ಕೂಡಿಗೆ, ಏ. 10 : ಹಣವನ್ನು ಉಳಿತಾಯ ಮಾಡುವ ಉದ್ದೇಶದಿಂದ ಅಂಚೆ ಕಚೇರಿಯಲ್ಲಿ ಹಣ ಉಳಿತಾಯ ಖಾತೆಯನ್ನು ತೆರೆದು ಹಣವನ್ನು ಜಮಾ ಮಾಡಿ ಮುಂದಿನ ಭವಿಷ್ಯಕ್ಕೆ ಕೂಡಿಡುವದು ಪ್ರತಿಯೊಬ್ಬರ ಆಸೆ. ಅದರಂತೆ ದಂಪತಿಗಳು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆದು ಹಣವನ್ನು ಜಮಾ ಮಾಡಿದ್ದಾರೆ. ಆದರೆ ಪಾಸ್ ಬುಕ್‍ನಲ್ಲಿ ಹಾಕಿರುವ ಹಣದ ಲೆಕ್ಕ ಇದ್ದರೂ ಖಾತೆಯಲ್ಲಿ ತಾವು ಕಟ್ಟಿದ ಹಣವು ಇಲ್ಲದಂತಾಗಿದೆ. ಇಂತಹದೊಂದು ಘಟನೆಯು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ (ಹುಲುಗುಂದ) ಅಂಚೆ ಕಚೇರಿಯಲ್ಲಿ ನಡೆದಿದೆ. ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾವಿನಹಳ್ಳ ಗ್ರಾಮದ ಬಾಬಣ್ಣ ಮತ್ತು ಪೂವಮ್ಮ ಎಂಬ ದಂಪತಿಗಳು ಹಾರಂಗಿಯ ಉಪ ಅಂಚೆ ಕಚೇರಿಯಲ್ಲಿ ತೆರೆದಿದ್ದ ತಮ್ಮ ಖಾತೆಗೆ ಹಣವನ್ನು ಕಟ್ಟುತ್ತಾ ಬಂದಿದ್ದಾರೆ. ಪೂವಮ್ಮ ಅವರ ಖಾತೆ ಸಂಖ್ಯೆ 2030210978ರಲ್ಲಿ ಅವರು ಸುಮಾರು 5 ವರ್ಷಗಳ ಹಿಂದಿನಿಂದಲೂ ಹಣವನ್ನು ಜಮಾ ಮಾಡುತ್ತಿದ್ದು, ಹಣವನ್ನು ತೆಗೆದು ಹಾಕುವ ವ್ಯವಹಾರ ನಡೆಸುತ್ತಾ ಬಂದಿದ್ದಾರೆ. ಈವರೆಗೆ ಅವರ ಖಾತೆಗೆ ಜಮಾ ಮಾಡಿರುವ ಹಣ 87072.80. ಆದರೆ, ಪಾಸ್‍ಬುಕ್‍ನಲ್ಲೂ 87072.80 ಹಣದ ನೊಂದಣಿಯಾಗಿ ಮೊಹರು ಇದ್ದರೂ ಸಹ ಖಾತೆಯಲ್ಲಿ 3456.80 ರೂ. ಹಣ ಮಾತ್ರ ಇರುವದು ಕಂಡು ಬಂದಿದೆ.
ಪೂವಮ್ಮ ದಂಪತಿಗಳು ತಮ್ಮ ಮಗನ ಮದುವೆಗಾಗಿ ಕೂಡಿಟ್ಟಿದ್ದ ಹಣವನ್ನು ತೆಗೆಯಲು ಕಳೆದ ಡಿಸೆಂಬರ್ ತಿಂಗಳಲ್ಲಿ ಅಂಚೆ ಕಚೇರಿಗೆ ತೆರಳಿದಾಗ ತಮ್ಮ ಪಾಸ್‍ಬುಕ್ ಅನ್ನು ತೋರಿಸಿ ಖಾತೆಯಲ್ಲಿ ಇದ್ದ 87072.80 ಹಣದಲ್ಲಿ 80,000 ರೂ. ಪಡೆಯಲು ಹೋದಾಗ, ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಖಾತೆಯನ್ನು ಪರಿಶೀಲಿಸಿ, ನಿಮ್ಮ ಖಾತೆಯಲ್ಲಿ ಇಷ್ಟು ಹಣವಿಲ್ಲ. ಇರುವದೆ 3456.80 ರೂ. ಎಂದಾಗ ಖಾತೆದಾರರಿಗೆ ಆಶ್ಚರ್ಯ ಕಾದಿತ್ತು.
ಇದೇ ರೀತಿ ಪೂವಮ್ಮ ಅವರ ಪತಿ ಬಾಬಣ್ಣ ಅವರು 2012ರಲ್ಲಿ ಖಾತೆಯನ್ನು ತೆರೆದು ಖಾತೆ ಸಂಖ್ಯೆ 2030281930ರಲ್ಲಿ ಹಣವನ್ನು ಅಂದಿನಿಂದ ಉಳಿತಾಯ ಖಾತೆಗೆ ಜಮಾ ಮಾಡಿ, 60,752 ಹಣವನ್ನು ಕೂಡಿಟ್ಟಿದ್ದರು. ಆ ಹಣದ ವಿವರಗಳು ಸಹ ತಮ್ಮ ಪಾಸ್‍ಬುಕ್‍ನಲ್ಲಿ ನೊಂದಾಯಿಸಿ, ಮೊಹರನ್ನು ಹಾಕಲಾಗಿದ್ದರೂ, ಹಣ ತೆಗೆಯಲು ಹೋದ ಸಂದರ್ಭ 31,252 ರೂ. ಮಾತ್ರ ಇದ್ದದ್ದು ಕಂಡು ಬಂದಿದೆ.
ಗ್ರಾಹಕರ ಹಣವನ್ನು ಅಂಚೆ ಕಚೇರಿಯ ಅಧಿಕಾರಿಯು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಮಾಹಿತಿ ತಿಳಿದ ದಂಪತಿಗಳು ಕಳೆದ ಮೂರು ತಿಂಗಳ ಹಿಂದೆ ಜಿಲ್ಲಾ ಕೇಂದ್ರ ಅಂಚೆ ಕಚೇರಿ ಅಧಿಕಾರಿಗಳಿಗೆ ತಮ್ಮ ಹಣ ದುರುಪಯೋಗವಾಗಿರುವ ಬಗ್ಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ನ್ಯಾಯ ಒದಗಿಸುವದಾಗಿ ಹೇಳಿದ್ದ ಅಧಿಕಾರಿಗಳು ಮೂರು ತಿಂಗಳಾದರೂ ಯಾವದೇ ರೀತಿ ಮಾಹಿತಿಯನ್ನು ನೀಡಿಲ್ಲ. ಇದೀಗ ತಾ. 9 ರಂದು ಖಾತೆದಾರರಿಗೆ ತಾತ್ಕಾಲಿಕವಾಗಿ ನಕಲು ಪಾಸ್‍ಬುಕ್ ಅನ್ನು ನೀಡಿ ಅದರಲ್ಲಿ ಪೂವಮ್ಮ ಖಾತೆಯಲ್ಲಿ 3456.80 ರೂ. ಹಾಗೂ ಬಾಬಣ್ಣ ಖಾತೆಯಲ್ಲಿ 31252 ರೂ. ಇರುವ ನೊಂದಣಿಯನ್ನು ಮಾಡಿ ಖಾತೆದಾರರಿಗೆ ನೀಡಲಾಗಿದೆ. ಈ ದಂಪತಿಗಳ ಖಾತೆಯಲ್ಲಿ ಹಣ 1,13,116. 80 ರೂ. ವ್ಯತ್ಯಾಸವಾಗಿದ್ದು, ಈ ದೊಡ್ಡ ಮಟ್ಟದ ಹಣವು ದುರುಪಯೋಗವಾಗಿರುವ ಬಗ್ಗೆ ದೂರು ನೀಡಿದ್ದರೂ, ಅಧಿಕಾರಿಗಳು ಯಾವದೇ ಕ್ರಮಕೈಗೊಳ್ಳದೆ ಹಿಂಜರಿಕೆ ಮಾಡುತ್ತಿದ್ದಾರೆ ಎಂದು ಹಣ ಕಳೆದುಕೊಂಡು ನೊಂದಿರುವ ಬಡ ಕುಟುಂಬದ ಬಾಬಣ್ಣ ಮತ್ತು ಪೂವಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ವಿಷಯಕ್ಕೆ ಸಂಬಂದಿಸಿದಂತೆ ಕುಶಾಲನಗರ ಅಂಚೆಕಛೇರಿಯ ಮೇಲ್ವಿಚಾರಕರನ್ನು ಸಂಪರ್ಕಿಸಿದಾಗ ಹಾರಂಗಿ ಉಪ ಅಂಚೆ ಕಚೇರಿಯಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಂಚೆ ಕಚೇರಿಯ ನಿಯಮಾನುಸಾರ ಕ್ರಮಕೈಗೊಂಡಿದೆ. ಹಣ ದುರುಪಯೋಗ ಮಾಡಿರುವ ಹಾರಂಗಿ ಉಪ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯನ್ನು ಅಮಾನತು ಮಾಡಿ, ಈ ಬಗ್ಗೆ ಮಡಿಕೇರಿಯ ವಿಭಾಗೀಯ ಅಂಚೆ ಕಚೇರಿಯಲ್ಲಿ ದೂರು ನೀಡಿ ವಿಚಾರಣೆ ನಡೆಸಲಾಗುತ್ತಿದೆ. ಸಮಗ್ರವಾಗಿ ವಿಚಾರಣೆ ಮಾಡಿ, ಖಾತೆದಾರರಿಗೆ ಹಣವನ್ನು ಒದಗಿಸುವದಾಗಿ ತಿಳಿಸಿದ್ದಾರೆ.
- ಕೆ.ಕೆ.ನಾಗರಾಜಶೆಟ್ಟಿ