ಶ್ರೀಮಂಗಲ, ಏ. 5: ಕಳೆದ ಮಳೆಗಾಲದಲ್ಲಿ ಬೆಳೆ ನಷ್ಟಕ್ಕೆ ತುತ್ತಾಗಿ ಪರಿಹಾರಕ್ಕಾಗಿ ಸಲ್ಲಿಸಿದ್ದ ಅರ್ಜಿಗಳಲ್ಲಿ 14 ಸಾವಿರ ಅರ್ಜಿಗಳಿಗೆ ಪರಿಹಾರ ಪಾವತಿಸಲು ಕ್ರಮಕೈಗೊಳ್ಳಲÁಗಿದೆ. 2014-15ರ ಸಾಲಿನ ಬೆಳೆ ನಷ್ಟಕ್ಕೆ ಬೆಳೆಗಾರರ ಅರ್ಜಿಗಳಿಗೆ ಪಾವತಿಸಬೇಕಾದ ಪರಿಹಾರದ ಬಗ್ಗೆ, ಅಲ್ಲದೆ, ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವ ಬಗ್ಗೆ ವರದಿ ತರಿಸಿಕೊಂಡು ಪರಿಶೀಲಿಸ ಲಾಗುವದೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭರವಸೆ ನೀಡಿದರು.

ಕೊಡಗು ಬೆಳೆಗಾರರ ಒಕ್ಕೂಟದ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಅವರು ಈ ಮಾಹಿತಿ ನೀಡಿದರು. ನದಿಗಳಲ್ಲಿ ಪಂಪ್ ಸೆಟ್ ಬಳಸುವದನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಬಗ್ಗೆ ಬೆಳೆಗಾರರ ಒಕ್ಕೂಟದ ನಿಯೋಗ ಜಿಲ್ಲಾಧಿಕಾರಿಯವರ ಗಮನ ಸೆಳೆದು ಕಾಫಿ, ಹಾಗೂ ಕರಿಮೆಣಸು ಬೆಳೆ ರಕ್ಷಣೆಗೆ ನದಿ ತೋಡುಗಳಿಂದ ನೀರು ಬಳಸುವದು ಅನಿವಾರ್ಯವಾಗಿದೆ. ಇದಕ್ಕೆ ತಡೆಮಾಡಬಾರದು, ಜಿಲ್ಲೆಯ ಎಲ್ಲ ನದಿಗಳಲ್ಲಿ ನೀರಿನ ಸಂಗ್ರಹಕ್ಕಾಗಿ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಅಗತ್ಯ ಕ್ರಮಕೈಗೊಂಡಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಬೇಸಿಗೆಯಲ್ಲಿ ಕುಸಿಯದಂತೆ ತಡೆಯಬಹುದು ಹಾಗೂ ಬೆಳೆಗಾರರು ತಮ್ಮ ಬೆಳೆ ರಕ್ಷಣೆಗೆ ನೀರು ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಈ ಬಗ್ಗೆ ಗ್ರಾ.ಪಂ.ಗಳಲ್ಲಿ ಕ್ರೀಯಾಯೋಜನೆಗಳನ್ನು ಮಾಡಿ ಜಿ.ಪಂ.ಗೆ ಕಳುಹಿಸಿ ಚೆಕ್ ಡ್ಯಾಂ ನಿರ್ಮಿಸಲು ಅವಕಾಶವಿದೆ. ನಾನು ಈ ಹಿಂದೆ ತುಮಕೂರು ಹಾಗೂ ರಾಮನಗರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ನದಿಗಳಿಗೆ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಜಿ.ಪಂ ಕಾರ್ಯನಿರ್ವಹಣಾಧಿಕಾರಿಯವರ ಕಾರ್ಯವ್ಯಾಪ್ತಿಗೆ ಇದು ಬರುತ್ತದೆ. ಕನಿಷ್ಟ ರೂ. 20 ರಿಂದ 25 ಲಕ್ಷ ಚೆಕ್ ಡ್ಯಾಂಗೆ ಅನುದಾನ ವಿನಿಯೋಗಿಸಲು ಅವಕಾಶವಿದೆ. ಈ ಬಗ್ಗೆ ಸರಕಾರದಿಂದ ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿಯವರಿಗೆ ಬೆಳೆಗಾರರ ಒಕ್ಕೂಟದ ನಿಯೋಗವು ಸಲ್ಲಿಸಿದ ಮನವಿಯಲ್ಲಿ ಕಳೆದ ಮಳೆಗಾ¯ದಲ್ಲಿ ಅತಿವೃಷ್ಟಿಗೆ ತುತ್ತಾಗಿ ಕಾಫಿ, ಕರಿಮೆಣಸು, ಅಡಿಕೆ, ಭತ್ತ ಫಸಲು ನಷ್ಟವಾಗಿದೆ. ಇದೀಗ ಪ್ರಸಕ್ತ ವರ್ಷ ಸಕಾಲಕ್ಕೆ ಮಳೆ ಬಾರದೆ, ಕಳೆದ 6 ತಿಂಗಳಿನಿಂದ ತೀವ್ರ ಬಿಸಿಲಿನಿಂದ ಬೆಳೆಗಳಿಗೆ ನಷ್ಟ ಉಂಟಾಗಿದೆ. ಇದರಿಂದ ಮುಂದಿನ ಸಾಲಿನ ಇವೆಲ್ಲಾ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿದೆ. ಕೊಡಗು ಜಿಲ್ಲೆಯನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಸರಕಾರದಿಂದ ರೈತರು ಹಾಗೂ ಬೆಳೆಗಾರರಿಗೆ ಸೂಕ್ತ ನೆರವು ನೀಡಲು ಕ್ರಮಕೈಗೊಳ್ಳಬೇಕು.

2018ರ ಮುಂಗಾರುವಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಾಫಿ, ಕರಿಮೆಣಸು, ಅಡಿಕೆ, ಭತ್ತದ ಬೆಳೆ ಬಾರೀ ಪ್ರಮಾಣದಲ್ಲಿ ನಷ್ಟವಾಗಿದ್ದು, ಇದುವರೆಗೆ ಇದಕ್ಕೆ ಪರಿಹಾರ ಕೋರಿ ಸಲ್ಲಿಸಿದ ಬೆಳೆಗಾರರ ಅರ್ಜಿಗಳಿಗೆ ಪರಿಹಾರ ವಿತರಿಸಬೇಕು.

2014-15ರ ಸಾಲಿನಲ್ಲಿ ಅತಿವೃಷ್ಟಿಗೆ ತುತ್ತಾಗಿ ಕಾಫಿ, ಕರಿಮೆಣಸು, ಅಡಿಕೆ ಹಾಗೂ ಭತ್ತದ ಬೆಳೆ ಬಾರೀ ನಷ್ಟವಾಗಿತ್ತು. ಇದಕ್ಕೆ ಪರಿಹಾರಕ್ಕಾಗಿ ಬೆಳೆಗಾರರು ಸಲ್ಲಿಸಿದ್ದ ಅರ್ಜಿಗಳಿಗೆ ಪರಿಹಾರ ವಿತರಣೆಯಾಗಿರುವದಿಲ್ಲ. ಜಿಲ್ಲಾಡಳಿತವು ಪರಿಹಾರ ವಿತರಣೆಗಾಗಿ ರೂ. 22 ಕೋಟಿ ಅನುದಾನ ಮಂಜೂತಿರಾತಿಗಾಗಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಈ ಬಗ್ಗೆ ಪರಿಶೀಲಿಸಿ ಬಾಕಿ ಇರುವ ಪರಿಹಾರವನ್ನು ಪಾವತಿಸಬೇಕು.

ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಬರದಿದ್ದರೆ, ಮುಂದಿನ ಕಾಫಿ ಬೆಳೆಗಾಗಿ ಹೂ ಅರಳಿಸಲು ಹಾಗೂ ಕರಿಮೆಣಸು ಬಳ್ಳಿಗಳ ರಕ್ಷಣೆಗೆ ನೀರು ಹಾಯಿಸುವದು ಅನಿವಾರ್ಯ. ಆದರೆ, ಜಿಲ್ಲಾಡಳಿತವು ನದಿಗಳ ನೀರು ಬಳಸಿಕೊಂಡು ನೀರು ಹಾಯಿಸದಂತೆ ಆದೇಶ ಮಾಡಿದೆ. ನದಿ ನೀರುಗಳ ಬಳಕೆಗೆ ತಡೆ ಮಾಡುವ ಬದಲು ಚೆಕ್ ಡ್ಯಾಂಗಳನ್ನು ನಿರ್ಮಿಸಿ ಬೇಸಿಗೆಯಲ್ಲಿ ನದಿ ಬರಡಾಗದಂತೆ ತಡೆಗಟ್ಟಲು ಹಾಗೂ ಸ್ಥಳೀಯ ಬೆಳೆಗಾರರು ನೀರು ಬಳಸಿಕೊಳ್ಳಲು ಸೂಕ್ತ ಕ್ರಮಕೈಗೊಳ್ಳಬೇಕು.

ಕೊಡಗಿನ ನದಿ, ತೋಡು ತುಂಬಿ ಹರಿಯಲು ಹಾಗೂ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು ಭತ್ತದ ಗದ್ದೆಗಳಲ್ಲಿ ಕೃಷಿ ಅಗತ್ಯವಾಗಿದೆ. ನಾನಾ ಕಾರಣಗಳಿಂದ ಬಿಟ್ಟು ಹೋಗಿರುವ ಭತ್ತದ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಗಮನ ಸೆಳೆಯಲಾಗಿದೆ.

ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್‍ಅಪ್ಪಯ್ಯ, ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್‍ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಂಡ ದಾದದೇವಯ್ಯ, ಖಜಾಂಚಿ ಮಾಣೀರ ವಿಜಯ್‍ನಂಜಪ್ಪ, ಸಲಹೆಗಾರ ಚೆಪ್ಪುಡೀರ ಶೆರಿಸುಬ್ಬಯ್ಯ, ಸದಸ್ಯರುಗಳಾದ ಅರಮಾಣಮಾಡ ಸತೀಶ್‍ದೇವಯ್ಯ, ಐಚೆಟ್ಟೀರ ರಂಜಿ, ಐಚೆಟ್ಟೀರ ಸುಬ್ಬಯ್ಯ, ಐಚೆಟ್ಟೀರ ರೋಮಲ್ ಮತ್ತಿತರರು ಹಾಜರಿದ್ದರು.