ಮಡಿಕೇರಿ, ಏ. 4: 17ನೇ ಲೋಕಾಸಭಾ ಚುನಾವಣೆಗೆ ಕ್ಷಣಗಣನೆ ಇದ್ದರೂ ಬಿಜೆಪಿಯನ್ನು ಮಣಿಸಲು ಇನ್ನೂ ಮೈತ್ರಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಇನ್ನೂ ಜಿಲ್ಲೆಯ ಮತದಾರರ ಮನೆ ಬಾಗಿಲಿಗೆ ತೆರಳದೆ ಇರುವದು ಆಶ್ಚರ್ಯಯನ್ನುಂಟು ಮಾಡಿದೆ.

ಕೊಡಗು ಜಿಲ್ಲೆಯಲ್ಲಿ ಬಿಜೆಪಿಯವರು ಒಂದು ಸುತ್ತಿನ ಪ್ರಚಾರದೊಂದಿಗೆ ಮತ ಬೇಟೆಯನ್ನು ಪೂರ್ಣಗೊಳಿಸಿ ಮತ್ತೆ ಎರಡನೇ ಸುತ್ತಿನ ಮತ ಬೇಟೆ ಆರಂಭಿಸಿದ್ದಾರೆ. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರು ಇನ್ನೂ ‘ಫೀಲ್ಡಿಗೆ’ ಇಳಿಯದಿರುವದು ಕುತೂಹಲದೊಂದಿಗೆ ಆಶ್ಚರ್ಯ ಮೂಡಿಸಿದೆ. ಇಲ್ಲಿ ಇಷ್ಟವಿಲ್ಲವೋ, ಕಾಲಕೂಡಿ ಬರಲಿಲ್ಲವೋ, ಜೆಡಿಎಸ್‍ನವರು ಕರೆಯಲೆಂದು ಕಾಂಗ್ರೆಸ್‍ನವರು ಕಾಯುತ್ತಿದ್ದಾರೋ, ಅಥವಾ ಕಾಂಗ್ರೆಸ್‍ನವರು ಕರೆಯಲೆಂದು ಜೆಡಿಎಸ್‍ನವರು ಕಾಯುತ್ತಿದ್ದಾರೋ, ಅಥವಾ ಮೈತ್ರಿ ಪಕ್ಷಗಳು ಒಟ್ಟಾಗಿ ಮತದಾರರ ಮನೆ ಬಾಗಿಲಿಗೆ ತೆರಳಲಿದ್ದಾರೋ, ಯಾವದೂ ಸ್ಪಷ್ಟವಾಗುತ್ತಿಲ್ಲ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಕೇವಲ ಜಿಲ್ಲಾ ಸಮಿತಿಗಳನ್ನು ರಚಿಸುವದರಲ್ಲೇ ಮಗ್ನವಾದಂತಿದೆ. ಈ ಎರಡೂ ಪಕ್ಷಗಳ ಅಧ್ಯಕ್ಷರುಗಳಲ್ಲಿ, ಪಕ್ಷಗಳ ಮುಖಂಡರುಗಳಲ್ಲಿ, ನಾಯಕರುಗಳಲ್ಲಿ ಮತ್ತು ಕಾರ್ಯಕರ್ತರುಗಳಲ್ಲಿ ಯಾರಲ್ಲೂ ಚುನಾವಣಾ ಹುಮ್ಮಸ್ಸು, ಉಲ್ಲಾಸ, ಚಟುವಟಿಕೆ, ನಮ್ಮ ಪಕ್ಷದ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಬೇಕೆಂಬ ಸವಾಲು ಕಾಣುತ್ತಿಲ್ಲ. ಯಾರೂ ತಲೆಕೆಡಿಸಿಕೊಳ್ಳುವದು ಕಾಣುತ್ತಿಲ್ಲ.

ವೀಳ್ಯ ನೀಡಿ ಒಪ್ಪಂದವಾಗಿದ್ದರೂ ಇನ್ನೂ ಕರೆದಿಲ್ಲ... ಕರೆಯುತ್ತಿಲ್ಲ ಎಂಬ ಅಪವಾದ

ಲೋಕಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪರಸ್ಪರ ಸಂಘಟಿತರಾಗಿ ಎದುರಾಳಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರನ್ನು ಸೋಲಿಸಬೇಕೆಂದು ಸಂಕಲ್ಪ ಮಾಡಿಕೊಂಡ ಕಾಂಗ್ರೆಸ್ ಪಕ್ಷ ಕೆಲವು ದಿನಗಳ ಹಿಂದೆ ಮಡಿಕೇರಿ ನಗರದಲ್ಲಿ ನಡೆದ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಕೆ.ಎಂ. ಗಣೇಶ್ ಅವರು ಅಧಿಕಾರ ಸ್ವೀಕಾರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಪಕ್ಷಕ್ಕೆ ವೀಳ್ಯ ನೀಡಿ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದರೂ ‘ನಮ್ಮನ್ನು ಕರೆಯಲಿಲ್ಲ, ನಮ್ಮನ್ನು ಯಾರೂ ಕರೆಯುತ್ತಿಲ್ಲ’ ಎಂದು ಮೌನಕ್ಕೆ ಶರಣಾದಂತೆ ಕಂಡು ಬರುತ್ತಿದೆ.

ತಾ. 5 ರಿಂದ ಜಂಟಿಯಾಗಿ ಚಟುವಟಿಕೆ ಆರಂಭ-ಮಂಜುನಾಥ್‍ಕುಮಾರ್

ನಮ್ಮ ಪಕ್ಷವು ಜೆಡಿಎಸ್ ಪಕ್ಷದೊಂದಿಗೆ ಜಂಟಿಯಾಗಿ ಪ್ರಚಾರದೊಂದಿಗೆ ಮತ ಯಾಚನೆಯನ್ನು ತಾ. 5 ರಿಂದ ಆರಂಭಿಸುವದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ‘ಶಕ್ತಿ’ಯೊಂದಿಗೆ ಹೇಳಿದ್ದಾರೆ.

ಚುನಾವಣೆ ಪ್ರಯುಕ್ತ ಪ್ರಚಾರ ಮತ್ತು ಮತಯಾಚನೆಗೆ ಸಂಬಂಧಿಸಿದಂತೆ ನಾವು ಈಗಾಗಲೇ ಜಿಲ್ಲಾ ಸಮಿತಿ ರಚನೆಯಲ್ಲಿ ನಿರತರಾಗಿದ್ದೇವೆ. ತಾ. 5 ರ ನಂತರ ನಮ್ಮ ಪಕ್ಷ ಜೆಡಿಎಸ್‍ನೊಂದಿಗೆ ಜಂಟಿಯಾಗಿ ಫೀಲ್ಡಿಗೆ ಇಳಿಯಲಿದೆ ಎಂದಿದ್ದಾರೆ.

ಈಗಾಗಲೇ ನಮ್ಮ ಪಕ್ಷದಿಂದ 4 ಬಾರಿ ಡಿಸಿಸಿ ಸಭೆ, ವಿವಿಧ ಮುಂಚೂಣಿ ಘಟಕಗಳ ಸಭೆ, ಪರಿಶಿಷ್ಟ ಜಾತಿ-ಪಂಗಡಗಳ ಸಮಿತಿ ಮತ್ತು ಮಹಿಳಾ ಘಟಕಗಳ ಸಭೆಯನ್ನು ಕರೆದು ಚುನಾವಣೆಯನ್ನು ಎದುರಿಸಲು ಸಜ್ಜಾಗುವಂತೆ ಕ್ರಮ ವಹಿಸಲಾಗಿದೆ.

ಈ ಲೋಕಾಸಭಾ ಚುನಾವಣೆ ಯನ್ನು ಅತ್ಯಂತ ಗಂಭೀರವಾಗಿ ಮತ್ತು ಪರಿಣಾಮ ಕಾರಿಯಾಗಿ ಪರಿಗಣಿಸ ಲಾಗಿದ್ದು, ಈ ನಿಟ್ಟಿನಲ್ಲಿ ನಾವು ಜಿಲ್ಲೆಯ ಎಲ್ಲಾ ಬೂತ್ ಮಟ್ಟಗಳಲ್ಲಿ ಪಕ್ಷದ ಕಾರ್ಯಕರ್ತರು ಸಜ್ಜಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ಮಾಜಿ ಸಚಿವ ಮತ್ತು ಜೆಡಿಎಸ್ ನಾಯಕರಾದ ಬಿ.ಎ. ಜೀವಿಜಯ ಮತ್ತು ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಸದಸ್ಯೆ ಕೆ.ಪಿ. ಚಂದ್ರಕಲಾ ಅವರ ನೇತೃತ್ವದಲ್ಲಿ ಮೈತ್ರಿ ಪಕ್ಷಗಳ ಕಾರ್ಯಕರ್ತರು ಮತ್ತು ಬೆಂಬಲಿಗರು ಮತ ಯಾಚನೆ ಮತ್ತು ಪ್ರಚಾರ ಮಾಡುವದಾಗಿ ತಿಳಿಸಿದ್ದಾರೆ.

ನಮ್ಮನ್ನು ಕಾಂಗ್ರೆಸ್‍ನವರು ಮತಯಾಚನೆಗೆ ಕರೆಯಲಿಲ ್ಲ- ಕೆ.ಎಂ. ಗಣೇಶ್

ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರನ್ನು ಸೋಲಿಸಲು ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ನಮ್ಮ ಪಕ್ಷ ಜೆಡಿಎಸ್ ಟೊಂಕ ಕಟ್ಟಿದ್ದರೂ ಇನ್ನೂ ಕಾಂಗ್ರೆಸ್ ಪಕ್ಷದವರು ನಮ್ಮನ್ನು ಮತಯಾಚನೆಗೆ ಮತ್ತು ಪ್ರಚಾರ ಕೆಲಸ ಕಾರ್ಯಗಳಿಗೆ ಆಹ್ವಾನಿಸಲಿಲ್ಲ.

ನಾವೀಗಾಗಲೇ ನಮ್ಮ ಪಕ್ಷದ ಜಿಲ್ಲಾ ಮಟ್ಟದ ಸಮಿತಿಯ ರಚನೆಯಲ್ಲಿ ತೊಡಗಿದ್ದು, ಪಟ್ಟಿಗೆ ಅಂಕಿತಕ್ಕಾಗಿ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್ ಅವರ ಬಳಿಗೆ ಕಳುಹಿಸಲಾಗಿದೆ.

ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಚುನಾವಣಾ ಪ್ರಚಾರ ಮತ್ತು ಮತಯಾಚನೆಗೆ ಸದಾ ಸಿದ್ಧರಿದ್ದೇವೆ. ಕಾಂಗ್ರೆಸ್‍ನವರು ಕರೆಯಬೇಕಷ್ಟೇ. ಅವರು ಆಹ್ವಾನಿಸಿ ದೊಡನೇ ತೆರಳಿ ಸಂಘಟಿತರಾಗಿ ಚುನಾವಣಾ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಲಿದ್ದೇವೆ ಎಂದಿದ್ದಾರೆ.

- ಶ್ರೀಧರ್