ಭಾಗಮಂಡಲ, ಏ. 5: ಕಳೆದ ಕೆಲವು ದಿನಗಳಿಂದ ತಲಕಾವೇರಿ ವನ್ಯಧಾಮದ ಮೂಲೆಮೊಟ್ಟೆ ಎಂಬಲ್ಲಿ ಅನ್ಯ ರಾಜ್ಯದ ಸಿನಿಮಾ ಸಂಸ್ಥೆ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ತಾ. 2ರಿಂದ ತಾ. 6ರ ತನಕ ಚಿತ್ರೀಕರಣಕ್ಕೆ ಆದೇಶ ನೀಡಿದ್ದು, ಇದರಂತೆ ಕೇರಳ ಮೂಲದ ಸಿನಿಮಾ ಚಿತ್ರೀಕರಣ ತಂಡವೊಂದು ಚಲನಚಿತ್ರ ಚಿತ್ರೀಕರಣ ನಡೆಸುತ್ತಿದೆ. ಇದು ಕಾನೂನು ಬಾಹಿರ ಹಾಗೂ ವನ್ಯ ಜೀವಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ, ಕೊಡಗಿನಲ್ಲಿ ವನ್ಯ ಧಾಮದೊಳಗೆ ಚಾರಣ ಮತ್ತು ಅಕ್ರಮ ಪ್ರವೇಶಕ್ಕೆ ಕಳೆದ ಫೆಬ್ರವರಿಯಿಂದ ನಿಷೇಧ ಕೂಡ ಇದೆ ಎಂದು ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ಜಯ ಸ್ಥಳಕ್ಕೆ ದೌಡಾಯಿಸಿ ಚಿತ್ರೀಕರಣಕ್ಕೆ ತಡೆ ಒಡ್ಡಿ, ವನ್ಯ ಧಾಮದೊಳಗಿನಿಂದ ವಾಹನ ಹಾಗೂ ಚಿತ್ರೀಕರಣ ತಂಡವನ್ನು ಹೊರಕಳುಹಿಸಿದ್ದು, ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಇಲಾಖೆ ಇಕ್ಕಟ್ಟಿಗೆ ಸಿಲುಕಿದಂತಿದೆ.ಕಳೆದ ನಾಲ್ಕು ದಿನಗಳಿಂದ ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶದಂತೆ ಚಿತ್ರೀಕರಣ ಮಾಡಲು ಅನುಮತಿ ನೀಡಿ ಇದೀಗ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಗಡಿಬಿಡಿಯಲ್ಲಿ ತಲಕಾವೇರಿ ಗೆ ತೆರಳಿ ಚಿತ್ರೀಕರಣ ನಡೆಸುತ್ತಿದ್ದ ತಂಡವನ್ನು ಹೊರಕಳುಹಿಸಿದ
(ಮೊದಲ ಪುಟದಿಂದ) ಹಿಂದಿನ ಮರ್ಮವೇನು; ಹಾಗಾದರೆ ಇಲಾಖೆ ಯಾವ ಒತ್ತಡಕ್ಕೆ ಮಣಿದು ಅನುಮತಿ ನೀಡಿತು? ಎಂಬ ಪ್ರಶ್ನೆಗೆ ಇಲಾಖೆಯ ಹಿರಿಯ ಅಧಿಕಾರಿಗಳೇ ಉತ್ತರಿಸಬೇಕಿದೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯ ಜೀವಿ) ಹೊರಡಿಸಿರುವ ಆದೇಶ ದನ್ವಯ ಮಲೆಯಾಳಂ ಭಾಷಾ ಚಲನಚಿತ್ರ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು .ಈ ಬಗ್ಗೆ ‘ಶಕ್ತಿ’ ಪತ್ರಿಕೆಯಲ್ಲಿ ವರದಿ ಹಾಗೂ ಪರಿಸರ ಪ್ರೇಮಿಗಳಿಂದ ವ್ಯಾಪಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಾನು ಖುದ್ದಾಗಿ ತೆರಳಿ ಚಿತ್ರೀಕರಣ ಸ್ಥಗಿತಗೊಳಿಸಿ ಸ್ಥಳದಿಂದ ಹೊರ ಕಳುಹಿಸಿದ್ದು ಇಲಾಖೆಯ ಸಿಬ್ಬಂದಿಗಳನ್ನು ಸ್ಥಳದಲ್ಲಿಯೇ ನಿಯೋಜಿಸಲಾಗಿದೆ ಎಂದು ಡಿಎಫ್‍ಓ ಜಯ ಪ್ರತಿಕ್ರಿಯಿಸಿದ್ದಾರೆ.