ಗೋಣಿಕೊಪ್ಪಲು, ಏ.7: ಜಾಗಲೆ ಆಶ್ರಮ ಶಾಲಾ ಆವರಣದಲ್ಲಿ ನಂ.234 ಸಂಖ್ಯೆಯ ಮತಗಟ್ಟೆಯನ್ನು ಮೊನ್ನೆಯ ವಿಧಾನ ಸಭಾ ಚುನಾವಣೆವರೆಗೂ ಅವಲಂಬಿಸುತ್ತಿದ್ದ ಅಲ್ಲಿನ ಸುಮಾರು 700 ಮತದಾರರು ಇದೀಗ ತಾ.18 ರ ಲೋಕಸಭಾ ಚುನಾವಣೆ ಸಂದರ್ಭ ತಟ್ಟೆಕೆರೆ ಮತಗಟ್ಟೆಗೆ ಸುಮಾರು 13 ಕಿ.ಮೀ. ಕ್ರಮಿಸಿ ಮತದಾನ ಮಾಡಬೇಕಾದ ಹಿನ್ನೆಲೆ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಗ್ರಾಮಸ್ಥರು ಹೇಳಿದ್ದಾರೆ.
ಜಾಗಲೆ ಆಶ್ರಮ ಶಾಲೆಯು ಖಾಸಗಿ ವ್ಯಕ್ತಿಯೊಬ್ಬರ ಆಸ್ತಿಯಲ್ಲಿ ಈವರೆಗೂ ನಡೆದು ಬಂದಿದ್ದು, ಅಲ್ಲಿನ ಮತದಾರರು ಸ್ವಾತಂತ್ರ್ಯ ನಂತರ ನಡೆದು ಬರುತ್ತಿದ್ದ ಚುನಾವಣೆಯಲ್ಲಿ ಆಶ್ರಮ ಶಾಲಾ ಮತಗಟ್ಟೆಯಲ್ಲಿ ಈವರೆಗೂ ಮತದಾನ ಮಾಡುತ್ತಾ ಬಂದಿದ್ದರು. ಆ ಜಾಗದ ಮಾಲೀಕರು ನ್ಯಾಯಾಲಯದಲ್ಲಿ ಕಾನೂನು ಹೋರಾಟದ ಮೂಲಕ ಜಯಗಳಿಸಿದ ನಂತರ ಆಶ್ರಮ ಶಾಲೆಯನ್ನು ಕಾರ್ಮಾಡು ಗ್ರಾಮಕ್ಕೆ ಸ್ಥಳಾಂತರಿಸಲಾಯಿತು.
ಈ ಹಂತದಲ್ಲಿ ಚುನಾವಣಾ ಪ್ರಕ್ರಿಯೆಗೆ ಉಪಯೋಗಿಸುತ್ತಿದ್ದ ಮತದಾನ ಕೇಂದ್ರವನ್ನು ಅನಿವಾರ್ಯವಾಗಿ ಬದಲಿಸಬೇಕಾದ ಹಿನ್ನೆಲೆ ಕಂದಾಯ ಇಲಾಖಾಧಿಕಾರಿಗಳು ಉದ್ದೇಶಿತ ಮತಗಟ್ಟೆಯನ್ನು ತಟ್ಟೆಕೆರೆ ಸರ್ಕಾರಿ ಶಾಲೆಗೆ ಸ್ಥಳಾಂತರಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ ಅಲ್ಲಿನ ಪ್ರಮುಖರು, ತಟ್ಟೆಕೆರೆ ಶಾಲಾ ಮತಗಟ್ಟೆಗೆ ತೆರಳಲು ಸೂಕ್ತ ರಸ್ತೆ ಇಲ್ಲ. ಎರಡು ಹಾದಿಗಳಿದ್ದರೂ ಏಕಮುಖ ಸಂಚಾರ ವ್ಯವಸ್ಥೆಯಿದೆ. ಕಿರಿದಾದ ರಸ್ತೆ ಇದ್ದು ಇಲ್ಲಿಗೆ ಚುನಾವಣಾ ಪ್ರಕ್ರಿಯೆಗೆ ಬಳಸುವ ಯಾವದೇ ಬಸ್ ಬರಲು ಸಾಧ್ಯವಿಲ್ಲ. ಕಂದಾಯ ನಿರೀಕ್ಷಕ ರಮೇಶ್ ಎಂಬವರು ಮತಗಟ್ಟೆಯನ್ನು ಸ್ಥಳಾಂತರಿಸುವ ಸಂದರ್ಭ ಇಲ್ಲಿನ ನಿಟ್ಟೂರು ಗ್ರಾ.ಪಂ.ಪ್ರತಿನಿಧಿಗಳ ಗಮನ ಸೆಳೆಯ ಬಹುದಿತ್ತು. ಊರ ಪ್ರಮುಖರ ಅಭಿಪ್ರಾಯ ಕೇಳಲು ಅವಕಾಶವಿತ್ತು.
ಮತಗಟ್ಟೆ ಬದಲಾವಣೆ ಸಂದರ್ಭ ಸಮೀಪದ ಪಾಲದಳ ಅಂಗನವಾಡಿ ಕಟ್ಟಡಕ್ಕೆ ಸ್ಥಳಾಂತರಿಸಲು ಅವಕಾಶವಿತ್ತು. ನೂತನ ಅಂಗನವಾಡಿ ಕಟ್ಟದಲ್ಲಿ ಎಲ್ಲ ಮೂಲಭೂತ ವ್ಯವಸ್ಥೆಗಳಿದ್ದು, ಈ ಹಿಂದೆ ಇದೇ ಗ್ರಾಮಕ್ಕೆ ಖಾಸಗಿ ಹಾಗೂ ಸರ್ಕಾರಿ ಬಸ್ಗಳೂ ಬರುತ್ತಿದ್ದವು. ಅಗಲವಾದ ರಸ್ತೆ ಇದೆ. ಹಾಗೂ ಮತದಾರರಿಗೂ ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತುರ್ತು ಸ್ಥಳ ಪರಿಶೀಲನೆ ನಡೆಸಿ ಮತಗಟ್ಟೆಯನ್ನು ತಟ್ಟೆಕೆರೆಯಿಂದ ಪಾಲದಳ ಅಂಗನವಾಡಿ ಕಟ್ಟಡಕ್ಕೆ ವರ್ಗಾಯಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಲ್ಲವೇ ಮತಗಟ್ಟೆ 234 ರಲ್ಲಿ ಯಾರೂ ಮತದಾನ ಮಾಡದೆ ಬಹಿಷ್ಕಾರ ಮಾಡುವದಾಗಿ ಎಚ್ಚರಿಸಿದ್ದಾರೆ.
ಇದೀಗ ಸಿದ್ಧಪಡಿಸಲಾದ ನೂತನ ಮತದಾರರ ಪಟ್ಟಿಯಲ್ಲಿ ನಿಧನ ಹೊಂದಿದವರ ಹೆಸರು ತೆಗೆದು ಹಾಕಿಲ್ಲ. ಊರು ಬಿಟ್ಟವರ ಹೆಸರೂ ಹಾಗೆಯೇ ಇದ್ದು ಅಧಿಕಾರಿಗಳು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿರುವ ಬಗ್ಗೆ ಈ ಭಾಗದ ಪ್ರಮುಖರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉದ್ದೇಶಿತ ತಟ್ಟೆಕೆರೆ ಮತಗಟ್ಟೆಯ ಸಾಧಕ ಬಾಧಕದ ಬಗ್ಗೆ ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ನಿಟ್ಟೂರು ಗ್ರಾ.ಪಂ.ಯ ಜಾಗಲೆ ವಾರ್ಡ್ ಸದಸ್ಯ ಚೆಕ್ಕೇರ ಸೂರ್ಯ ಅಯ್ಯಪ್ಪ, ಜಾಗಲೆ ಆಶ್ರಮ ಶಾಲಾ ಭೂ ಮಾಲೀಕ, ಬಾಳೆಲೆ ಎಪಿಎಂಸಿಪಿಎಸ್ ಹಾಗೂ ಬಾಳೆಲೆ ವಿಜಯಲಕ್ಷ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಸ್ಥಳೀಯ ಸಮಾಜ ಸೇವಕರು, ಲಯನ್ಸ್ ಕ್ಲಬ್ನ ವಲಯಾಧಿಕಾರಿ ಮಾಪಂಗಡ ಯಮುನಾ ಚಂಗಪ್ಪ ಅವರುಗಳು ಪಾಲದಳ ಅಂಗನವಾಡಿ ಕಟ್ಟಡಕ್ಕೆ ಮತಗಟ್ಟೆಯನ್ನು ಸ್ಥಳಾಂತರಿಸಲು ಒತ್ತಾಯಿಸಿದ್ದಾರೆ.
ಪಾಲದಳದಲ್ಲಿ ಇಂದು ಮಾಧ್ಯಮಕ್ಕೆ ಅವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದ ಸಂದರ್ಭ ಪ್ರಮುಖರಾದ ಕಾಯಮಾಡ ರಾಜ, ಮಲಚೀರ ದೇವಯ್ಯ, ಅಲೇಮಾಡ ಸತೀಶ್, ಜಾಲಿ, ರಘು, ಫಣಿ ಯರವರ ಗಂಗೆ, ಪಾಲ, ರಮೇಶ್, ಜೆ.ಕೆ.ತಿಮ್ಮಿ ಮುಂತಾದವರು ಉಪಸ್ಥಿತರಿದ್ದರು.