*ಸಿದ್ದಾಪುರ, ಏ. 4: ಲೋಕಸಭೆ ಚುನಾವಣೆ ಹಿನ್ನೆಲೆ ಸೋಮವಾರ ಪೇಟೆ ತಾಲೂಕು ಚೆಟ್ಟಳ್ಳಿ ಮತ್ತು ನೆಲ್ಲಿ ಹುದಿಕೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಚುನಾವಣಾ ಭಾಷಣ ಮಾಡಿದರು. ಈ ಚುನಾವಣೆ ಜಾತಿ, ಭೇದ, ಧರ್ಮ ಮುಂದಿಟ್ಟು ನಡೆಯುತ್ತಿರುವ ಚುನಾವಣೆಯಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಮತ್ತು ರಾಷ್ಟ್ರಾಭಿವೃದ್ಧಿಯೇ ದ್ಯೇಯ ಮತ್ತು ಧರ್ಮ ಎಂಬ ಘೋಷವಾಕ್ಯದಡಿಯಲ್ಲಿ ನಡೆಯುತ್ತಿರುವ ಚುನಾವಣೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಉಚ್ಚರಿಸಿದರು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಟಿಪ್ಪು ಜಯಂತಿ ಯಾರ ಹೊಟ್ಟೆಗೂ ಅನ್ನ ತರಲಿಲ್ಲ. ಬದಲಿಗೆ ಜನರಲ್ಲಿ ವಿಭಜನೆಯ ನೀತಿಯನ್ನು ಅನುಷ್ಠಾನಗೊಳಿಸಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಯಾವದೇ ಜಾತಿ, ಧರ್ಮ ಮೇಲು-ಕೀಳು ನೋಡದೆ ಸರ್ವರ ವಿಕಾಸ ಮತ್ತು ಬಡತನ ಮುಕ್ತ ಹೆಜ್ಜೆ ಇರಿಸಿದರು. ಸರ್ವರ ವಿಕಾಸ ಎಂದರೆ ಕೊಡಗಿಗೆ ಬೇಡವಾದ ಟಿಪ್ಪು ಜಯಂತಿ ಮಾಡಿ ವೋಟು ಎಣಿಸುವದಲ್ಲ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದ ಉಜ್ವಲ ಯೋಜನೆಯಿಂದ 6 ಕೋಟಿ 90 ಲಕ್ಷ ಬಡತನ ರೇಖೆಗಿಂತ ಕೆಳಗಿರುವವರು ಉಚಿತ ಅಡುಗೆ ಅನಿಲ ಪಡೆದುಕೊಂಡಿದ್ದಾರೆ ಎಂದರು. ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ, ಆಯುಷ್ಮಾನ್ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಜನತೆಗೆ ತಲಪಿದೆ ಎಂದು ಹೇಳಿದರು.
ಪಕ್ಷಗಳು ಮುಸಲ್ಮಾರನ್ನು ಮತ್ತು ಕ್ರೈಸ್ತರನ್ನು ಕೇವಲ ಓಟು ಹಾಕಿಸಿ ಕೊಳ್ಳಲು ಮಾತ್ರ ಬಳಸಿಕೊಂಡಿವೆ. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ತಮ್ಮ ಎಂದಿನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಶಾಸಕ ಅಪ್ಪಚ್ಚು ರಂಜನ್, ಬಿಜೆಪಿ ಮುಖಂಡ ಅಭಿಮನ್ಯು ಕುಮಾರ್, ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ವಿ.ಕೆ. ಲೋಕೇಶ್ ಮಾತ ನಾಡಿದರು. ಮುಂದಿನ ಅವಧಿಯಲ್ಲಿ ನರೇಂದ್ರ ಮೋದಿ ಮಂತ್ರಿ ಮಂಡಲದಲ್ಲಿ ಪ್ರತಾಪ್ ಸಿಂಹ ಮಂತ್ರಿಯಾಗಲಿದ್ದಾರೆ ಎಂದು ಶಾಸಕ ಅಪ್ಪಚ್ಚು ಸಭೆಯಲ್ಲಿ ಹೇಳಿದಾಗ ಸಭಿಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಟೀಂ ಮೋದಿ ತಂಡದ ಪದ್ಮನಾಭ ನೆಲ್ಲಿಹುದಿಕೇರಿಯಲ್ಲಿ ಸಾರ್ವಜನಿಕ ಶೌಚಾಲಯ ವಿಲ್ಲ, ಸಂಸದರು ಮೈಸೂರಿನಲ್ಲಿ ಕಾರ್ಯರೂಪಕ್ಕೆ ತಂದಂತೆ ಇ-ಶೌಚಾಲಯ ನಿರ್ಮಿಸಲು ಮನವಿ ಮಾಡಿಕೊಂಡರು. ಬಿಜೆಪಿ ಮುಖಂಡರಾದ ಬಲ್ಲಾರಂಡ ಮಣಿ ಉತ್ತಪ್ಪ, ಬಲ್ಲರಂಡ ಕಂಠಿ ಕಾರ್ಯಪ್ಪ, ಹೊಸಮನೆ ವಸಂತ್, ಶಾಜಿ, ಸತೀಶ್, ತಾಲೂಕು ಪಂಚಾಯಿತಿ ಸದಸ್ಯ ಕೆ.ಎಂ. ಜನೀಶ್, ಪುಷ್ಪಾ ಚಂಗಪ್ಪ ಹಾಗೂ ಹಿಂದೂ ಪರ ಸಂಘಟನೆಗಳ ಪ್ರವೀಣ್, ಲತೀಶ್ ರೈ, ಸಾಮಾಜಿಕ ಕಾರ್ಯಕರ್ತ ಪ್ರಜಿತ್ ಭಾಗವಹಿಸಿದ್ದರು. ಯುವ ಮೋರ್ಚಾದ ಅಧ್ಯಕ್ಷ ಸುರೇಶ್ ನೆಲ್ಲಿಕಲ್ ಸ್ವಾಗತಿಸಿ, ವಂದಿಸಿದರು. - ಸುಧಿ
ಕುಶಾಲನಗರ: ಪ್ರತಾಪ್ ಸಿಂಹ ಅವರಿಂದ ಕುಶಾಲನಗರದಲ್ಲಿ ಪ್ರಚಾರ ಸಭೆ ನಡೆಯಿತು. ಸ್ಥಳೀಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಾಪ್ ಸಿಂಹ ತಮ್ಮ ಹಿಂದಿನ ಅವಧಿಯಲ್ಲಿ ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಕೈಗೊಂಡ ಯೋಜನೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಕೊಡಗು ಮತ್ತು ಮೈಸೂರು ಕ್ಷೇತ್ರ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಪಕ್ಷ ಸಂಘಟನೆ ಬಲಿಷ್ಠವಾಗಿದ್ದು ಮೈಸೂರು ವ್ಯಾಪ್ತಿಯಲ್ಲಿ ಹೆಚ್ಚಿನ ಒತ್ತು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕೊಡಗಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವದಾಗಿ ಅವರು ತಿಳಿಸಿದರು. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿದರು. ಜಿ.ಪಂ. ಸದಸ್ಯೆ ಮಂಜುಳಾ, ತಾ.ಪಂ. ಸದಸ್ಯ ಗಣೇಶ್, ಜಿಲ್ಲಾ ಘಟಕದ ಉಪಾಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಸೋಮವಾರಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ. ವರದ, ನಗರ ಘಟಕದ ಅಧ್ಯಕ್ಷ ಕೆ.ಜಿ. ಮನು, ಪ್ರಮುಖರಾದ ಕೆ.ಕೆ. ಭೋಗಪ್ಪ, ನಿಸಾರ್ ಅಹಮ್ಮದ್, ನಿರ್ಮಲ, ಎಂ.ಡಿ. ಕೃಷ್ಣಪ್ಪ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.
ಸುಂಟಿಕೊಪ್ಪ: ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅನುದಾನದಲ್ಲಿ ಈಗಾಗಲೇ ಮೈಸೂರು-ಕೊಡಗು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಅನುದಾನ ಬಿಡುಗಡೆಗೊಳಿಸಿದಲ್ಲದೆ ಚುನಾವಣೆ ಮುಗಿದ ಕೂಡಲೇ
ರಸ್ತೆ ಕಾಮಗಾರಿ ಮುಂದುವರೆಯಲಿದೆ ಎಂದು ಎಂ.ಪಿ. ಪ್ರತಾಪ ಸಿಂಹ ಮಾಹಿತಿ ನೀಡಿದರು. ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸುಂಟಿಕೊಪ್ಪದ ಜನರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಬೈಪಾಸ್ ರಸ್ತೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಕುಶಾಲನಗರ ರೈಲ್ವೆಗಾಗಿ ಕೇಂದ್ರ ಸರಕಾರದಿಂದ ರೂ. 1854 ಲಕ್ಷದಷ್ಟು ಅನುದಾನ ಬಿಡುಗಡೆಗೊಳಿಸಿದ್ದು, ಜಾಗ ಗುರುತಿಸಲು ರಾಜ್ಯ ಸರಕಾರ ವಿಫಲವಾದರಿಂದ ಕಾಮಗಾರಿ ಕುಂಠಿತಗೊಂಡಿದೆ ಎಂದರು.
ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಮಹಾಮಳೆಗೆ ತತ್ತರಿಸಿರುವ ಜನರಿಗೆ ಪುನರ್ವಸತಿ ಕಲ್ಪಿಸಲು ಮತ್ತು ಮೃತಪಟ್ಟವರಿಗೆ ಎನ್‍ಡಿಆರ್ ಮೂಲಕ ಅನುದಾನ ಬಿಡುಗಡೆಗೊಳಿಸಲಾಗಿದೆ. ಆ ಸಮಯದಲ್ಲಿ ಸಾರ್ವಜನಿಕರಿಂದ ವಂತಿಗೆ ಪಡೆದ ಹಣವನ್ನು ರಾಜ್ಯ ಸರ್ಕಾರ ಅನಾಹುತವಾದ ಜನರಿಗೆ ನೀಡಲು ಹಿಂದೇಟು ಹಾಕುತ್ತಿದೆ ಎಂದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ತಿಳಿಸುವಂತಹ ಕೆಲಸ ಮಾಡಬೇಕಾಗಿದೆ. ಕೇಂದ್ರ ಸರ್ಕಾರದ ಮೂಲಕ ಆಗಿರುವ ಸರ್ಜಿಕಲ್ ಸ್ಟೈಕ್, ಏರ್ ಸ್ಟ್ರೈಕ್, ವೈದ್ಯಕೀಯ ಸೌಲಭ್ಯ, ರೈತರಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.
ನಮ್ಮ ಅವಧಿಯಲ್ಲಿ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಸ್ನಾತಕೋತ್ತರ ಕಾಲೇಜು ಆರಂಭಿಸಿದ್ದೇವೆ ಎಂದು ವಿವರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಎಂಎಲ್‍ಸಿ ಸುನಿಲ್ ಸುಬ್ರಮಣಿ ಮಾತನಾಡಿದರು.
ವೇದಿಕೆಯಲ್ಲಿ ವಿ.ಕೆ. ಲೋಕೇಶ್, ಕ್ಲೈವಾ ಪೊನ್ನಪ್ಪ, ದಾಸಂಡ ರಮೇಶ್, ಪಿ.ಕೆ. ಮುತ್ತಣ್ಣ ಇತರರು ಇದ್ದರು. ಅಧ್ಯಕ್ಷತೆ ಬಿಜೆಪಿ ನಗರಾಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್ ವಹಿಸಿದ್ದರು.