ಆಲೂರುಸಿದ್ದಾಪುರ, ಏ. 9: ಕಾಡಾನೆ ಬದುಕುಳಿಯುವದೆ! ನಿರ್ಜನ ಪ್ರದೇಶದಲ್ಲಿ ಚಿಕಿತ್ಸೆ ನೀಡಬೇಕಾಗಿದ್ದರೂ ಜನಜಂಗುಳಿ ಇರುವ ಸ್ಥಳದಲ್ಲಿಯೆ ಚಿಕಿತ್ಸೆ ನೀಡುತ್ತಿರುವದು ಸರಿಯೆ ?ಒಂದು ಕಾಲಿಗೆ ಬಲವಾದ ಗಾಯವಾಗಿದ್ದರೆ, ಇನ್ನೊಂದು ಕಾಲಿಗೆ ಬಲವಾಗಿ ಇಲಾಖೆಯಿಂದ ಹಗ್ಗ ಹಾಕಿ ಕಟ್ಟಲಾಗಿದ್ದು, ಇದರಿಂದ ಆನೆಯ ಗೋಳು ಕೇಳುವವರು ಯಾರು?ಹೌದು ಬಾಣವಾರ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಗಾಯಗೊಂಡು ನರಳಾಡುತ್ತಿದ್ದ ಒಂಟಿ ಸಲಗಕ್ಕೆ ಅರಣ್ಯ ಇಲಾಖೆ ಬಿರುಸಿನಿಂದ ಕಳೆದ ಬುದವಾರದಿಂದ ಚಿಕಿತ್ಸೆ ನೀಡುತ್ತಿದೆ. ಕೆಲವು ದಿನಗಳಿಂದ ಬಾಣವಾರ ಮೀಸಲು ಅರಣ್ಯ ವ್ಯಾಪ್ತಿಯ, ಬಾಣವಾರ ಅರಣ್ಯಗಳಲ್ಲಿ ಅಂದಾಜು 30 ವರ್ಷ ಪ್ರಾಯದ ಒಂಟಿ ಸಲಗವೊಂದು ಹಿಂಬದಿಯ ಕಾಲಿನ ಪಾದಕ್ಕೆ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ನರಳಾಡುತ್ತಾ ಹಾಗೂ ಗಾಯದ ನೋವಿಗೆ ಘೀಳಿಡುತ್ತಾ ಓಡಾಡುತ್ತಿತ್ತು. ಗಾಯಗೊಂಡ ಕಾಡಾನೆ ಓಡಾಡುತ್ತಿರುವದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ ಹಿನ್ನೆಲೆ ಗಾಯಗೊಂಡ ಒಂಟಿ ಸಲಗಕ್ಕೆ ಸೋಮವಾರಪೇಟೆ ಅರಣ್ಯ ಇಲಾಖೆ ಚಿಕಿತ್ಸೆ ನೀಡಲು ಮುಂದಾಯಿತು. ಅರಣ್ಯ ಇಲಾಖೆ ನಾಗರಹೊಳೆ ರಾಜೀವ್ಗಾಂಧಿ ರಾಷ್ಟ್ರೀಯ ಅಭಯಾರಣ್ಯದ ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ. ಮುಜೀದ್ ನೇತೃತ್ವದಲ್ಲಿ ಗಾಯಗೊಂಡ ಕಾಡಾನೆಗೆ ಚಿಕಿತ್ಸೆ ನೀಡಲು ಕಾರ್ಯಾಚರಣೆ ಕೈಗೊಳ್ಳಲಾಯಿತು. ಆದರೆ ಕಾಡಾನೆ ಚಿಕಿತ್ಸೆಗೆ ಸ್ಪಂದಿಸುತ್ತಿದೆ ಕಾಡಾನೆಯಾಗಿರುವದರಿಂದ ಇದಕ್ಕೆ ಜನರ ಭಯ ಇದ್ದೆ ಇರುತ್ತದೆ. ಆದರೆ ಈ ಕಾಡಾನೆಗೆ ಚಿಕಿತ್ಸೆ ನೀಡುವಾಗ ಈ ಕಾಡಾನೆಯನ್ನು ನೋಡಲು ಜನರು ಜಾತ್ರೆಗೆ ಬರುವ ರೀತಿಯಲ್ಲಿ ಬರುತ್ತಿದ್ದು, ಈ ಆನೆಯ ನರಳಾಟ ಇದೀಗ ಹೆಚ್ಚಾಗುತ್ತಿದೆ, ಈ ಆನೆಗೆ ಚಿಕಿತ್ಸೆ ನೀಡಲು ಯೋಗ್ಯ ಸ್ಥಳ ಈ ಬಾಣವಾರ ಅರಣ್ಯವಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅರಿವಿದ್ದರೂ, ಕಾನೂನಿನ ತೊಡಕು ಎದುರಾಗಿರುವದರಿಂದ ಈ ಕಾಡಾನೆಯನ್ನು ಸ್ಥಳಾಂತರ ಮಾಡಲು ಸಹ ಸಾಧ್ಯವಾಗುತ್ತಿಲ್ಲ.
ದಿನದಿಂದ ದಿನಕ್ಕೆ ಈ ಕಾಡಾನೆ ನರಕ ಯಾತನೆ ಅನುಭವಿಸುತ್ತಿದ್ದು, ನೋಡಲು ಬರುತ್ತಿರುವ ಜನರು ಸಹ ಕಣ್ಣೀರು ಸುರಿಸುತ್ತಾ ತೆರಳುತ್ತಿದ್ದಾರೆ.
(ಮೊದಲ ಪುಟದಿಂದ) ಈ ಕಾಡಾನೆ ದಷ್ಟ ಪುಷ್ಟವಾಗಿತ್ತು ಪ್ರತಿನಿತ್ಯ ಈ ವ್ಯಾಪ್ತಿಯ ರೈತರು ಬೆಳೆದಿದ್ದ ಬೆಳೆಗಳನ್ನು ತಿನ್ನುತ್ತಾ ರಾಜಾ ರೋಷವಾಗಿ ಯಾವದೇ ಭಯ ಭೀತಿ ಇಲ್ಲದೆ ಸಂಚರಿಸುತ್ತಿತ್ತು. ಆದರೆ ಇದೀಗ ಕಾಡಾನೆÀಯ ಗಾಯಗೊಂಡ ಕಾಲು ಮಾತ್ರ ದಿನದಿಂದ ದಿನಕ್ಕೆ ದಪ್ಪವಾಗುತ್ತಿದೆ. ಇದರ ಶರೀರ ಬಡಕಲಾಗುತ್ತಿದೆ ನೋಡಿದರೆ ಅಯ್ಯೊ ಎನ್ನುವಂತಿದೆ .
ಗಾಯಗೊಂಡಿರುವ ಕಾಡಾನೆಯನ್ನು ನೋಡಿಕೊಳ್ಳಲು ಸ್ಥಳದಲ್ಲೆ ವೈದ್ಯರುಗಳು ಇರಬೇಕಾಗುತ್ತದೆ. ಆದರೆ ಆ ವ್ಯವಸ್ಥೆ ಇಲ್ಲಿಲ್ಲ ಇಲ್ಲಿ ದಿನಕ್ಕೊಮ್ಮೆ ನಾಗರಹೊಳೆಯ ವೈದ್ಯರೊಬ್ಬರು ಬಂದು ನೋಡಿ ಚಿಕಿತ್ಸೆ ನೀಡಿ ತೆರಳುತ್ತಿದ್ದಾರೆ. ಇನ್ನುಳಿದಂತೆ ಇಲ್ಲಿಯ ಕಾವಾಡಿಗರು ಗಾಯಗೊಂಡಿರುವ ಕಾಡಾನೆಗೆ ದಿನಸಿ ಅಂಗಡಿಯಿಂದ ತಂದಂತಹ ರಸಾಯನ ಮಿಶ್ರಿತ ಅರಿಶಿಣದ ಪುಡಿ ಹಾಗೂ ಬೇವಿನ ಎಣ್ಣೆ ಹಚ್ಚುತ್ತಿದ್ದಾರೆ. ಕಾಲಿನ ಹೊರ ಭಾಗದಲ್ಲಿ ಬಂದಿರುವ ದುರ್ಮಾಂಸವನ್ನು ತೆಗೆಯಲು ಕತ್ತರಿ ಬಳಸುತ್ತಿಲ್ಲ ಬದಲಿಗೆ ಕತ್ತಿಯಿಂದ ಸಾಕಾನೆಗಳನ್ನು ಬಳಸಿಕೊಂಡು ಕತ್ತರಿಸಲಾಗುತ್ತಿದೆ ಇದರಿಂದ ಗಾಯಗೊಂಡ ಆನೆ ಇನ್ನಷ್ಟು ರೊಚ್ಚಿಗೇಳುವ ಸಾಧ್ಯತೆ ಹೆಚ್ಚಿದೆ, ಕಾಡಾನೆಯಾಗಿರುವದರಿಂದ ಇದಕ್ಕೆ ಚಿಕಿತ್ಸೆ ನೀಡುವಾಗ ಮತ್ತು ನೀಡಿದ ನಂತರ ಇತರರನ್ನು ಈ ಕಾಡಾನೆಯ ಸಮೀಪ ಬಿಡಬಾರದು ಆದರೆ ಇಲ್ಲಿ ಇದಕ್ಕೆ ವಿರುದ್ಧವಾಗಿದೆ. ಚಿಕಿತ್ಸೆ ನೀಡುವಾಗಲೂ ಮತ್ತು ನೀಡಿದ ನಂತರ ಜನ ಜಾತ್ರೆ ಕಂಡುಬರುತ್ತಿದ್ದು,ಇವರನ್ನು ನಿಯಂತ್ರಿಸುವವರು ಯಾರು ಇಲ್ಲಿಲ್ಲ.
ಕಾಡಿನಲ್ಲಿ ಸಿಗುವ ಬಿದಿರು ಹಾಗೂ ಹಾಲದ ಮರದ ಸಿಪ್ಪೆ ಸೇರಿದಂತೆ ಇನ್ನಿತರ ಆಹಾರ ಸೇವಿಸುತ್ತದೆ ಪಳಗಿಸಿದ ನಂತರವಷ್ಟೆ ಕಾವಾಡಿಗರು ನೀಡುವ ಆಹಾರಕ್ಕೆ ಹೊಂದಿಕೊಳ್ಳುತ್ತ್ತದೆ. ಆದರೆ ಇದನ್ನು ಪಳಗಿಸಲು ಸರ್ಕಾರದಿಂದ ಆದೇಶವಿಲ್ಲ ಕೇವಲ ಚಿಕಿತ್ಸೆ ನೀಡಲಷ್ಟೆ ಆದೇಶವಿರುವದರಿಂದ ಇದಕ್ಕೆ ಆಹಾರ ನೀಡಿದರೂ ಸಹ ಇದು ತಿನ್ನುತ್ತಿಲ್ಲ.
ಆದರೂ ಸಹ ಸ್ಥಳೀಯರು ಕಬ್ಬು, ಗೆಣಸು ಇನ್ನಿತರ ಆಹಾರಗಳನ್ನು ಕಾಡಾನೆಗೆ ತಂದುಕೊಡಲು ಮುಂದಾಗುತ್ತಿದ್ದಾರೆ ಆದರೆ ಇದು ತಿನ್ನಲು ಪ್ರಯತ್ನಿಸುತ್ತಿದ್ದರೂ, ಸಹ ಜನ ಜಂಗುಳಿ ಕಂಡು ಭಯಗೊಳ್ಳುತ್ತಿದೆ.
ಈ ಕಾಡಾನೆಗೆ ಉತ್ತಮ ರೀತಿಯಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಕಾಡಾನೆ ಚಿಕಿತ್ಸೆ ಗೆ ಸ್ಪಂದಿಸುತ್ತಿದ್ದು, ಈ ಕಾಡಾನೆಗೆ ಚಿಕಿತ್ಸೆ ನೀಡುತ್ತಿರುವ ಸ್ಥಳಕ್ಕೆ ಜನರು ಹೋಗಿ ಬರುತ್ತಿರುವ ಮಾಹಿತಿ ಇಲ್ಲ. ಅಲ್ಲಿಯ ಸಿಬ್ಬಂದಿಗಳಿಂದ ಈ ಕುರಿತಾಗಿ ಮಾಹಿತಿ ಪಡೆದುಕೊಂಡು ಯಾರನ್ನು ಒಳ ಹೋಗದಂತೆ ಕ್ರಮಕೈಗೊಳ್ಳಲಾಗು ವದು. ವೈದ್ಯರು ಪ್ರತಿನಿತ್ಯ ಭೇಟಿ ನೀಡುತ್ತಿದ್ದಾರೆ. ಈ ಆನೆಯನ್ನು ಬದುಕಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುವದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
-ದಿನೇಶ್ ಮಾಲಂಬಿ