ಮಡಿಕೇರಿ, ಏ. 9: ಅನಾದಿ ಕಾಲದಿಂದಲೂ ಕಾಡನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕೊಡಗಿನ ಆದಿವಾಸಿಗಳನ್ನು ಇತ್ತೀಚೆಗೆ ಮೈಸೂರು ಭಾಗಕ್ಕೆ ಎತ್ತಂಗಡಿ ಮಾಡಲಾಗುತ್ತಿದ್ದು, ಇದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಘಟಕದ ಜಿಲ್ಲಾ ಮಹಿಳಾ ಅಧ್ಯಕ್ಷೆ ಪಿ.ಆರ್. ಪಂಕಜ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಷ್ಟು ಬಾರಿ ಜಿಲ್ಲೆಯ ಹಾಡಿಗಳಿಗೆ ಭೇಟಿ ನೀಡಿದ್ದಾರೆ, ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಆದಿವಾಸಿಗಳ ಜೀವನವನ್ನು ಹಸನುಗೊಳಿಸಲು ಎಷ್ಟು ಬಾರಿ ಆದಿವಾಸಿ ಮುಖಂಡರುಗಳ ಸಭೆ ನಡೆಸಿದ್ದಾರೆ ಎಂದು ಪ್ರಶ್ನಿಸಿದರು. ತಿತಿಮತಿ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿರಿಜನರಿದ್ದಾರೆ, ಆದರೆ ಇಲ್ಲಿಗೆ ಕೇಂದ್ರ ಸರ್ಕಾರದ ಯಾವದೇ ಅನುದಾನ ಬಂದಿಲ್ಲ. ಜಿ.ಪಂ. ಕ್ಷೇತ್ರಗಳಿಗೆ ಕುಡಿಯುವ ನೀರಿನ ಯೋಜನೆಗಳಿಗೆ ರಾಜ್ಯ ಸರ್ಕಾರದ ಅನುದಾನ ವಿನಿಯೋಗವಾಗುತ್ತಿದೆಯೇ ಹೊರತು ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಟೀಕಿಸಿದರು. 2006 ರಲ್ಲಿ ಜಾರಿಗೆ ಬಂದ ಆದಿವಾಸಿ ಅರಣ್ಯ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸದೆ ಆದಿವಾಸಿಗಳನ್ನು ಅರಣ್ಯದಿಂದ ಹೊರ ಕಳುಹಿಸುವ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.