ಮಡಿಕೇರಿ, ಏ. 5: ಚುನಾವಣೆ ಘೋಷಣೆಯ ಮುನ್ನಾ ದಿನವಷ್ಟೇ ಮಡಿಕೇರಿ ತಾಲೂಕು ಕಚೇರಿಗೆ ಜಿಲ್ಲೆಯ ಜವಾಬ್ದಾರಿಯುತ ಜನಪ್ರತಿನಿಧಿಗಳೇ ಮುತ್ತಿಗೆ ಹಾಕಿ, ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಪ್ರಸಂಗ ಎದುರಾಯಿತು. ಆ ಬೆನ್ನಲ್ಲೇ ತಾಲೂಕು ಕಚೇರಿ ಕೆಲಸಗಳ ಬಗ್ಗೆ ಮೇಲಿಂದ ಮೇಲೆ ಸಾರ್ವಜನಿಕ ದೂರುಗಳು ಬರುತ್ತಿರುವ ಹಿನ್ನೆಲೆ ತಿಳಿಯಲು ಪ್ರಯತ್ನಿಸಲಾಯಿತು.ವಾಸ್ತವ ತಿಳಿಯುವ ಪ್ರಯತ್ನವನ್ನು ‘ಶಕ್ತಿ’ ಮುಂದುವರೆಸಿ, ತಾಲೂಕು ಕಚೇರಿಯ ಒಳ ಹೊಕ್ಕಾಗ ಬಹುತೇಕ ಕುರ್ಚಿಗಳು ಖಾಲಿಯಾಗಿದ್ದವು. ಸಾರ್ವಜನಿಕರು ದೈನಂದಿನ ಕೆಲಸಗಳಿಗೆ ಇತ್ತ ಧಾವಿಸಿ ಒಂದೆಡೆಯಿಂದ ಮತ್ತೊಂದು ಕೋಣೆಗೆ ಅಲೆದಾಡಿ, ಒಂದಿಷ್ಟು ಅಸಮಾಧಾನದೊಂದಿಗೆ ಗೊಣಗುತ್ತಾ, ಬರಿಗೈನಲ್ಲಿ ಹಿಂತಿರುಗುತ್ತಿದ್ದ ದೃಶ್ಯ ಸಾಮಾನ್ಯವೆನಿಸಿತು.

ನಿಖರ ಕಾರಣ: ಸದಾ ಕಂದಾಯ ಇಲಾಖೆಯಿಂದ ಅವಶ್ಯವಾಗಿ ಆಗಬೇಕಿರುವ ಭೂದಾಖಲೆಗಳು ಸೇರಿದಂತೆ ವಿವಿಧ ಅರ್ಜಿ ನಮೂನೆಗಳ ದೃಢೀಕರಣ, ಕಳೆದ ಪ್ರಕೃತಿ ವಿಕೋಪ ಸಂದರ್ಭ ಸಂಭವಿಸಿರುವ ಆಸ್ತಿ - ಪಾಸ್ತಿ ನಷ್ಟ ಪರಿಹಾರಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ರೈತರ ಖಾತೆಗೆ ಸಹಾಯಧನ ಇತ್ಯಾದಿ ಸಮಸ್ಯೆಗಳ ಗೊಂದಲದಲ್ಲಿ ಅಲೆಯುವವರೂ ಬಹುಮಂದಿ ಇಲ್ಲಿದ್ದರು. ಅವರುಗಳ ಅಸಮಾಧಾನಕ್ಕೆ ಕಾರಣ ತಿಳಿಯಲಾಗಿ, ಈ ತಾಲೂಕು ಕಚೇರಿಗೆ ಸರಕಾರ ಮಂಜೂರು ನೀಡಿರುವ 89 ಮಂದಿ ಉದ್ಯೋಗಿಗಳ ಪೈಕಿ ಕೇವಲ 47 ಮಂದಿ ಕರ್ತವ್ಯದೊಂದಿಗೆ 36 ಹುದ್ದೆಗಳು ಖಾಲಿ ಗೋಚರಿಸಿತು. ಕಚೇರಿಯ ಮುಖ್ಯರೆನಿಸಿರುವ ತಹಶೀಲ್ದಾರರು ಸಹಜವಾಗಿ ಚುನಾವಣಾ ಕೆಲಸಗಳಿಗೆ ಓಡಾಡುತ್ತಿದ್ದರೆ, ಈ ಕಚೇರಿಯ ಆರೆಂಟು ಸಿಬ್ಬಂದಿ ಜಿಲ್ಲಾ ಆಡಳಿತ ಭವನಕ್ಕೆ ನಿಯೋಜನೆಗೊಂಡಿರುವದು ಗೋಚರಿಸಿತು. ಇನ್ನು ಸಾಕಷ್ಟು ಕುರ್ಚಿಗಳಿಗೆ ಸಿಬ್ಬಂದಿಗಳಿಲ್ಲದೆ ಬರಿದಾಗಿರುವ ಅಂಶ ಬೆಳಕಿಗೆ ಬಂತು.

36 ಹುದ್ದೆ ಖಾಲಿ : ದ್ವಿತೀಯ ಶ್ರೇಣಿ ತಹಶೀಲ್ದಾರ್ ಸೇರಿದಂತೆ ಈ ಕಚೇರಿಯಲ್ಲಿ ಯಾರೊಬ್ಬರೂ ಶಿರಸ್ತೇದಾರರಿಲ್ಲದೆ, ಮಂಜೂರಾಗಿರುವ ಮೂರು ಹುದ್ದೆಗಳು ಖಾಲಿಯಾಗಿರುವದು ಕಂಡು ಬಂತು. ಅಂತೆಯೇ ಮೂವರು ಉಪ ತಹಶೀಲ್ದಾರ್ ಹುದ್ದೆಗಳಿಗೂ ಯಾರೊಬ್ಬರೂ ನೇಮಕಗೊಳ್ಳ ದಿರುವದು ಗೋಚರಿಸಿತು. ಇನ್ನು ಪ್ರಥಮ ದರ್ಜೆ ಸಹಾಯಕರ 7 ಮಂದಿಯ ಪೈಕಿ ನಾಲ್ವರು ಕರ್ತವ್ಯ ದೊಂದಿಗೆ ಮೂರು ಹುದ್ದೆ ಖಾಲಿಯಾಗಿದೆ.

ಕಂದಾಯ ಇಲಾಖೆ ಅಥವಾ ತಾಲೂಕು ಕಚೇರಿಗಳಲ್ಲಿ ಅವಶ್ಯಕ ಕೆಲಸ ನಿರ್ವಹಿಸಬೇಕಾದ 7 ಮಂದಿ ನಿರೀಕ್ಷಕರ ಪೈಕಿ ಕೇವಲ ಇಬ್ಬರು ಕಂದಾಯ ನಿರೀಕ್ಷಕರಿದ್ದು, ಐದು ಸ್ಥಾನಗಳು ಭರ್ತಿಗೊಳ್ಳದೇ ಇರುವದು ಸ್ಪಷ್ಟವಾಯಿತು. ಇತ್ತ ದ್ವಿತೀಯ ದರ್ಜೆ ಸಹಾಯಕರ ಹದಿನೆಂಟು

(ಮೊದಲ ಪುಟದಿಂದ) ಹುದ್ದೆಗಳಲ್ಲಿ ಬರೋಬ್ಬರಿ 10 ಹುದ್ದೆಗಳು ಖಾಲಿ ಬಿದ್ದಿದ್ದು, ಎಂಟು ಮಂದಿಯಷ್ಟೇ ಕರ್ತವ್ಯದಲ್ಲಿರುವ ಅಂಶ ಬೆಳಕಿಗೆ ಬಂದಿತು.

ಮಾತ್ರವಲ್ಲದೆ 40 ಮಂದಿ ಗ್ರಾಮ ಲೆಕ್ಕಿಗರಲ್ಲಿ 34 ಮಂದಿ ಕರ್ತವ್ಯದೊಂದಿಗೆ 6 ಹುದ್ದೆ ಖಾಲಿ ಕಂಡು ಬಂದಿದ್ದು, ಕಚೇರಿ ವಾಹನ ಚಾಲಕ, ಬೆರಳಚ್ಚುಗಾರರ ಖಾಲಿ ಹುದ್ದೆಗಳ ನಡುವೆ, ನಾಲ್ಕನೇ ದರ್ಜೆ ನೌಕರರು 7 ಮಂದಿ ಪೈಕಿ ನಾಲ್ವರು ಮಾತ್ರ ಕರ್ತವ್ಯದಲ್ಲಿದ್ದು, ಮೂರು ಹುದ್ದೆ ಭರ್ತಿಗೊಳ್ಳದಿರುವದು ಸ್ಪಷ್ಟವಾಯಿತು. ಪ್ರಸಕ್ತ ಚುನಾವಣೆ ಕೆಲಸ ಕಾರ್ಯಗಳ ನಡುವೆ ಇರುವಷ್ಟು ಮಂದಿ ಒತ್ತಡದಲ್ಲಿ ಕಾರ್ಯೋನ್ಮುಖ ರಾಗುವಂತಾದರೆ, ಸಾರ್ವಜನಿಕ ಕೆಲಸಗಳಿಗೆ ಚುನಾವಣೆ ಮುಗಿಯುವ ತನಕ ಯಾರೊಬ್ಬರೂ ಲಭಿಸದ ಗಂಭೀರ ಪರಿಸ್ಥಿತಿ ಎದುರಾಗಿದೆ.

ಇದು ಕೇವಲ ಮಡಿಕೇರಿ ತಾಲೂಕು ಕಚೇರಿಗೆ ಸೀಮಿತ ಸಮಸ್ಯೆಯಾಗಿರದೆ, ಇಡೀ ರಾಜ್ಯದ ಬಹುಪಾಲು ತಾಲೂಕು ಕಚೇರಿಗಳ ಸಾಮಾನ್ಯ ಪರಿಸ್ಥಿತಿಯಾಗಿದೆ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಬಹುತೇಕ ಸರಕಾರಿ ಇಲಾಖೆಗಳ ಕಚೇರಿಗಳಲ್ಲಿ ಮಂಜೂರಾತಿ ಹುದ್ದೆಗಿಂತಲೂ ಸರಿ ಸುಮಾರು ಶೇ. 50 ರಷ್ಟು ನೌಕರರ ಕೊರತೆ ಎದುರಿಸುವಂತಾಗಿದೆ ಎಂದು ಮಾಹಿತಿ ಲಭಿಸಿದೆ.