರ ಬಿಟ್ಟು ಕೇರಳದತ್ತ ಮುಖ ಮಾಡಿದ್ದು, ಮೋದಿಯಂತಹ ನಾಯಕರಿಗೆ ಈ ಚುನಾವಣೆಯಲ್ಲಿ ಎದುರಾಳಿಗಳಿಲ್ಲವೆಂದು ಬೊಟ್ಟು ಮಾಡಿದರು.

ಅಂತೆಯೇ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಸಂಸದರ ಅನುದಾನವನ್ನು ಕ್ಷೇತ್ರಕ್ಕೆ ಹಂಚಿಕೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿ ಇದ್ದಾರೆ ಎಂದ ಸುನಿಲ್ ಸುಬ್ರಮಣಿ, ಮೋದಿ ಅವರಿಗೆ ಆಪ್ತರಾಗಿರುವ ಇವರು ಮುಂದೆ ಕೇಂದ್ರ ಸಚಿವರಾಗುವ ವಿಶ್ವಾಸ ವ್ಯಕ್ತಪಡಿಸಿದರು. ಕೊಡಗು - ಮೈಸೂರು ಕ್ಷೇತ್ರದಲ್ಲಿ ಎದುರಾಳಿ ಅಭ್ಯರ್ಥಿ ಮೈತ್ರಿ ಪಕ್ಷದಿಂದ ಕಣದಲ್ಲಿ ಇದ್ದರೂ; ಗೆಲುವು ತಮ್ಮ ಪಕ್ಷದ್ದಾಗಲಿದೆ ಎಂದು ಮಾರ್ನುಡಿದರು.

ಈ ಚುನಾವಣೆಯು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವದಾಗಿದ್ದು, ರಸ್ತೆ, ಚರಂಡಿ ಇನ್ನಿತರ ಸಮಸ್ಯೆಗಳಿಗೆ ಜನತೆ ಪ್ರಾಶಸ್ತ್ಯ ನೀಡಲಾರರು ಎಂದು ವ್ಯಾಖ್ಯಾನಿಸಿದರು. ಸಾಮಾನ್ಯ ಜನತೆಯಲ್ಲಿ ಕಂಡುಬರುತ್ತಿರುವ ದೇಶಭಕ್ತಿ ಈ ಬಾರಿ ಪಕ್ಷದ ಗೆಲುವಿನ ಅಂತರವನ್ನು ಹೆಚ್ಚಿಸಲಿದೆ ಎಂದು ಸುನಿಲ್ ನೆನಪಿಸಿದರು.