ಕೂಡಿಗೆ, ಏ 5: ಕೂಡಿಗೆ ಗ್ರಾಮ ಪಂಚಾಯತಿ 1 ನೇ ವಾರ್ಡ್ ನ 84 ಸಂತ್ರಸ್ತ ಕುಟುಂಬದವರಿಗೆ ಇನ್ನೂ ಕೂಡ ಪರಿಹಾರದ ಹಣ ಬಾರದ ಹಿನ್ನಲೆಯಲ್ಲಿ ಕೂಡಿಗೆ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

ಕಳೆದ ಆಗಸ್ಟ್ ತಿಂಗಳಿಂದ ಕೇವಲ 3, 800 ರೂಗಳನ್ನು ಮಾತ್ರ ನೀಡಲಾಗಿದೆ. ಇನ್ನುಳಿದ ಬಾಕಿ 50,000 ಸಾವಿರ ರೂ ಇದುವರೆಗೆ ದೊರೆತಿಲ್ಲ ಎಂದು ನೊಂದ ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡರು., ಪ್ರತಿಭಟನೆ ಮೂಲಕ ಗ್ರಾಮ ಲೆಕ್ಕಾಧಿಕಾರಿಗೆ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಾರ್ಡ್‍ನ ಪ್ರಮುಖರಾದ ಬಾಲಕೃಷ್ಣ, ಕುಮಾರ, ನಾರಾಯಣ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ಪರಿಹಾರದ ಅರ್ಜಿಗಳು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳ ಮಟ್ಟಕ್ಕೆ ತಲುಪಿವೆ ಎಂದು ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಸಂಜೆ ವೇಳೆಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಜವರೇಗೌಡ ಅವರು ಪರಿಹಾರ ಒದಗಿಸುವ ಭರವಸೆ ನೀಡಿದರಲ್ಲದೆ, ಚುನಾವಣಾ ಬಹಿಷ್ಕಾರ ನಿರ್ಧಾರವನ್ನು ಹಿಂಪಡೆಯುವಂತೆ ಮನವಿ ಮಾಡಿದರು.