ಮಡಿಕೇರಿ, ಏ. 5: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸ್ವೀಪ್ ಕಾರ್ಯಕ್ರಮದಡಿ ಮತದಾರರಿಗೆ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮ ಹಾಗೂ ಬೀದಿ ನಾಟಕ ಪ್ರದರ್ಶನವನ್ನು ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು.
ಮತದಾರರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಸೆಕ್ಟರ್ ಅಧಿಕಾರಿ ಜಿ.ಆರ್.ಗಣೇಶನ್, ಮತದಾನ ಪ್ರತಿಯೊಬ್ಬರ ಮೂಲ ಭೂತ ಹಕ್ಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರೂ ಕೂಡ ಯಾವದೇ ಆಮಿಷಗಳಿಗೆ ಒಳಗಾಗದೆ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ರಾಷ್ಟ್ರದ ಪ್ರಜಾಪ್ರಭುತ್ವದ ಹಿರಿಮೆಯನ್ನು ಎತ್ತಿ ಹಿಡಿಯಬೇಕು ಎಂದರು.
ಇದೇ ವೇಳೆ ಸಾರ್ವಜನಿಕರಿಗೆ ವಿದ್ಯುನ್ಮಾನ ಮತಯಂತ್ರದ ಮೂಲಕ ಅಣುಕು ಮತದಾನ ಪ್ರಕ್ರಿಯೆ ಮತ್ತು ವಿ.ವಿ.ಪ್ಯಾಟ್ ಬಳಕೆ ಕುರಿತು ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಪೊಲೀಸ್ ಸೆಕ್ಟರ್ ಅಧಿಕಾರಿ ರವೀಂದ್ರನಾಥ್, ಬೀದಿ ನಾಟಕದ ಪ್ರಮುಖ ಕಲಾವಿದ ಇ.ರಾಜು ಮತ್ತಿತರರು ಇದ್ದರು. ನಂತರ ಕಲಾವಿದ ಇ.ರಾಜು ನೇತೃತ್ವದಲ್ಲಿ ಮತದಾನದ ಮಹತ್ವ ಕುರಿತು ಬೀದಿ ನಾಟಕ ಪ್ರದರ್ಶಿಸಲಾಯಿತು.