ಸುಂಟಿಕೊಪ್ಪ, ಏ. 9: ವಕ್ರ್ಸ್‍ಶಾಪ್‍ನಲ್ಲಿ ನಿಲ್ಲಿಸಿದ್ದ ಜೀಪಿನ ಇಂಜಿನ್ ಅನ್ನು ಎಗರಿಸಿ ಯಾವದೇ ದಾಖಲಾತಿ ಇಲ್ಲದ ಜೀಪಿಗೆ ಅಳವಡಿಸಿ ಸರಣಿ ಅಪಘಾತ ಮಾಡಿ ತಲೆ ಮರೆಸಿಕೊಂಡಿದ್ದ ಭೂಪ ಕೊನೆಗೂ ಪೊಲೀಸರ ಅತಿಥಿ ಯಾಗಿದ್ದಾನೆ.ಕೆದಕಲ್‍ನ ಕಾಫಿ ಬೆಳೆಗಾರರಾದ ಕೆ.ಕೆ.ಬೆಳ್ಯಪ್ಪ ಅವರು 1987 ರಲ್ಲಿ (ಸಿಎನ್‍ಜಡ್ 0784)ರ ಮಹೇಂದ್ರ ಎಂಎಂ540 ಜೀಪನ್ನು ಖರೀದಿಸಿದ್ದರು. ಆ ಜೀಪನ್ನು 8 ತಿಂಗಳ ಹಿಂದೆ ಉನೈಸ್ ಎಂಬವರಿಗೆ 25,000 ರೂ.ಗಳಿಗೆ ಮಾರಾಟ ಮಾಡಿದ್ದರು. ಉನೈಸ್ ಕೆಲ ತಿಂಗಳ ಕಾಲ ಜೀಪನ್ನು ಸ್ವಂತಕ್ಕೆ ಬಳಸಿಕೊಂಡ ನಂತರ ರಿಪೇರಿಗಾಗಿ ಸುಂಟಿಕೊಪ್ಪದ ವರ್ಕ್‍ಶಾಪ್‍ವೊಂದಕ್ಕೆ ತಂದು ನಿಲ್ಲಿಸಿದ್ದರು. ಈ ನಡುವೆ ದಾಖಲೆ ಇಲ್ಲದ ಜೀಪು ಓಡಿಸುತ್ತಿದ್ದ ಗದ್ದೆಹಳ್ಳದ ರಫೀಕ್ ಎಂಬಾತ ವರ್ಕ್‍ಶಾಫ್‍ನಲ್ಲಿ ನಿಲ್ಲಿಸಿದ್ದ (ಸಿಎನ್‍ಜಡ್ 0784)ರ ಜೀಪಿನ ಇಂಜಿನ್ ಅನ್ನು ಕಳವು ಮಾಡಿ ದಾಖಲೆ ಇಲ್ಲದ ಜೀಪಿಗೆ ಅಳವಡಿಸಿ ಚಾಸಿಗೆ (ಸಿಎನ್‍ಜಡ್ 0784) ಹಾಗೂ ಪಿಎಂಟಿಂಬರ್ ಎಂದು ನಾಮಫಲಕ ಅಳವಡಿಸಿ ಕೊಂಡು ರಾಜಾರೋಷವಾಗಿ ಜೀಪನ್ನು ಓಡಿಸಲಾರಂಭಿಸಿದ. ಹೀಗೆ 15 ದಿನಗಳ ಹಿಂದೆ ಇದೇ ಜೀಪನ್ನು ರಫೀಕ್ ಅಡ್ಡಾದಿಡ್ಡಿ ಚಾಲಿಸಿಕೊಂಡು ಹೋಗಿ ಕಾರು, ಮೋಟಾರ್ ಬೈಕ್‍ಗೆ ಡಿಕ್ಕಿ ಹೊಡೆದು ಜೀಪನ್ನು ಗದ್ದೆಹಳ್ಳದ ಬಳಿ ನಿಲ್ಲಿಸಿ ಪರಾರಿಯಾಗಿದ್ದ. ಪೊಲೀಸರು ಸಂಶಯಗೊಂಡು ಜೀಪಿನ ದಾಖಲೆಯನ್ನು ಆರ್‍ಟಿಓ ಕಚೇರಿಯಿಂದ ಮಾಹಿತಿ ಪಡೆದು ಕೊಂಡು ಪರಿಶೀಲಿಸಿದಾಗ ರಫೀಕ್ ದಾಖಲೆ ಇಲ್ಲದ ಜೀಪಿಗೆ ವರ್ಕ್‍ಶಾಫಿ ನಲ್ಲಿ ನಿಲ್ಲಿಸಿದ್ದ ಜೀಪಿನ ಇಂಜಿನ್ ಅಪಹರಿಸಿ ಅಳವಡಿಸಿರುವದು ಬೆಳಕಿಗೆ ಬಂದಿದೆ.

ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಆರೋಪಿಯನ್ನು ಬಂಧಿಸಿ ಜೀಪಿನ ಇಂಜಿನ್ ಕಳ್ಳತನ ಪ್ರಕರಣ ಹಾಗೂ ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ