ಮಡಿಕೇರಿ, ಏ.8: ತಾ. 15 ರಂದು ವಿಶ್ವಕಲಾ ದಿನಾಚರಣೆಯ ಸಂದರ್ಭ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ಎಂದು ತಾಲೂಕು ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ಮಡಿಕೇರಿಯ ರಾಜಾಸೀಟ್‍ನಲ್ಲಿ ಬೆಳಗ್ಗೆ 9.30 ಗಂಟೆಗೆ, 5 ರಿಂದ 7 ಮತ್ತು 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗಾಗಿ ಪ್ರತ್ಯೇಕ ವಿಭಾಗದಲ್ಲಿ 1 ಗಂಟೆ ಅವಧಿಯ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಮೂರು ವಿಭಾಗದಲ್ಲಿಯೂ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಟೀಫಿಕೇಟ್ ನೀಡಲಾಗುತ್ತದೆ. ಸ್ಪರ್ಧಿಗಳು ಚಿತ್ರಕಲೆಗೆ ಸಂಬಂಧಿಸಿದ ಪರಿಕರಗಳನ್ನು ತಾವೇ ತರಬೇಕು.
ಅಂತೆಯೇ, ವಿಶ್ವಚಿತ್ರಕಲಾ ದಿನದ ಅಂಗವಾಗಿ ರಾಜಾಸೀಟ್ ನಲ್ಲಿ ಹೆಸರಾಂತ ಚಿತ್ರಕಲಾವಿದ ಬಿ.ಆರ್.ಸತೀಶ್ ಮತದಾನದ ಮಹತ್ವದ ಬಗ್ಗೆ ಬೃಹತ್ ಕ್ಯಾನ್ವಸ್ ರಚಿಸಲಿದ್ದು, ನಾನೂ ಮತ ಹಾಕುತ್ತೇನೆ ಎಂಬ ಸಂದೇಶದ ಕ್ಯಾನ್ವಸ್‍ಗೆ ಸಾರ್ವಜನಿಕರು ಸಹಿ ಹಾಕಿ ಮತದಾನ ಪ್ರಕ್ರಿಯೆಗೆ ಬೆಂಬಲ ಸೂಚಿಸ ಬಹುದಾಗಿದೆ. ವೀರಾಜಪೇಟೆಯ ಗಾಯಕ ಟಿ.ಡಿ. ಮೋಹನ್, ಕ್ಲಿಫರ್ಡ್ ಡಿಮೆಲ್ಲೋ ಹಾಡುಗಾರಿಕೆಯೂ ಚಿತ್ರಕಲಾ ದಿನಾಚರಣೆ ಸಂದರ್ಭದಲ್ಲಿ ಆಯೋಜಿತವಾಗಿದೆ.
ಅಂತೆಯೇ, ಕೊಡಗು ಜಿಲ್ಲಾ ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಆಯೋಜಿಸಿದ್ದ ಮತದಾನ ಜಾಗೃತಿಯ ವ್ಯಂಗ್ಯಚಿತ್ರಗಳ ಪ್ರದರ್ಶನವೂ ರಾಜಾಸೀಟ್‍ನಲ್ಲಿ ಆಯೋಜಿತವಾಗಿದೆ ಎಂದು ಅನಿಲ್ ಎಚ್.ಟಿ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಚಿತ್ರಕಲಾ ಸ್ಪರ್ಧೆಗೆ ಹೆಸರು ನೋಂದಾಯಿಸಲು ಸಂಪರ್ಕಿಸಬೇಕಾದ ಸಂಖ್ಯೆ 9663119670.