ಮಡಿಕೇರಿ, ಏ. 9: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಪರ ಜಾತ್ಯತೀತ ಜನತಾದಳದ ಕಾರ್ಯಕರ್ತರು ಮಡಿಕೇರಿ ನಗರದಲ್ಲಿ ಮತಯಾಚಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರ ನೇತೃತ್ವದಲ್ಲಿ ನಗರದ ವಿವಿಧ ಭಾಗಗಳಿಗೆ ತೆರಳಿದ ಕಾರ್ಯಕರ್ತರು ಮತದಾರರ ಮನವೊಲಿಸುವ ಪ್ರಯತ್ನ ಮಾಡಿದರು. ಈ ಸಂದರ್ಭ ಮಾತನಾಡಿದ ಕೆ.ಎಂ. ಗಣೇಶ್, ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ವಿಜಯಶಂಕರ್ ಅವರ ಗೆಲವು ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಯಾವದೇ ಗೊಂದಲಗಳಿಲ್ಲ, ಎಲ್ಲರೂ ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿ ಪರ ಮತಯಾಚಿಸುತ್ತಿದ್ದೇವೆ ಎಂದರು. ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಪ್ರಮುಖರಾದ ಡೆನ್ನಿ ಬರೊಸ್, ಲೀಲಾ ಶೇಷಮ್ಮ, ಇಬ್ರಾಹಿಂ, ಸುಖೇಶ್, ಮಮತಾ, ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.