ಮಡಿಕೇರಿ, ಏ. 5: ಸಂಪಾಜೆಯ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಅವರ ನಿಗೂಢ ಕೊಲೆ ರಹಸ್ಯವನ್ನು ಬಯಲಿಗೆಳೆದು, ಮೂವರು ಆರೋಪಿ ಗಳನ್ನು ಬಂಧಿಸಿರುವ ಕೊಡಗು ಜಿಲ್ಲಾ ಪೊಲೀಸರ ಕಾರ್ಯದಕ್ಷತೆ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಪೊಲೀಸ್ ಹೆಚ್ಚುವರಿ ಮಹಾ ನಿರ್ದೇಶಕ ಕಮಲ್ ಪಂಥ್ ಅವರು ಶಹಬ್ಬಾಸ್ ಗಿರಿ ನೀಡಿದ್ದಾರೆ. ಚುನಾವಣೆಯ ಸೂಕ್ಷ್ಮ ಸಮಯದಲ್ಲಿ ಇಂತಹ ದುಷ್ಕøತ್ಯ ವೊಂದನ್ನು ಸಕಾಲದಲ್ಲಿ ಬೇಧಿಸಿ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಪಿ. ಸುಮನ್ ನೇತೃತ್ವದಲ್ಲಿ ಉಪ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರರಾಜ್, ಇನ್ಸ್‍ಪೆಕ್ಟರ್ ಸಿದ್ಧಯ್ಯ ಹಾಗೂ ಸಿಬ್ಬಂದಿ ತೋರಿರುವ ಕಾರ್ಯದಕ್ಷತೆಯನ್ನು ಎಡಿಜಿಪಿ ಪ್ರಶಂಶಿಸಿದ್ದಾರೆ.ಕರ್ನಾಟಕ ದಕ್ಷಿಣ ವಲಯದ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಚುನಾವಣಾ ಸಂಬಂಧ ಮೈಸೂರು ಮತ್ತು ಮಂಗಳೂರಿನಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿರುವ ಎಡಿಜಿಪಿ ಕಮಲ್ ಪಂಥ್, ರಸ್ತೆ ಅಪಘಾತ ವೆಂದು ಬಿಂಬಿಸುವ ರೀತಿಯಲ್ಲಿ ಬಾಲಚಂದ್ರ ಕಳಗಿ ಅವರನ್ನು ಸಂಚು ರೂಪಿಸಿ ಕೊಲೆಗೈದಿರುವದು ತೀರಾ ಸೂಕ್ಷ್ಮ ವಿಚಾರವೆಂದು ನೆನಪಿಸಿದ್ದಾಗಿ ಇಲಾಖೆಯ ಮೂಲ ‘ಶಕ್ತಿ’ಗೆ ತಿಳಿಸಿದೆ.
ಸಂಚುಕೋರ ಆರೋಪಿಗೆ ಮೊಬೈಲ್ : ಕಳೆದ ಅನೇಕ ತಿಂಗಳ ಹಿಂದಿನಿಂದಲೂ ಬಾಲಚಂದ್ರ ಕಳಗಿ ಕೊಲೆಗೆ ಸಂಚು ರೂಪಿಸಿರುವ ಪ್ರಮುಖ ಆರೋಪಿ; ಸಂಪತ್ ಈ ಸಂಬಂಧ ಸುಪಾರಿ ಪಡೆದಿದ್ದ ಲಾರಿ ಚಾಲಕ ಜಯನಿಗೆ (ಮೊದಲ ಪುಟದಿಂದ) ಒಂದು ಮೊಬೈಲ್ ಕೂಡ ನೀಡಿದ್ದನೆಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಅಂತೆಯೇ ಮಾ. 19 ರಂದು ಕಳಗಿ ಅವರನ್ನು ಹಿಂಬಾಲಿಸಿ ಮಡಿಕೇರಿಗೆ ಬಂದಿದ್ದ ಸಂಪತ್ ಬಳಸಿರುವ ಕಾರು (ಕೆ.ಎ. 19 ಎಂ.ಸಿ. 2687) ಇನ್ನೋರ್ವ ಆರೋಪಿ ಹರಿಪ್ರಸಾದ್‍ಗೆ ಸೇರಿದ್ದಾದರೂ, ಈ ಕಾರನ್ನು ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಈಗಾಗಲೇ ಮಾರಾಟಗೊಳಿಸಿರುವದು ಕೂಡ ತನಿಖೆಯಿಂದ ಗೊತ್ತಾಗಿದೆ.
ಮೊಬೈಲ್ ವಾಪಾಸ್ : ಮಾ. 19 ರಂದು ಬೆಳಿಗ್ಗೆ ಹರಿಪ್ರಸಾದ್ ಮಾರಾಟಗೊಳಿಸಿರುವ ಅದೇ ಕಾರಿನಲ್ಲಿ ಮಡಿಕೇರಿಗೆ ಬಂದಿದ್ದ ಸಂಪತ್, ಬಾಲಚಂದ್ರ ಕಳಗಿ ಕೊಲೆ ನಡೆಸಿದ ಬಳಿಕ; ಲಾರಿ ಚಾಲಕ ಜಯನಿಂದ ಮೊಬೈಲ್ ಹಿಂಪಡೆಯುತ್ತಾನೆ. ಕೃತ್ಯ ಎಸಗುವ ಮುನ್ನ ಮಂಗಳೂರು ರಸ್ತೆಯಲ್ಲಿರುವ ಬಾರೊಂದರಲ್ಲಿ ಸಂಪತ್ ಹಾಗೂ ಜಯ ಮದ್ಯ ಸೇವಿಸುತ್ತಾ ಸಾಕಷ್ಟು ಚರ್ಚೆ ನಡೆಸಿರುವದು ದೃಢಪಟ್ಟಿದೆ. ಈ ಕೃತ್ಯಕ್ಕೆ ಹರಿಪ್ರಸಾದ್ ಆರ್ಥಿಕ ನೆರವಿನೊಂದಿಗೆ ವಾಹನ ನೀಡಿದ್ದು, ಖಾತರಿಯಾಗಿದೆ.
ಆದರೆ ಪೊಲೀಸ್ ಮೂಲಗಳ ಪ್ರಕಾರ ಈ ಮೂವರು ಕೊಲೆ ಆರೋಪಿಗಳಿಗೂ, ಸಂಪಾಜೆಯ ಶಂಕಿತ ದಂಪತಿಗೂ ಎಲ್ಲಿಯೂ ಕೃತ್ಯಕ್ಕೆ ಸಂಬಂಧವಿರುವ ಸುಳಿವು ಲಭಿಸಿಲ್ಲ. ಬದಲಾಗಿ ಬಾಲಚಂದ್ರ ಕಳಗಿ ಜತೆಗಿನ ಸಲಿಗೆಯಿಂದ ಸಾಕಷ್ಟು ಬ್ಯಾಂಕ್ ಸಾಲ ಹೊಂದಿರುವ ಆರೋಪವಿದೆ. ಬದಲಾಗಿ ಕೊಲೆ ನಡೆದ ದಿನ ಕೂಡ ಕೊನೆ ಕ್ಷಣದ ತನಕ ಮೃತರು ಆ ದಂಪತಿ ಜತೆಯೇ ಪ್ರಯಾಣಿಸಿದ್ದರೂ, ಸಂಚುಕೋರರೊಂದಿಗೆ ಬೆರೆತಿರುವ ಅಥವಾ ಮಾತುಕತೆಯ ಬಗ್ಗೆ ನಿಖರ ಮಾಹಿತಿ ಇಲ್ಲ.
ಮಾ. 19ರ ಬೆಳಿಗ್ಗೆ ಮಡಿಕೇರಿಯ ಸುದರ್ಶನ ವೃತ್ತ ಬಳಿ ಬಾಲಚಂದ್ರ ಕಳಗಿ ಬಂದು ತಮ್ಮ ಕಾರಿನಿಂದ ಇಳಿದು, ಸಂಪಾಜೆಯ ದಂಪತಿಯ ವಾಹನದಲ್ಲಿ ಅರಸಿಕಟ್ಟೆಗೆ ಹೋಗಿರುವ ಬೆನ್ನಲ್ಲೇ, ಮೇಲಿನ ಕಾರಿನಲ್ಲಿ ಅದೇ ಸ್ಥಳಕ್ಕೆ ಬಂದಿರುವ ಸಂಪತ್ ಅನತಿ ದೂರದಲ್ಲಿ ವಾಹನ ನಿಲ್ಲಿಸಿ ಕಳಗಿ ಹಿಂತಿರುಗಿ ಬರುವ ತನಕ ಹೊಂಚು ಹಾಕುತ್ತಿದ್ದ ಸುಳಿವು ಗೋಚರಿಸಿದೆ.
ಅಂತೆಯೇ ಸಂಪಾಜೆಯ ದಂಪತಿಯೊಂದಿಗೆ ಬಾಲಚಂದ್ರ ಕಳಗಿ ಅರಸಿಕಟ್ಟೆಯ ತನಕ ತೆರಳಿ ಪೂಜೆ ಸಲ್ಲಿಸಿ, ವಾಪಾಸಾದ ಬಳಿಕ, ಸುದರ್ಶನ ವೃತ್ತದಿಂದ ತಮ್ಮ ಕಾರಿನಲ್ಲಿ ಮಡಿಕೇರಿಯಿಂದ ಮೇಕೇರಿ ಬಳಿ ತೆರಳಿ, ಅಲ್ಲಿ ವಾಹನ ನಿಲ್ಲಿಸಿ ಮತ್ತೆ ದಂಪತಿಯ ವಾಹನದಲ್ಲಿ ಮೂರ್ನಾಡುವಿನ ಪೀಠೋಪಕರಣ ಮಳಿಗೆಗೆ ತೆರಳಿ, ಅವರದ್ದೇ ವಾಹನದಲ್ಲಿ ವಾಪಾಸ್ಸಾಗಿದ್ದಾರೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಕಳಗಿ ತಮ್ಮ ವಾಹನದಲ್ಲಿ ಸಂಪಾಜೆಯತ್ತ ಹೊರಟ ವೇಳೆ, ಎದುರಿನಿಂದ ಆರೋಪಿ ಜಯ ಸಂಪತ್ ಸುಪಾರಿ ನೀಡಿದ ಪ್ರಕಾರ; ಕಳಗಿ ಕಾರಿಗೆ ತನ್ನ ಲಾರಿಯನ್ನು ಗುದ್ದಿ ಕೊಲೆ ಮಾಡಿಬಿಡುತ್ತಾನೆ. ಅಲ್ಲಿಯ ತನಕ ಎಲ್ಲವನ್ನು ಗಮನಿಸಿ ತನ್ನ ಸಂಚು ಫಲಿಸಿದ ಬಳಿಕ ಸಂಪತ್ ಪರಾರಿಯಾಗಿದ್ದಾಗಿ ಪೊಲೀಸ್ ಮೂಲಗಳು ದೃಢಪಡಿಸಿವೆ.
ಮತ್ತಷ್ಟು ಶಂಕೆ : ಈ ಮೇಲಿನ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ತನಿಖಾ ತಂಡ, ಈಗಾಗಲೇ ಸಂಪತ್, ಕೆ. ಹರಿಪ್ರಸಾದ್ ಹಾಗೂ ಜಯ ಮೂವರನ್ನು ಬಂಧಿಸಿದ್ದಾಗಿದೆ. ಆ ಬಳಿಕವೂ ಮತ್ತಷ್ಟು ಶಂಕೆ ಹುಟ್ಟಿಕೊಂಡಿದೆ.
ಧ್ವನಿ ಸುರುಳಿ : ಮೊದಲೇ ಜನವಲಯದಲ್ಲಿ ಸಂಶಯ ಹರಡಿರುವಂತೆ ಕಳಗಿ ಕೊಲೆ ಸಂಬಂಧ ಸಂಪಾಜೆಯ ದಂಪತಿ ವಿರುದ್ಧ ಕ್ರಮಕೈಗೊಳ್ಳದ ಪೊಲೀಸರ ನಡೆ ಬಗ್ಗೆ ದಿನಕ್ಕೊಂದು ಮಾತು ತೇಲಿಬರು ವಂತಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ (ಸಂಭಾಷಣೆಯಲ್ಲಿ) ಪ್ರಕಾರ ಕಳಗಿ ಹಂತಕರಿಗೂ ದ.ಕ. ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರಿಗೂ ನಿಕಟ ಸಂಬಂಧದ ಆರೋಪ ಕೇಳಿ ಬಂದಿದೆ. ಇಂತಹ ಹಲವಷ್ಟು ಸಂಶಯಗಳನ್ನು ಸಾರ್ವಜನಿಕರು ಕಳಗಿ ಸಾವಿನ ಬಳಿಕ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ಬಗ್ಗೆ ಎಡಿಜಿಪಿ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಗೆ ನಿರ್ದೇಶಿಸಿದ್ದಾರೆ ಎಂದು ಗೊತ್ತಾಗಿದೆ.
ಕಾರು ಮಾಲೀಕ ಯಾರು?: ಅಂತೆಯೇ ಪೊಲೀಸರು ಆರೋಪಿ ಗಳಿಂದ ವಶಪಡಿಸಿ ಕೊಂಡಿರುವ ‘ಸ್ವಿಫ್ಟ್’ ಕಾರು ಮಾಲೀಕ ಯಾರೆಂಬ ಶಂಕೆ ಹುಟ್ಟಿಕೊಂಡಿದೆ. ಒಂದು ಖಚಿತ ಮಾಹಿತಿ ಪ್ರಕಾರ ಕೆ.ಎ. 19 ಎಂ. ಸಿ.2687 ನೋಂದಾಣಿ ಸಂಖ್ಯೆಯ ಕಾರು ಪ್ರಸಕ್ತ ಆರೋಪಿ ಹರಿಪ್ರಸಾದ್ ಹೆಸರಿನಲ್ಲಿದೆ. ಆದರೆ ಈತ ಈ ಕಾರನ್ನು ಈಗಾಗಲೇ ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಮಾರಾಟಗೊಳಿಸಿರುವದು ಬೆಳಕಿಗೆ ಬಂದಿದೆ.
ಹೀಗಾಗಿ ಪ್ರಸಕ್ತ ಆರೋಪಿ ಹರಿಪ್ರಸಾದ್‍ನಿಂದ ಖರೀದಿಸಿರುವ ಸ್ವಿಫ್ಟ್ ಕಾರಿನ ಈಗಿನ ಮಾಲೀಕರು ತಮ್ಮ ಹೆಸರಿಗೆ ನೋಂದಾಯಿಸಿ ಕೊಂಡು ದಾಖಲಾತಿ ವರ್ಗಾಯಿಸಿ ಕೊಳ್ಳುವ ಮುನ್ನ ಅದು ಪೊಲೀಸರ ವಶವಾಗಿದೆ. ಕೃತ್ಯಕ್ಕೆ ನಾಲ್ಕಾರು ದಿನಗಳ ಮುನ್ನವಷ್ಟೇ, ಮಂಗ ಳೂರಿನ ವ್ಯಕ್ತಿ ಈ ಕಾರನ್ನು ಆರೋಪಿಯಿಂದ ಖರೀದಿಸಿದ್ದಾರೆ ಎಂದು ಗೊತ್ತಾಗಿದೆ.