ಸೋಮವಾರಪೇಟೆ, ಏ.4: ಸಮೀಪದ ಕುಸುಬೂರು ಹಳ್ಳದಿಣ್ಣೆ ಗ್ರಾಮದ ಶ್ರೀ ಮುನೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ ತಾ. 5 ಮತ್ತು 6ರಂದು ಶ್ರೀ ಮುನೇಶ್ವರ ದೇವರ 35ನೇ ವರ್ಷದ ವಾರ್ಷಿಕ ಪೂಜೋತ್ಸವ ನಡೆಯಲಿದೆ.
ತಾ. 5ರಂದು ಸಂಜೆ 5 ಗಂಟೆಗೆ ವಾರ್ಷಿಕ ಪೂಜೋತ್ಸವಕ್ಕೆ ಚಾಲನೆ ದೊರೆಯಲಿದ್ದು, 5.30ಕ್ಕೆ ವಿವಿಧ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ತಾ. 6ರಂದು ಬೆಳಿಗ್ಗೆ 7 ಗಂಟೆಗೆ ಮುನೇಶ್ವರ ಗುಡಿಯಲ್ಲಿ ಅರ್ಚಕ ಬಸವಕುಮಾರ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಸಂಕಲ್ಪ ಪೂಜೆ, ಬೇವು ಬೆಲ್ಲ ವಿತರಣೆ, ಗಂಗೆ ಪೂಜೆ, ಮೆರವಣಿಗೆ, ಸೊಪ್ಪಿನ ಬಸವಣ್ಣ ದೇವರಿಗೆ ಪೂಜೆ, ಕಳಸ ಮೆರವಣಿಗೆ, ಗ್ರಾಮ ದೇವತೆ ಪೂಜೆಗಳು ನಡೆಯಲಿವೆ.
10 ಗಂಟೆಗೆ ಶ್ರೀಮುನೇಶ್ವರ ದೇವರ ಪೂಜೆ, ಭಜನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, 12.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿಯ ಬಿ.ಎ. ಭಾಸ್ಕರ್ ತಿಳಿಸಿದ್ದಾರೆ.