ಮಡಿಕೇರಿ, ಏ.5: ಮಡಿಕೇರಿಯ ಅರಣ್ಯ ಭವನದ ಬಳಿಯಲ್ಲಿನ ಕಾಡಿನಲ್ಲಿ ಮೇಯುತ್ತಿದ್ದ ಕಡವೆಗೆ ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡ ಪರಿಣಾಮ ಕಡವೆ ಸ್ಥಳದಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಮಡಿಕೇರಿ ಪೂರ್ವ ಮೀಸಲು ಅರಣ್ಯದಲ್ಲಿ ಈ ಘಟನೆ ನಡೆದಿದ್ದು, ಅಂದಾಜು 5 ವರ್ಷ ಪ್ರಾಯದ ಕಡವೆ ಸಾವಿಗೀಡಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಮಡಿಕೇರಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಮತ್ತು ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಅರಣ್ಯದ ಪಕ್ಕದಲ್ಲೇ ವಿದ್ಯುತ್ ತಂತಿ ಹಾದು ಹೋಗಿರುವದೇ ಘಟನೆಗೆ ಕಾರಣವೆಂದು ಅಧಿಕಾರಿಗಳು ತಿಳಿಸಿದ್ದಾರೆ.ಕಡವೆಯ ಕುತ್ತಿಗೆ ಭಾಗದಲ್ಲಿ ವಿದ್ಯುತ್ ಸ್ಪರ್ಶದಿಂದ ಸುಟ್ಟ ಗಾಯವಾಗಿದೆ. ದೇಹದಲ್ಲಿ ಗುಂಡೇಟಿನಂತಹ ಯಾವದೇ ಗಾಯಗಳಿಲ್ಲ, ಕಡವೆ ದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಎಫ್‍ಓ ಮಂಜುನಾಥ್ ತಿಳಿಸಿದರು. ಜಿಲ್ಲೆಯ ವಿವಿಧ ಅರಣ್ಯಗಳಲ್ಲಿ ಕಡವೆ ಸಂತತಿ ವೃದ್ದಿಯಾಗಿದೆ. (ಮೊದಲ ಪುಟದಿಂದ) ಅದರೊಂದಿಗೆ 4 ಹುಲಿಗಳು ಕೂಡ ಇಲಾಖೆ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಜಿಲ್ಲೆಯ ಅರಣ್ಯದಲ್ಲಿ ಮಾನವನ ಚಟುವಟಿಕೆ ಇಲ್ಲದಿರುವದು, ಬೇಟೆ ನಿಯಂತ್ರಣ ಮತ್ತು ಅರಣ್ಯ ಸಮೃದ್ದಿಯಾಗಿರುವದೇ ಇದಕ್ಕೆ ಕಾರಣವೆಂದು ಡಿಎಫ್‍ಓ ಮಂಜುನಾಥ್ ಅಭಿಪ್ರಾಯಪಟ್ಟರು.
ಅರಣ್ಯ ಬದಿಯಲ್ಲಿ ವಿದ್ಯುತ್ ಲೈನ್ ಹಾದುಹೋಗಿದ್ದು, ಆಹಾರ ಅರಸುತ್ತ ಬಂದ ಕಡವೆಗೆ ವಿದ್ಯುತ್ ತಂತಿ ತಗುಲಿದ್ದರಿಂದ ಅದು ಮೃತಪಟ್ಟಿದೆ. ಅರಣ್ಯ ಬದಿಯಲ್ಲಿ ಹಾದುಹೋಗುವ ವಿದ್ಯುತ್ ತಂತಿಗೆ ಪ್ಲಾಸ್ಟಿಕ್ ಪೈಪ್ ಅಳವಡಿಸಬೇಕು. ಈ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಚೆಸ್ಕಾಂಗೆ ಕ್ರಮವಹಿಸಲು ಸೂಚಿಸಲಾಗುತ್ತದೆ ಎಂದು ವನ್ಯ ಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ನೆಹರು ತಿಳಿಸಿದರು.