ಮಡಿಕೇರಿ, ಏ.5 :ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯನ್ನು ಸುವ್ಯವಸ್ಥಿತವಾಗಿ ನಿರ್ವಹಿಸುವ ಉದ್ದೇಶದಿಂದ, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಸರ್ಕಾರಿ ವಾಹನಗಳ ಹೊರತಾಗಿಯೂ ಸುಮಾರು 400 ಕ್ಕೂ ಹೆಚ್ಚು ಖಾಸಗಿ ವಾಹನಗಳನ್ನು ಚುನಾವಣಾ ಕರ್ತವ್ಯಕ್ಕೆ ಉಪಯೋಗಿಸಿಕೊಳ್ಳಲು ನಿರ್ಧರಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಟ್ಟು 240 ಕ್ಕೂ ಹೆಚ್ಚು ವಾಹನಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಕಾನೂನು ಸುವ್ಯವಸ್ಥೆಗಾಗಿ ಪೊಲೀಸ್ ಇಲಾಖೆಗೆ ಸಹ ವಾಹನಗಳನ್ನು ಒದಗಿಸಲಾಗುತ್ತಿದೆ. ಅದೇ ರೀತಿ ವಿಶೇಷಚೇತನರು ಹಾಗೂ ಹಿರಿಯ ಅಶಕ್ತ ನಾಗರಿಕರು ಮನೆಯಿಂದ ಮತಗಟ್ಟೆಗೆ ಬರಲು ಮತ್ತು ಹಿಂತಿರುಗಲು ಅನುಕೂಲವಾಗುವಂತೆ ಇದೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ 70 ಕ್ಕೂ ಹೆಚ್ಚು ಆಟೋರಿಕ್ಷಾ ಮತ್ತು 76 ಕ್ಕೂ ಹೆಚ್ಚು (ಮೊದಲ ಪುಟದಿಂದ) ಜೀಪ್‍ಗಳನ್ನು ಸಹ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಚುನಾವಣಾ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ಖಾಸಗಿ ವಾಹನಗಳ ಚಾಲಕರು ಕರ್ತವ್ಯ ನಿರತ ಸ್ಥಳದಲ್ಲಿಯೇ ಮತದಾನದ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ (ಇಡಿಸಿ) ನೀಡಲು ವ್ಯವಸ್ಥೆಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ವಾಹನಗಳ ಚಾಲಕರು ಸಾರಿಗೆ ಕಚೇರಿಯಲ್ಲಿ ಅಂಚೆ ಮತಪತ್ರ ಹಾಗೂ ಇಡಿಸಿ ನೀಡಿಕೆ ಸಂಬಂಧ ನೋಡೆಲ್ ಅಧಿಕಾರಿಯಾಗಿ ನೇಮಕಗೊಂಡಿರುವ, ದೀನನಾಥ್, ಇವರನ್ನು ಸಾರಿಗೆ ಕಚೇರಿಯಲ್ಲಿ ಅವರ ಚುನಾವಣಾ ಗುರುತಿನ ಚೀಟಿ, ನಿಗದಿತ ನಮೂನೆ 12/ 12ಎ ನ್ನು ಆದ್ಯತಾ ಆದೇಶ ಪ್ರತಿಯೊಂದಿಗೆ ಸಂಪರ್ಕಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಅವರ ಮೊಬೈಲ್ ದೂರವಾಣಿ ಸಂಖ್ಯೆ: 9482099045 ಸಂಪರ್ಕಿಸಬಹುದಾಗಿದೆ.

ಇದರ ಹೊರತಾಗಿಯೂ ಸಾರಿಗೆ ಇಲಾಖೆಯ ಅಧಿಕಾರಿಗಳು ವಾಹನ ಪಡೆಯಲು ಬರುವ ಸಂದರ್ಭದಲ್ಲಿಯೂ ಆದೇಶದ ಜೊತೆಗೆ ನಿಗದಿತ ನಮೂನೆ 12/ 12ಎ ನ್ನು ಸಹ ವಿತರಿಸಲು ವ್ಯವಸ್ಥೆಗೊಳಿಸಲಾಗಿದ್ದು, ಎಲ್ಲಾ ವಾಹನ ಚಾಲಕರು ಸ್ಥಳದಲ್ಲಿಯೇ ಗುರುತಿನ ಚೀಟಿ ಮತ್ತು ಅದರ ಜೆರಾಕ್ಸ್ ಪ್ರತಿ ಹೊಂದಿದ್ದಲ್ಲಿ ನಮೂನೆ 12/ 12ಎ ಮತ್ತು ಆದೇಶದ ಪ್ರತಿಯನ್ನು ಸ್ಥಳದಲ್ಲಿಯೇ ಸ್ವೀಕರಿಸಲಾಗುವದು. ಚಾಲಕರು ಆದೇಶ ಜಾರಿಗೊಳಿಸುವ ಸಂದರ್ಭದಲ್ಲಿ ಗುರುತಿನ ಚೀಟಿ ಇಟ್ಟುಕೊಂಡು, ಇದರ ಸದುಪಯೋಗ ಪಡೆಯುವಂತೆ ಸೂಚಿಸಿದ್ದಾರೆ.

ಇದೇ ಮೊದಲ ಬಾರಿಗೆ ವಿಶೇಷಚೇತನರು ಹಾಗೂ ಹಿರಿಯ ಅಶಕ್ತ ನಾಗರಿಕರನ್ನು ಕರೆತರಲು ಆಟೋರಿಕ್ಷಾ, ಜೀಪ್‍ಗಳ ಬಳಕೆ ಮಾಡಿಕೊಳ್ಳುತ್ತಿರುವದರಿಂದ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಿ, ಸೌಜನ್ಯಯುತವಾಗಿ ಕರ್ತವ್ಯ ನಿರ್ವಹಿಸಬೇಕು. ಎಲ್ಲಾ ವಾಹನ ಚಾಲಕರು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ನಂತರ ಸರ್ಕಾರಿ ನೌಕರನಂತೆ ಕರ್ತವ್ಯ ನಿರ್ವಹಿಸಬೇಕಿದ್ದು, ಯಾವದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವಂತಿಲ್ಲ. ಹಾಗೂ ವಾಹನಗಳ ಮೇಲೆ ಯಾವದೇ ಚುನಾವಣಾ ಪ್ರಚಾರದ ಸ್ಟಿಕ್ಕರ್ಸ್ ಅಂಟಿಸುವಂತಿಲ್ಲ. ನಿಗದಿತ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ನಿಯೋಜಿಸಿದ ಸ್ಥಳದಲ್ಲಿ ಹಾಜರಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.