ಮಡಿಕೇರಿ, ಏ. 7: ಜಿಲ್ಲೆಯಲ್ಲಿ ಈಗಾಗಲೇ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ 10 ಸಖಿ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕೆÀ್ಷ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಗರದ ಸಂತ ಮೈಕಲರ ಶಾಲೆ, ಬ್ಲಾಸಂ ಪ್ರೌಢಶಾಲೆ, ಸುಂಟಿಕೊಪ್ಪದ ಸಂತ ಆಂತೋನಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೀರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆ, ಪಂಜರ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ, ತೆಲುಗರ ಬೀದಿಯ ಸಮುದಾಯ ಭವನ, ಬಿಟ್ಟಂಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಂಕದಕಟ್ಟೆಯ ಸಮುದಾಯ ಭವನ ಇವುಗಳನ್ನು ಸಖಿ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹಾಗೆಯೇ ಸಾಂಪ್ರದಾಯಿಕ (ಯತ್ನಿಕ್) ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಲಂಬಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆರೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೆನ್ನಂಗಿ ಬಸವನಹಳ್ಳಿ ಗಿರಿಜನ ಆಶ್ರಮ ಶಾಲೆ, ನಾಗರಹೊಳೆ ಅರಣ್ಯದ ಸರ್ಕಾರಿ ಆಶ್ರಮ ಶಾಲೆ ಮತ್ತು ಹೆಬ್ಬಾಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇವುಗಳನ್ನು ಸಾಂಪ್ರಾದಾಯಿಕ ಮತಗಟ್ಟೆ ಎಂದು ಗುರುತಿಸಲಾಗಿದೆ.
ಹಾಗೆಯೇ ನಗರದ ತಾ.ಪಂ.ಕಚೇರಿಯ ಮತಗಟ್ಟೆಯನ್ನು ವಿಶೇಷ ಚೇತನರ ಮತಗಟ್ಟೆ ಎಂದು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ಮತದಾನವು ಇದೇ ತಾ. 18 ರಂದು ನಡೆಯಲಿದ್ದು, ಶೇಕಡಾವಾರು ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ 18 ವರ್ಷ ಪೂರ್ಣಗೊಂಡ ಎಲ್ಲಾ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತಾಗಲು ‘ಸಹಿ ಸಂಗ್ರಹ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ಹಾಗೆಯೇ ಪ್ರತೀ ಗ್ರಾ.ಪಂ.ಗಳ ಕುಟುಂಬಗಳಿಗೆ ಮತದಾನದ ಜಾಗೃತಿ ಮೂಡಿಸುವದರ ಜೊತೆಗೆ ಪರಿಸರ ಸ್ನೇಹಿ ಕೈಚೀಲ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಮತದಾನದ ಮಹತ್ವ ಕುರಿತು ‘ವೋಟರ್ ಗೈಡ್’ ಒಳಗೊಂಡ ಕರಪತ್ರವನ್ನು ಪ್ರತಿ ಕುಟುಂಬಕ್ಕೂ ತಲಪಿಸಲು ಉದ್ದೇಶಿಸಲಾಗಿದೆ. ಜೊತೆಗೆ ಚುನಾವಣೆಯ ಮಾಹಿತಿ ಒಳಗೊಂಡ ಐದು ಪೋಸ್ಟರ್‍ಗಳನ್ನು ಪ್ರತಿ ಮತಗಟ್ಟೆಯಲ್ಲಿ ಅಂಟಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ
ಲೋಕಸಭಾ ಚುನಾವಣೆ ಸಂಬಂಧ ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿಯು ತಾ. 7 ಮತ್ತು 8 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಂತ ಜೋಸೆಫರ ಕಾನ್ವೆಂಟ್ ಮತ್ತು ವೀರಾಜಪೇಟೆಯ ಸೆಂಟ್ ಆನ್ಸ್ ಕಾನ್ವೆಂಟ್‍ನಲ್ಲಿ ನಡೆಯಲಿದ್ದು, ನೇಮಕ ಮಾಡಲಾಗಿರುವ ಎಲ್ಲಾ ಹಂತದ ಮತಗಟ್ಟೆ ಅಧಿಕಾರಿಗಳು ತಮ್ಮ ನೇಮಕಾತಿ ಆದೇಶದಲ್ಲಿ ನೀಡಲಾಗಿರುವ ದಿನಾಂಕ, ಸ್ಥಳ ಮತ್ತು ಸಮಯಕ್ಕೆ ಸರಿಯಾಗಿ ತರಬೇತಿಗೆ ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ.
ತರಬೇತಿಗೆ ಗೈರು ಆದಲ್ಲಿ ಅಂತವರ ಮೇಲೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಪ್ರಕರಣ 134 ರಂತೆ ಶಿಸ್ತಿನ ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೊದಲ ತರಬೇತಿಯಲ್ಲಿ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಯನ್ನು, ಬ್ಯಾಂಕ್ ಖಾತೆಯ ಪಾಸ್ ಪುಸ್ತಕ ವಿವರವನ್ನು ಸಲ್ಲಿಸದೇ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಎರಡನೇ ತರಬೇತಿ ದಿನದಂದು ಕಡ್ಡಾಯವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಒಟ್ಟು 543 ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ಚುನಾವಣಾ ವೀಕ್ಷಕರ ಸಮಕ್ಷಮ ಎರಡನೇ ಹಂತದ ರ್ಯಾಂಡಮೈಜೇಷನ್ ಕಾರ್ಯವನ್ನು ಕೈಗೊಂಡು ವಿಧಾನಸಭಾ ಕ್ಷೇತ್ರವಾರು ಶೇ.10 ರಷ್ಟು ಮೀಸಲು ಮತಗಟ್ಟೆ ಅಧಿಕಾರಿಗಳು ಸೇರಿದಂತೆ ತಂಡಗಳನ್ನು ರಚಿಸಿ ನೇಮಕಾತಿ ಆದೇಶವನ್ನು ಈಗಾಗಲೇ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.